ಹಗಲು, ರಾತ್ರಿ ಸೇವೆ ಸಲ್ಲಿಸುವ ಚಾಲಕರ ಕಾರ್ಯ ಅನನ್ಯ: ಸಚಿವ
ಯಾದಗಿರಿ: ಚಾಲಕರ ಮೇಲೆ ವಿಶ್ವಾಸವಿಟ್ಟು ಪ್ರಯಾಣಿಕರು ಸರ್ಕಾರಿ ಬಸ್ಸಿನಲ್ಲಿ ಪ್ರಯಾಣಿಸುತ್ತಾರೆ. ಹಗಲು ರಾತ್ರಿಯೆನ್ನದೇ ಕೆಲಸ ಮಾಡುವ ಚಾಲಕರ ಸೇವೆ ಅನನ್ಯ ಎಂದು ಜಿಲ್ಲಾ ಉಸ್ತುವಾರಿ ಸಚಿವ ರಾಜುಗೌಡ ಹೇಳಿದರು.
ತಾಲೂಕಿನ ಮುಂಡರಗಿ ರಸ್ತೆ ಬಳಿಯಿರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಪ್ರಾದೇಶಿಕ ಕಾರ್ಯಾಗಾರದಲ್ಲಿ ಟೈರ್ ಸಂಸ್ಕರಣಾ ಘಟಕ ಉದ್ಘಾಟನೆ ಮತ್ತು ಅಪಘಾತ ರಹಿತ ಚಾಲಕರುಗಳಿಗೆ ಬೆಳ್ಳಿ ಪದಕ ವಿತರಣಾ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಬಸ್ಸಿನಲ್ಲಿ ಪ್ರಯಾಣಿಸುವ ಎಲ್ಲ ಪ್ರಯಾಣಿಕರ ಜೀವ ವಾಹನ ಚಾಲಕನ ಕೈಯಲ್ಲಿರುತ್ತದೆ. ಆತ ಬಸ್ಸು ಚಲಾಯಿಸುವ ವೇಳೆ ಏನಾದರೂ ಎಚ್ಚರ ತಪ್ಪಿದರೆ ಅನಾಹುತ ಆಗುವುದು ಖಚಿತ. ಆದರೆ ಪ್ರಯಾಣಿಕರನ್ನು ಸುರಕ್ಷಿತವಾಗಿ ತಲುಪಿಸಿ ಚಾಲಕರು ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
ಪ್ರಾಮಾಣಿಕವಾಗಿ ಚಾಲಕರು ಸೇವೆ ಸಲ್ಲಿಸುತ್ತಿರುವ ಪರಿಣಾಮ ಪ್ರಯಾಣಿಕರು ಅವರನ್ನು ಎಂದಿಗೂ ಮರೆಯುವುದಿಲ್ಲ.
ಕಾರಣ ಅವರು ಪ್ರಾಣವನ್ನೇ ಕಾಪಾಡುತ್ತಾರೆ ಎಂಬ ಬಲವಾದ ನಂಬಿಕೆ ಅವರಲ್ಲಿ ಇರುತ್ತದೆ ಎಂದು ಹೇಳಿದರು.
ಶಾಸಕ ಡಾ.ಎ.ಬಿ.ಮಾಲಕರಡ್ಡಿ, ಚಾಲಕರು ಪ್ರಯಾಣಿಕರ ಸುರಕ್ಷತೆಗೂ ಕೂಡ ಆದ್ಯತೆ ನೀಡುತ್ತಿದ್ದಾರೆ.
ಇವರ ಸೇವೆ ಅಮೂಲ್ಯವಾಗಿದೆ ಎಂದು ಬಣ್ಣಿಸಿದರು. ಅಪಘಾತ ರಹಿತ ಚಾಲನೆ ಮಾಡಿದ ಮಲ್ಲಪ್ಪ, ಬಸವಂತರಾಯ, ಸುಲೇಮಾನ ಹಾಗೂ ಗೋವಿಂದಪ್ಪ ಅವರಿಗೆ ಬೆಳ್ಳಿ ಪದಕ ನೀಡಿ ಗೌರವಿಸಲಾಯಿತು.
ಡಾ.ವೆಂಕಟೇಶ ಗಡ್ಡಿಮನಿ, ಮರೆಮ್ಮ ಶ್ಯಾಣೆನೋರ್, ಶ್ರೇಣಿಕುಮಾರ ದೋಖಾ, ದೇವರಾಜ ನಾಯಕ, ಚಂದ್ರಶೇಖರಗೌಡ ಮಾಗನೂರ, ಬಸವರಾಜ ಕುಂಬಾರ, ಭೀಮಬಾಯಿ, ಗೌರಮ್ಮ ಕೌಲಿ, ಎಫ್.ಆರ್. ಜಮಾದಾರ, ವಿ.ಎಚ್. ಸಂತೋಷಕುಮಾರ, ಬಸವರಾಜ ಖಂಡ್ರೆ ಇತರರು ಇದ್ದರು.