ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಜಿಲ್ಲಾಧಿಕಾರಿ ವರ್ಗಾವಣೆಗೆ ರೈತ ಸಂಘ ಆಗ್ರಹ

Lingaraj Badiger
Updated On : 30 Jan 2013, 11:04 am

ರಾಯಚೂರು: ಮಾನವಿಯ ಸರ್ಕಾರಿ ಜಮೀನಿನಲ್ಲಿ ಅವ್ಯಾಹತವಾಗಿ ಹಾಗೂ ಅಕ್ರಮವಾಗಿ ಕಲ್ಲು ಗಣಿಗಾರಿಕೆ ನಡೆಯುತ್ತಿದ್ದು ಅದನ್ನು ತಡೆಯುವತ್ತ ನಿರ್ಲಕ್ಷ್ಯ ತೋರಿರುವ ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರನ್ನು ಕೂಡಲೇ ವರ್ಗಾಯಿಸುವಂತೆ ಕರ್ನಾಟಕ ರೈತ ಸಂಘ ಆಗ್ರಹಿಸಿದೆ.
ಈ ಕುರಿತು ಪ್ರಕಟಣೆ ನೀಡಿರುವ ಸಂಘದ ರಾಜ್ಯಾಧ್ಯಕ್ಷ ಆರ್.ಮಾನಸಯ್ಯ, ಮಾನವಿ ಪಟ್ಟಣಕ್ಕೆ ಹೊಂದಿಕೊಂಡಿರುವ ಪ್ರದೇಶದಲ್ಲಿ ಅಕ್ರಮವಾಗಿ ಕಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಈ ಗಣಿಗಾರಿಕೆ ಪ್ರದೇಶದಲ್ಲಿ ಇತ್ತೀಚೆಗೆ ಸಂಭವಿಸಿದ ಸ್ಫೋಟದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಕ್ರಮ ಗಣಿಗಾರಿಕೆಯ ಬಗ್ಗೆ ತಹಸೀಲ್ದಾರರರು ವರದಿ ಸಲ್ಲಿಸಿದ್ದರೂ ಜಿಲ್ಲಾಡಳಿತ ಮೌನ ವಹಿಸಿದೆ ಎಂದು ಟೀಕಿಸಿದ್ದಾರೆ.
ಜಿಲ್ಲಾಡಳಿತ ನಿಷ್ಕ್ರಿಯ: ಜಿಲ್ಲಾಡಳಿತ ಈ ನಿಟ್ಟಿನಲ್ಲಿ ನಿಷ್ಕ್ರಿಯವಾಗಿದ್ದು, ಜಿಲ್ಲಾಧಿಕಾರಿ ಎಂ.ವಿ. ಸಾವಿತ್ರಿ ಅವರು ಕೇವಲ ಸಭೆ, ಸಮಾರಂಭಗಳಲ್ಲಿ ಪಾಲ್ಗೊಳ್ಳುವುದರಲ್ಲಿಯೇ ಕಾಲಹರಣ ಮಾಡುತ್ತಿದ್ದಾರೆ. ಆಡಳಿತ ಯಂತ್ರ ಕುಸಿತ ಕಂಡಿದೆ. ಜನರ ಸಮಸ್ಯೆಗಳಿಗೆ ಪರಿಹಾರ ದೊರೆಯುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಮಾನವಿಯಲ್ಲಿ ನಡೆಯುತ್ತಿರುವ ಕಲ್ಲು ಅಕ್ರಮ ಗಣಿಗಾರಿಕೆಯ ಬಗ್ಗೆ ರೈತ ಸಂಘ ನಿರಂತರ ಹೋರಾಟ ನಡೆಸಿ ಮಾನವಿ ತಾಲೂಕು ಆಡಳಿತಕ್ಕೆ ಅಕ್ರಮದ ಕುರಿತು ಸಮಗ್ರ ಮಾಹಿತಿ ಒದಗಿಸಿದೆ. ಗಣಿಗಾರಿಕೆಯಿಂದಾಗುತ್ತಿರುವ ಅನಾಹುತಗಳ ಬಗ್ಗೆಯೂ ಗಮನ ಸೆಳೆದಿದೆ. ಆದರೆ ಜಿಲ್ಲಾಡಳಿತ ಮಾತ್ರ ಈ ವಿಚಾರದಲ್ಲಿ ನಿರ್ಲಕ್ಷ್ಯ ತೋರಿರುವುದು ಅನುಮಾನಕ್ಕೆ ದಾರಿ ಮಾಡಿದೆ ಎಂದು ದೂರಿದ್ದಾರೆ.
ಡಿಸಿ ವರ್ಗಾವಣೆಗೆ ಒತ್ತಾಯ: ಜಿಲ್ಲಾಧಿಕಾರಿಗಳಿಗೆ ಈ ಬಗ್ಗೆ ಸ್ವತಃ ದೂರು ನೀಡಿದರೂ ಅವರು ಭೂವಿಜ್ಞಾನ ಇಲಾಖೆಗೆ ಈ ಬಗ್ಗೆ ಹೇಳಿರುವುದಾಗಿ ಉದಾಸೀನತೆ ಮೆರೆಯುತ್ತಿದ್ದಾರೆ. ನಿಸರ್ಗ ಸಂಪನ್ಮೂಲ ಹಾಗೂ ಮಾನವ ಸಂಪನ್ಮೂಲಕ್ಕೆ ಕಂಟಕಪ್ರಾಯವಾಗಿರುವ ಮಾನವಿ ಪಟ್ಟಣದ ಹೊರವಲಯದಲ್ಲಿ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯ ತಡೆಗೆ ನಿರಾಸಕ್ತಿ ತೋರುತ್ತಿರುವ ಜಿಲ್ಲಾಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಬೇಕು. ಆ ಮೂಲಕ ಅಕ್ರಮ ತಡೆಗೆ ಮುಂದಾಗಬೇಕೆಂದು ಸರ್ಕಾರವನ್ನು ಅವರು ಒತ್ತಾಯಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement