ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಅಂಗನವಾಡಿ ನೌಕರರಿಂದ ನಾಳೆ ಬೆಂಗಳೂರು ಚಲೋ

Lingaraj Badiger
Updated On : 28 Jan 2013, 11:28 am

ರಾಯಚೂರು: ಪ್ರಸಕ್ತ ಬಜೆಟ್‌ನಲ್ಲಿ ರಾಜ್ಯದ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಯಕರ್ತೆಯರು ಹಾಗೂ ಸಹಾಯಕಿಯರ ಬೇಡಿಕೆ ಈಡೇರಿಕೆಗಾಗಿ ಜ.29ರಂದು ಬೆಂಗಳೂರು ಚಲೋ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಎಐಟಿಯುಸಿ ಜಿಲ್ಲಾ ಉಪಾಧ್ಯಕ್ಷ ಅಮೀರ್ ಅಲಿ ಹೇಳಿದರು.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಅಂದು ಬೆ.11ಕ್ಕೆ ಬೆಂಗಳೂರಿನ ರೈಲು ನಿಲ್ದಾಣದಿಂದ ಬೃಹತ್ ಮೆರವಣಿಗೆ ನಡೆಸಲಾಗುತ್ತದೆ. ಕಳೆದ ಅನೇಕ ವರ್ಷಗಳಿಂದ ಅಂಗನವಾಡಿ ಕಾರ್ಯಕರ್ತೆಯರು ಬಜೆಟ್ ಪೂರ್ವದಲ್ಲಿ ತಮ್ಮ ಬೇಡಿಕೆಗಳನ್ನು ಮಂಡಿಸುತ್ತಲೇ ಬಂದಿದ್ದಾರೆ. ಆದರೆ ರಾಜ್ಯ ಸರ್ಕಾರ ಮಾತ್ರ ಬೇಡಿಕೆಗಳಿಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.
ಸೇವೆ ಕಾಯಮಾತಿಗೆ ಆಗ್ರಹ: ಪ್ರಸಕ್ತ ಬಜೆಟ್‌ನಲ್ಲಿ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರನ್ನು ಕ್ರಮವಾಗಿ ಸಿ ಮತ್ತು ಡಿ ಗ್ರೂಪ್ ನೌಕರರೆಂದು ಸೇವೆ ಕಾಯಂಗೊಳಿಸಬೇಕು. ಜತೆಗೆ ಸರ್ಕಾರದ ಎಲ್ಲ ಸೌಲತ್ತುಗಳನ್ನು ನೀಡಬೇಕು. ಅಂಗನವಾಡಿ ಕಾರ್ಯಕರ್ತೆಯರಿಗೆ ಮತ್ತು ಸಹಾಯಕಿಯರಿಗೆ ಪ್ರತಿ ತಿಂಗಳು 10 ಸಾವಿರ ವೇತನವಾಗಿ ನೀಡಬೇಕೆಂದು ಪ್ರತಿಭಟನೆ ವೇಳೆ ಆಗ್ರಹಿಸಲಾಗುತ್ತದೆ ಎಂದು ಹೇಳಿದರು.
ಅಂಗನವಾಡಿ ಕಾರ್ಯಕರ್ತೆಯರಿಗೆ ಇನ್ನಿತರ ಇಲಾಖೆಗಳ ಕೆಲಸಗಳನ್ನು ವಹಿಸಬಾರದು. ಬೇರೆ ಇಲಾಖೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವುದರಿಂದ ಮಕ್ಕಳ ಪಾಲನೆ ಪೋಷಣೆಯಲ್ಲಿ ಕುಂದು ಕೊರತೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಅಂಗನವಾಡಿ ಉದ್ಯೋಗಿಗಳಿಗೆ ಬೇರೆ ಇಲಾಖೆಯ ಕೆಲಸ ಕಾರ್ಯಗಳಿಗೆ ನಿಯೋಜಿಸದಂತೆ ಒತ್ತಾಯಿಸಲಾಗುತ್ತದೆ ಎಂದರು.
