ಜಿಲ್ಲಾದ್ಯಂತ ಈದ್ ಮಿಲಾದ್ ಸಂಭ್ರಮ
ಯಾದಗಿರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಶುಕ್ರವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು.
ಇಸ್ಲಾಂ ಧರ್ಮದ ಸ್ಥಾಪಕ ಮಹ್ಮದ್ ಪೈಗಂಬರ್ ಹುಟ್ಟಿದ ದಿನದ ನೆನಪಿಗಾಗಿ ಆಚರಿಸುವ ಹಬ್ಬದ ಪ್ರಯುಕ್ತ ಮುಸ್ಲಿಮರು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಈದ್ಗಾ ಮೈದಾನದಲ್ಲಿ ನಮಾಜ್ ಸಲ್ಲಿಸಿ, ಅಲ್ಲಾನನ್ನು ಸ್ಮರಿಸಿದರು. ಮಧ್ಯಾಹ್ನ ಟ್ರ್ಯಾಕ್ಟರ್‌ನಲ್ಲಿ ಮಕ್ಕಾ- ಮದೀನಾ ಸ್ತಬ್ಧ ಚಿತ್ರವನ್ನಿಟ್ಟು, ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.
ಮೆರವಣಿಗೆಯಲ್ಲಿ ಮುಸ್ಲಿಂ ಸಮಾಜದ ಅಧ್ಯಕ್ಷ ಲಾಯಕ್ ಹುಸೇನ್ ಬಾದಲ್, ಮುಖಂಡರಾದ ಎ.ಸಿ.ಕಾಡ್ಲೂರ, ಮೌಲಾಲಿ ಅನಪುರ, ಚನ್ನಾರೆಡ್ಡಿ ಪಾಟೀಲ ತುನ್ನೂರ, ಶ್ರೀನಿವಾಸರೆಡ್ಡಿ ಚನ್ನೂರ ನೂರಾರು ಯುವಕರು ಪಾಲ್ಗೊಂಡಿದ್ದರು.
ಹತ್ತಿಕುಣಿಯಲ್ಲಿ ಈದ್: ಯಾದಗಿರಿ ತಾಲೂಕಿನ ಹತ್ತಿಕುಣಿ ಗ್ರಾಮದಲ್ಲಿ ಶುಕ್ರವಾರ ಮುಸ್ಲಿಮರು ಈದ್ ಮಿಲಾದ್ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಿದರು. ಬೆಳಗ್ಗೆ ಒಟ್ಟಿಗೆ ಸೇರಿ ಪರಸ್ಪರ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡರು. ವಾಹನದಲ್ಲಿ ಮಕ್ಕಾ ಮದೀನಾ ಸ್ತಬ್ಧಚಿತ್ರವನ್ನು ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು. ಮೆರವಣಿಗೆಯಲ್ಲಿ ಗ್ರಾಮದ ಮಹ್ಮದ್ ಗೌಸ್ ಇನಾಂದಾರ, ಬಂದೀಗಿಸಾಬ್, ಖುದಾನ್ಸ್, ಖಾಜಾ ಹುಸೇನ್, ಬಾದಷಾ, ಅಬ್ದುಲ್, ಡಾ.ಮಹ್ಮದ್ ಹನೀಫ್, ಮೀರಸಾಬ್ ಇದ್ದರು. ಶಹಾಪುರ, ಸುರಪುರ, ಕೆಂಭಾವಿ, ಗುರುಮಠಕಲ್ ಸೇರಿದಂತೆ ಜಿಲ್ಲೆಯ ನಗರ, ಗ್ರಾಮೀಣ ಭಾಗಗಳಲ್ಲಿ ಈದ್ ಮಿಲಾದ್ ಆಚರಿಸಲಾಯಿತು.
ಶಹಾಪುರದಲ್ಲಿ: ಈದ್ ಮಿಲಾದ್ ಪಟ್ಟಣದಲ್ಲಿ ಜರುಗಿತು. ಮಕ್ಕಾ ಮಜೀದ ಸ್ತಬ್ಧಚಿತ್ರ ಮೆರವಣಿಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು. ಖಾದ್ರಿ, ಇಸ್ಮಾಯಿಲ್ ಚಾಂದ್, ಇಬ್ರಾಹಿಂ, ರಾಜಾ, ಅಲ್ಲಾ, ರಫೀಕ ಚೌದ್ರಿ, ಲಾಲ್ ಅಹ್ಮದ್, ನಾಸೀರ ಲಲೋಟಿ ಇದ್ದರು.