ತೆರೆಮರೆಯಲ್ಲಿರುವ ಯೋಧ ಜಿಲ್ಲಾಡಳಿತಕ್ಕೆ ಕಾಣುವುದಿಲ್ಲವೇಕೆ?
ನಾರಾಯಣ ಹೆಗಡೆ
ಯಾದಗಿರಿ: ಚೀನಾ, ಪಾಕ್ ವಿರುದ್ಧ ನಡೆದ ಯುದ್ಧದಲ್ಲಿ ಹೋರಾಡಿದ ಕಲಿ ಇವರು. ಬಾಂಗ್ಲಾ ವಿಮೋಚನೆಗಾಗಿ ನಡೆದ ಯುದ್ಧದಲ್ಲೂ ಜೀವದ ಹಂಗು ತೊರೆದು ಸೆಣಸಿದ್ದಾರೆ. ಇದಕ್ಕೂ ಮುನ್ನ ಗೋವಾದಿಂದ ಪೋರ್ಚುಗೀಸರನ್ನು ಹೊರಹಾಕುವಲ್ಲಿಯೂ ಶ್ರಮಿಸಿದ್ದರು. ಒಟ್ಟಿನಲ್ಲಿ ಜೀವನದುದ್ದಕ್ಕೂ ದೇಶಕ್ಕಾಗಿ ಪ್ರಾಣ ಮುಡಿಪಾಗಿಟ್ಟ ಭಾರತದ ಹೆಮ್ಮೆಯ ಪುತ್ರ.
ದೇಶವೇ ಹೆಮ್ಮೆ ಪಡುವ ಯೋಧರೊಬ್ಬರು ನಮ್ಮ ನಡುವೆಯೇ, ನಿವೃತ್ತಿ ಜೀವನ ನಡೆಸುತ್ತಿದ್ದಾರೆ. ಆದರೆ ಇವರು ನಮ್ಮ ಸರ್ಕಾರಕ್ಕಾಗಲಿ, ಜಿಲ್ಲಾಡಳಿತಕ್ಕಾಗಲಿ ಕಾಣುತ್ತಲೇ ಇಲ್ಲ. ಗಣರಾಜ್ಯೋತ್ಸವದಂದು ಸನ್ಮಾನಿಸಲು ಮುಂದಾಗುತ್ತಿಲ್ಲ ಜಿಲ್ಲಾಡಳಿತ. ಶಹಾಪುರ ತಾಲೂಕಿನ ಕುರಕುಂದ ಗ್ರಾಮದ ಪರ್ವತರೆಡ್ಡಿ ಪೊಲೀಸ್ ಪಾಟೀಲ್ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿ ನಾಲ್ಕು ಯುದ್ಧಗಳಲ್ಲಿ ಹೋರಾಡಿದವರು. ಪಾಕ್ ವಿರುದ್ಧದ ಯುದ್ಧದಲ್ಲಿ ಸೆಣಸಿ ದೊಡ್ಡ ಹೀರೋ ಎನಿಸಿಕೊಳ್ಳಲು ಆಗ ಈಗಿನಷ್ಟು ಮಾಧ್ಯಮದ ಭರಾಟೆ ಇರಲಿಲ್ಲ. ಆದ್ದರಿಂದ ರೆಡ್ಡಿಯ ಯಶೋಗಾಥೆಗಳು ಯುದ್ಧಭೂಮಿಯಲ್ಲಿಯೇ ಕಾಣೆಯಾದವು. ಇಂಥವರನ್ನು ಇಂಥವರನ್ನು ಹುಡುಕಿ ಸನ್ಮಾನಿಸುವುದು ಜಿಲ್ಲಾಡಳಿತದ ಕರ್ತವ್ಯ.
ಗೋವಾ ವಿಮೋಚನೆ: '1939ರಲ್ಲಿ ಜನಿಸಿದ ನಾನು 1960ರಲ್ಲಿ ಭಾರತೀಯ ಸೇನೆಗೆ ಸೇರಿದೆ. ಸೇನೆಯ 7ನೇ ಫೀಲ್ಡ್ ಮೀಡಿಯಂ ರೆಜಿಮೆಂಟ್ ಆರ್ಟಿಲರಿ ಫೋರ್ಸ್ನಲ್ಲಿ ರ್ಯಾಂಕ್ ಗನ್ನರ್ ಎಂದು ಸೇವೆಗೆ ಸೇರಿದೆ. ಮೊದಲು ನಾಸಿಕ್ನಲ್ಲಿ 11 ತಿಂಗಳ ತರಬೇತಿ ನೀಡಲಾಯಿತು. ತರಬೇತಿ ಮುಗಿಯುತ್ತಿದ್ದಂತೆ ಗೋವಾ ಹಾಗೂ ಕಾರವಾರ ಸೆಕ್ಟರ್ಗೆ ಕಳುಹಿಸಲಾಯಿತು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿದ್ದರೂ ಪೋರ್ಚುಗೀಸರು ಗೋವಾದಿಂದ ಕಾಲು ಕಿತ್ತಿರಲಿಲ್ಲ. ಕೇವಲ ಒಂದೇ ದಿನದಲ್ಲಿ ಪೋರ್ಚುಗೀಸರನ್ನು ಗೋವಾದಿಂದ ಹೋರದಬ್ಬಲಾಯಿತು. ಆಗಷ್ಟೇ ಸೇನೆಗೆ ಸೇರಿದ್ದರಿಂದ ಆ ಯುದ್ಧ ಸಾಕಷ್ಟು ಅನುಭವ ನೀಡಿತು.
ಭಾರತ-ಚೀನಾ ಯುದ್ಧ: 'ಭಾರತ- ಚೀನಾ ಭಾಯಿ ಭಾಯಿ' ಎಂದು ನೆಹರು ಹೇಳುತ್ತಿದ್ದರೆ, 1962ರಲ್ಲಿ ಚೀನಾ ದೇಶ ಯುದ್ಧ ಸಾರಿತ್ತು. ಗಡಿ ಭಾಗವಾದ ಲೇಹ್ ಮತ್ತು ಲಡಾಕ್ನಲ್ಲಿ ಚೀನಾ ಸೇನೆಯೊಂದಿಗೆ ಸೆಣಸಬೇಕಾಯಿತು. ನಮ್ಮಿಂದ ಸಾಕಷ್ಟು ಪೂರ್ವ ತಯಾರಿಯೂ ಇರಲಿಲ್ಲ. 13 ದಿನಗಳು ನಡೆದ ಯುದ್ಧದಲ್ಲಿ ಭಾರತೀಯ ಸೇನೆಯ ಸಾಕಷ್ಟು ಯೋಧರು ಕಣ್ಣೆದುರಿಗೇ ವೀರ ಮರಣವನ್ನಪ್ಪಿದರು. ನಮ್ಮಲ್ಲಿ ಆಧುನಿಕ ಶಸ್ತ್ರಾಸ್ತ್ರಗಳಿರಲಿಲ್ಲ. ಗುರಿಮುಟ್ಟುವಷ್ಟು ಶಕ್ತಿ ಸೇನೆಯಲ್ಲಿ ಇರಲಿಲ್ಲ. ಆದ್ದರಿಂದ ನಾವು ಸಾಕಷ್ಟು ಭೂಪ್ರದೇಶವನ್ನು ಕಳೆದುಕೊಳ್ಳಬೇಕಾಯಿತು. ಯುದ್ಧದಿಂದ ಹಿಂದಿರುಗುವಾಗ ಸುಮಾರು 7 ದಿನಗಳ ಕಾಲ ತೀವ್ರ ಹಿಮಪಾತವಾಗಿ ನಾನು ಅನಾರೋಗ್ಯಕ್ಕೆ ಒಳಗಾಗಿದ್ದೆ.
ಇಂಡೋ-ಪಾಕ್ ಸೆಣಸು: ಅವು ನನ್ನ ಜೀವನದ ಅವಸ್ಮರಣೀಯ ದಿನಗಳು. ಭಾರತೀಯ ಸೇನೆ ಪಾಕ್ ಯೋಧರನ್ನು ಕೇವಲ 5 ದಿನಗಳಲ್ಲಿ ಹಿಮ್ಮೆಟ್ಟಿಸಿತು. ಅದರಲ್ಲಿ ನಾನೂ ಭಾಗಿಯಾಗಿದ್ದೆ ಎನ್ನುವುದೇ ಹೆಮ್ಮೆಯ ಸಂಗತಿ. ಆದರೆ ಆ 5 ದಿನಗಳ ಯುದ್ಧ ಮಾತ್ರ ಭೀಕರವಾಗಿತ್ತು. ಆಹಾರವಿಲ್ಲದೆಯೇ ವೈರಿ ಜತೆ ಸೆಣಸಬೇಕಾಯಿತು. ಪಾಕ್ ಸೈನಿಕರ ದಾಳಿಯಿಂದ ನನ್ನೊಂದಿಗಿದ್ದ ಐವರು ಒಟ್ಟಿಗೇ ಸತ್ತರು. ಆದರೂ ದೃತಿಗೆಡದೇ ಹೋರಾಟ ಮುಂದುವರಿಸಿದೆವು. ನಾನು ಗನ್ನರ್ ಆಗಿದ್ದರಿಂದ ದಿನವಿಡಿ ಸ್ಫೋಟಕ ಸಿಡಿಸುವುದೇ ನನ್ನ ಕೆಲಸವಾಗಿತ್ತು. ನೀರಡಿಕೆ ಆದರೂ ಪಾಕ್ ನೆಲದ ನೀರನ್ನು ಕೂಡ ಮುಟ್ಟಬಾರದು ಎಂಬ ರೋಷದಿಂದ ನೀರು ಕುಡಿದಿರಲಿಲ್ಲ. ಮರದ ತೊಪ್ಪಲು ತಿಂದ ದಿನಗಳೂ ಇವೆ. ಭಾರತೀಯ ಸೇನೆಯಲ್ಲೂ ಸಾಕಷ್ಟು ಸಾವುನೋವು ಸಂಭವಿಸಿದರೂ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಿದ ಕೀರ್ತಿ ಬಂತು.
ಬಾಂಗ್ಲಾ ವಿಮೋಚನೆ: ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕ್ ಇಬ್ಭಾಗವಾಗುವಾಗ ಮತ್ತೆ ಭಾರತೀಯ ಸೇನೆ ಯುದ್ಧ ಮಾಡುವಂತಾಯಿತು. ಆಗ ಪ್ರಧಾನಿಯಾಗಿದ್ದ ಇಂದಿರಾಗಾಂಧಿಯವರು ಯುದ್ಧ ಘೋಷಿಸುವ ಮುನ್ನವೇ ಸೇನೆ ಕಾರ್ಯಾಚರಣೆಗೆ ಇಳಿದಿತ್ತು. ನಂತರ ಪಾಕ್ ಸೇನೆಯನ್ನು ಹಿಮ್ಮೆಟ್ಟಿಸಲಾಯಿತು. ಆಗ ಪೂರ್ವ ಪಾಕಿಸ್ತಾನ ವಿಮೋಚನೆಯಾಗಿ ಬಾಂಗ್ಲಾ ಉದಯವಾಯಿತು. ಆದರೆ ಆ ಯುದ್ಧದಲ್ಲಿ ಎದೆಗೆ ಹಾಗೂ ಮೊಣಕಾಲಿಗೆ ಗುಂಡು ತಾಗಿ ಗಂಭೀರ ಗಾಯವಾಯಿತು. ದಿಲ್ಲಿಯ ಪ್ರತಾಪಚೌಕದಲ್ಲಿ ಸೇವೆ ಸಲ್ಲಿಸಿದೆ. ಆದರೆ ಗಾಯದಿಂದ ಸೇವೆ ಮುಂದುವರಿಸಲು ಸಾಧ್ಯವಾಗಲಿಲ್ಲ. 11 ವರ್ಷಗಳು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದ ನಾನು 1972ರಲ್ಲಿ ಅನಿವಾರ್ಯವಾಗಿ ನಿವೃತ್ತಿ ಪಡೆಯಬೇಕಾಯಿತು. ಮುಂದೆ ಮೀಸಲು ಪೊಲೀಸ್, ಎಕ್ಸೈಜ್ ಮತ್ತು ಕಸ್ಟಮ್ಸ್ ಇಲಾಖೆ ಹಾಗೂ ನಂತರ ಎಸ್ಬಿಎಚ್ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಿ, ಈಗ ನಿವೃತ್ತಿ ಜೀವನ ಸಾಗಿಸುತ್ತಿದ್ದೇನೆ ಎನ್ನುತ್ತಾರೆ ವೀರ ಯೋಧ.
ಪರ್ವತರೆಡ್ಡಿ ಅವರ ಯಶೋಗಾಥೆ ಇಂದಿನ ಯುವ ಪೀಳೆಗೆಗೆ ಹೊಸ ಚೈತನ್ಯ ನೀಡುವಂತಿದೆ. ಭಾರತೀಯ ಸೇನೆಯಲ್ಲಿದ್ದು ವೈರಿಗಳ ವಿರುದ್ಧ ಹೋರಾಡಿದ ಅವರ ಸೇವೆ ನಮಗೆ ಪಾಠ. ಇಂಥ ವೀರ ಯೋಧರನ್ನು ಗಣರಾಜ್ಯೋತ್ಸವ, ಸ್ವಾತಂತ್ರೋತ್ಸವಗಳಂದು ಸನ್ಮಾನಿಸಿದರೆ ಅವರಿಗೂ ಗೌರವ ನೀಡಿದಂತಾಗುತ್ತದೆ. ಇನ್ನು ಮುಂದಾದರೂ ದೇಶಕ್ಕಾಗಿ ಹೋರಾಡಿದ ಕಲಿಗಳನ್ನು ಗೌರವಿಸುವ ಪರಿಪಾಠವನ್ನು ಜಿಲ್ಲಾಡಳಿತ ಹಾಕಿಕೊಳ್ಳಲಿ ಎನ್ನುವುದು ಆಶಯ.