ಪಿಎಫ್, ಇಎಸ್‌ಐ ಸೌಲಭ್ಯ ಕೊಡಿ: ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕು. ಮಿನಿ ಅಂಗನವಾಡಿ ಕೇಂದ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಸಮಾನ ಸಂಭಾವನೆ ನೀಡಬೇಕು. ಅವರಿಗೆ ಸಹಾಯಕಿಯರನ್ನು ನೇಮಿಸಬೇಕೆಂದು ಆಗ್ರಹಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ಆದೇಶದಂತೆ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರಿಗೆ ಆರು ತಿಂಗಳ ಹೆರಿಗೆ ರಜೆ ಮತ್ತು ಎಲ್ಲ ರೀತಿಯ ಭತ್ಯೆ ನೀಡಿಕೆ ಜಾರಿಗೆ ತರಬೇಕು. ಸಿಬ್ಬಂದಿ 60 ವರ್ಷಗಳವರೆಗೆ ಕಾರ್ಯ ನಿರ್ವಹಿಸಿ ನಿವೃತ್ತಿ ಹೊಂದಿದ ನಂತರ ಸಂಧ್ಯಾಸುರಕ್ಷಾ ಯೋಜನೆ ಅಡಿ ಒಳಪಡಿಸಿ ಸವಲತ್ತು ನೀಡುವಂತೆ ಒತ್ತಾಯಿಸುವುದಾಗಿ ತಿಳಿಸಿದರು.
ಪ್ರವಾಸ ಭತ್ಯೆ 200ಕ್ಕೆ ಹೆಚ್ಚಿಸಿ: ಅಂಗನವಾಡಿ ಉದ್ಯೋಗಿಗಳಿಗೆ ಪ್ರವಾಸ ಮತ್ತಿತರೆ ಭತ್ಯೆಯನ್ನು ದಿನಕ್ಕೆ 200ಕ್ಕೆ ಏರಿಕೆ ಮಾಡಬೇಕು. ಸದ್ಯ ವಿತರಿಸುತ್ತಿರುವ ಭತ್ಯೆ ಸಾಕಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸಿಬ್ಬಂದಿ ಮೇಲೆ ಆರ್ಥಿಕ ಹೊರೆ ತಪ್ಪಿಸಲು ಸರ್ಕಾರ ಕೂಡಲೇ ಭತ್ಯೆ ಪ್ರಮಾಣ ಹೆಚ್ಚಿಸುವಂತೆ ಬೆಂಗಳೂರು ಚಲೋ ಕಾರ್ಯಕ್ರಮದ ವೇಳೆ ಆಗ್ರಹಿಸಲಾಗುತ್ತದೆ ಎಂದು ಹೇಳಿದರು.
ಅಂಗನವಾಡಿ ಕೇಂದ್ರಗಳಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗುವ ಸಿಬ್ಬಂದಿಗೆ ಅವರ ವೇತನದ ಶೇ.50ರಷ್ಟನ್ನು ನಿವೃತ್ತಿ ವೇತನವಾಗಿ ನೀಡಬೇಕು. ಅಂಗನವಾಡಿ ಕೇಂದ್ರಗಳು ಸಂಜೆ 4ರವರೆಗೆ ಕಾರ್ಯನಿರ್ವಹಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಮಕ್ಕಳಿಗೆ ನೀಡಲಾಗುವ ಆಹಾರದ ಪ್ರಮಾಣವನ್ನು ಹೆಚ್ಚಿಸಬೇಕೆಂದು ಒತ್ತಾಯಿಸಿ ಸರ್ಕಾರಕ್ಕೆ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಈ ವೇಳೆ ಫೆಡರೇಷನ್ ಮತ್ತು ಎಐಟಿಯುಸಿ ಸಂಘಟನೆಗಳ ಪ್ರಮುಖರಾದ ಬಾಷುಮಿಯಾ, ಸಿದ್ರಾಮಯ್ಯ ಮಾನ್ವಿ, ಸಂಗಯ್ಯ ಚಿಂಚಿರಿಕಿ, ಚಂದ್ರಶೇಖರ್ ಕ್ಯಾತ್ನಟ್ಟಿ, ರೇಣುಕಾ ಶಿರವಾರ, ಲಕ್ಷ್ಮಿ ಸಿರವಾರ, ಶಾವಮ್ಮ ಲಿಂಗಸ್ಗೂರು, ವೆಂಕನಗೌಡ ಗದ್ರಟಗಿ ಸೇರಿದಂತೆ ಅನೇಕರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement