ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮತದಾನ ಮಾಡಿ: ಡಿಸಿ
ಯಾದಗಿರಿ: ಪ್ರಜಾಪ್ರಭುತ್ವವನ್ನು ಬಲಪಡಿಸಲು ಭಾರತದ ಪ್ರತಿಯೊಬ್ಬ ನಾಗರಿಕ ಕಡ್ಡಾಯವಾಗಿ ಮತ ಚಲಾಯಿಸಬೇಕೆಂದು ಜಿಲ್ಲಾಧಿಕಾರಿ ಎಫ್.ಆರ್. ಜಮಾದಾರ್ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಭಾರತ ಚುನಾವಣಾ ಆಯೋಗ ಮತ್ತು ಜಿಲ್ಲಾಡಳಿತದಿಂದ ಹಮ್ಮಿಕೊಂಡಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಿ: ಭಾರತದ ಸಂವಿಧಾನವು ಇಲ್ಲಿಯ ನಾಗರಿಕರಿಗೆ ಮತದಾನದ ಮಹತ್ವದ ಹಕ್ಕನ್ನು ನೀಡಿದೆ. 18 ವರ್ಷ ಪೂರೈಸಿದ ಪ್ರತಿಯೊಬ್ಬ ನಾಗರಿಕ ಚುನಾವಣಾ ಆಯೋಗದಿಂದ ನೀಡುವ ಕಡ್ಡಾಯವಾಗಿ ಗುರುತಿನ ಚೀಟಿ ಪಡೆದು, ತಮ್ಮ ಅಮೂಲ್ಯ ಮತ ಚಲಾಯಿಸುವ ಮೂಲಕ ಸದೃಢ ಭಾರತ ನಿರ್ಮಾಣಕ್ಕೆ ಕೈಜೋಡಿಸಬೇಕೆಂದು ಹೇಳಿದರು.
ಭಾರತದ ಚುನಾವಣಾ ಆಯೋಗದ ಸಂಸ್ಥಾಪನ ದಿನಾಚರಣೆಯನ್ನು ರಾಷ್ಟ್ರೀಯ ಮತದಾರರ ದಿನಾಚರಣೆಯನ್ನಾಗಿ ಆಚರಿಸಲಾಗುತ್ತಿದೆ. ಈ ಹಿನ್ನೆಯಲ್ಲಿ ಇಂದಿನಿಂದ ಜಿಲ್ಲೆಯಲ್ಲಿ ಗುರುತಿನ ಚೀಟಿಯನ್ನು ಅರ್ಹ ಯುವ ಜನತೆಗೆ ನೀಡುವ ಕಾರ್ಯಕ್ರಮವನ್ನು ಆರಂಭಿಸಲಾಗಿದೆ. ಯುವ ಜನತೆ ಭವಿಷ್ಯದಲ್ಲಿ ದೇಶ ಹಾಗೂ ಸಮಾಜದ ಉಜ್ವ ಭವಿಷ್ಯಕ್ಕಾಗಿ ಶ್ರಮಿಸುವ ನಾಯಕರನ್ನು ಆಯ್ಕೆ ಮಾಡಿ ಪ್ರಜಾಪ್ರಭುತ್ವ ರಾಷ್ಟ್ರವಾಗಿ ಭಾರತವನ್ನು ಬಲಪಡಿಸಲು ಕರೆ ನೀಡಿದರು.
41,519 ಹೊಸ ಮತದಾರರ ಸೇರ್ಪಡೆ: ಜಿಲ್ಲೆಯಲ್ಲಿ 7,82,241 ಮತದಾರರಿದ್ದು, ಅವರಲ್ಲಿ 3,92,780 ಪುರುಷ ಹಾಗೂ 3,89,242 ಮಹಿಳಾ ಮತದಾರರಿದ್ದಾರೆ. ಜಿಲ್ಲಾದ್ಯಂತ 945 ಮತಗಟ್ಟೆಗಳಿವೆ. ಪರಿಷ್ಕರಣೆ ಅವಧಿಯಲ್ಲಿ ಈ ವರ್ಷ 41,519 ಹೊಸ ಮತದಾರರ ಹೆಸರು ಸೇರಿಸಲಾಗಿದೆ. 764739 ಮತದಾನ ಗುರುತಿನ ಚೀಟಿಗಳಿಗೆ ಭಾವಚಿತ್ರಗಳಿದ್ದು, ಇನ್ನೂ 17,500 ಮತದಾನ ಗುರುತಿನ ಚೀಟಿಗಳಿಗೆ ಭಾವಚಿತ್ರಗಳಿಲ್ಲ. ಶೀಘ್ರದಲ್ಲಿ ಇವುಗಳಿಗೆ ಭಾವಚಿತ್ರ ಸಂಗ್ರಹಿಸಿ ವಿತರಿಸಲಾಗುವುದು ಎಂದು ತಿಳಿಸಿದರು.
ಇದೇ ವೇಳೆ ಯುವ ಮತದಾರರಿಗೆ ಚುನಾವಣೆ ಗುರುತಿನ ಚೀಟಿ ಹಾಗೂ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರಮಾಣ ಪತ್ರ ವಿತರಿಸಿದರು. ಆರಂಭದಲ್ಲಿ ಡಿಸಿ ಮತದಾನ ಪ್ರತಿಜ್ಞಾವಿಧಿ ಬೋಧಿಸಿದರು.
ಡಿಎಸ್ಪಿ ಎಸ್.ಬಿ. ಕಟ್ಟಿಮನಿ, ಅಪರ ಜಿಲ್ಲಾಧಿಕಾರಿ ಜಹೀರಾ ನಸೀಮ್, ಸಹಾಯಕ ಆಯುಕ್ತ ವಿಜಯ, ಡಿಡಿಪಿಐ ರಾಮಾಂಜನೇಯ, ತಹಸೀಲ್ದಾರ್ ಶರಣಪ್ಪ ಸತ್ಯಂಪೇಠ ಇದ್ದರು. ಇದಕ್ಕೂ ಮುನ್ನ ನಗರದಲ್ಲಿ ವಿವಿಧ ಶಾಲಾ- ಕಾಲೇಜು ವಿದ್ಯಾರ್ಥಿಗಳಿಂದ ಜಾಗೃತಿ ಜಾಥಾ ನಡೆಯಿತು. ಶಾಸ್ತ್ರಿ ಚೌಕದಲ್ಲಿ ಮಾನವ ಸರಪಳಿ ನಿರ್ಮಿಸಿ, ಅರಿವು ಮೂಡಿಸಲು ಪ್ರಯತ್ನಿಸಲಾಯಿತು.