ಬಾಲ ಕಾರ್ಮಿಕರ ಕ್ರೀಡಾಕೂಟಕ್ಕೆ ಸೂಚನೆ
ರಾಯಚೂರು: ಬಾಲ ಕಾರ್ಮಿಕ ಪುನಾವಸತಿ ಶಾಲೆಗಳ ವಿದ್ಯಾರ್ಥಿಗಳು ಶಾಲೆಯ ವಾತಾವರಣದಿಂದ ಹೊರಬಂದು ಕ್ರೀಡೆಗಳಲ್ಲಿ ಪಾಲ್ಗೊಳ್ಳಬೇಕು. ಈ ನಿಟ್ಟಿನಲ್ಲಿ ಪೂರಕ ಪರಿಸರ ನಿರ್ಮಿಸುವಂತೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘದ ಅಧ್ಯಕ್ಷೆ ಎಂ.ವಿ. ಸಾವಿತ್ರಿ ಕರೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇತ್ತೀಚೆಗೆ ಕರೆದಿದ್ದ ಬಾಲ ಕಾರ್ಮಿಕ ಯೋಜನೆಯಡಿಯ ಜಿಲ್ಲಾ ಮಟ್ಟದ ಕಾರ್ಯಕಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಬಾಲ ಕಾರ್ಮಿಕ ಶಾಲೆಯ ಮಕ್ಕಳು ಹೆಚ್ಚಾಗಿ ಗ್ರಾಮೀಣ ಪ್ರದೇಶದವರಾಗಿದ್ದು, ಅವರಲ್ಲಿ ಅಡಗಿರುವ ಪ್ರತಿಭೆಯನ್ನು ಹೊರತರಲು ಅವರಿಗೆ ವಾರ್ಷಿಕ ಕ್ರೀಡಾಕೂಟ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುವಂತೆ ಸೂಚಿಸಿದರು.
ಉತ್ತಮ ಶಾಲೆ ನಡೆಸುತ್ತಿರುವ ಸಂಸ್ಥೆ, ಹಾಗು ಉತ್ತಮ ಬೋಧನೆ ಮಾಡಿದ ಶಿಕ್ಷಕರಿಗೆ ಹಾಗೂ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೂ ಬಹುಮಾನ ನೀಡುವ ಅವಶ್ಯಕತೆಯಿದೆ ಎಂದು ಹೇಳಿದರು.
ಸಹಕಾರ: ಶಿಕ್ಷಣ ಇಲಾಖೆ, ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ, ಕಾರ್ಮಿಕ ಇಲಾಖೆ, ಮಹಿಳಾ ಮಕ್ಕಳ ಕಲ್ಯಾಣ, ಸಾರಿಗೆ ಹಾಗೂ ಬಾಲ ಕಾರ್ಮಿಕ ಶಾಲೆಗಳನ್ನು ನಡೆಸುತ್ತಿರುವ ಸ್ವಯಂ ಸೇವಾ ಸಂಸ್ಥೆಗಳಿಂದ ಕ್ರೀಡಾಕೂಟ ಆಯೋಜನೆಗೆ ಯುನಿಸೆಫ್ ಜಿಲ್ಲಾ ಸಂಯೋಜಕ ರಾಘವೇಂದ್ರ ಭಟ್ ಅವರ ಸಹಕಾರ ಪಡೆಯಲು ಸೂಚಿಸಿದರು.
ನಗರದಲ್ಲಿ ಜರುಗುವ ಜಿಲ್ಲಾ ಮಟ್ಟದ ಈ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಹಬ್ಬಕ್ಕೆ ಪ್ರತಿ ಬಾಲ ಕಾರ್ಮಿಕರ ಶಾಲೆಯಿಂದ ವಾಹನಗಳನ್ನು ಆಯೋಜಿಸಿ ಮಕ್ಕಳನ್ನು ಕರೆತಂದು ಅವರನ್ನು ಸುರಕ್ಷಿತವಾಗಿ ಕರೆದುಕೊಂಡು ಹೋಗುವ ಜವಾಬ್ದಾರಿಯನ್ನು ಆಯಾ ಶಾಲೆಗಳನ್ನು ನಡೆಸುವ ಸಂಸ್ಥೆಯವರಿಗೆ ವಹಿಸಲು ಜಿಲ್ಲಾಧಿಕಾರಿಗಳು ಸಭೆಯಲ್ಲಿ ಸೂಚಿಸಿದರು.
ತಾಲೂಕು ಮಟ್ಟದಲ್ಲಿ ಮೊದಲಿಗೆ ಕಾರ್ಯಕ್ರಮ ನಿರ್ವಹಿಸಿ ಅಲ್ಲಿ ವಿಜೇತರಾದವರನ್ನು ಜಿಲ್ಲಾ ಮಟ್ಟಕ್ಕೆ ಕರೆ ತರಬೇಕು. ಬಹುಮಾನ ನೀಡುವುದು ಮತ್ತು ಕಾರ್ಯಕ್ರಮ ಆಯೋಜಿಸುವ ಬಗ್ಗೆ ಮತ್ತೊಮ್ಮೆ ಸಭೆ ನಡೆಸಿ ಅಂತಿಮ ನಿರ್ಧಾರ ಕೈಗೊಳ್ಳಲು ಬಾಲಕಾರ್ಮಿಕ ಯೋಜನಾಧಿಕಾರಿಗಳಿಗೆ ಸೂಚಿಸಿದರು.
ಬಾಲ ಕಾರ್ಮಿಕ ನಿಷೇಧ ಕಾಯ್ದೆ ಅನುಷ್ಠಾನ: ಜಿಲ್ಲೆಯಲ್ಲಿ ಬಾಲಕಾರ್ಮಿಕ ನಿಷೇಧ ಕಾಯಿದೆ ಸಮರ್ಪಕ ಜಾರಿಗೆ ವಿವಿಧ ಇಲಾಖೆಗಳ ಅಧಿಕಾರಿಗಳನ್ನು ಈಗಾಗಲೇ ನಿಯುಕ್ತಿಗೊಳಿಸಲಾಗಿದೆ. ಅವರು ಒಂದೇ ತಂಡದ ರೀತಿಯಲ್ಲಿ ಹಠಾತ್ ದಾಳಿ ನಡೆಸಬೇಕು. ಯಾವುದೇ ಮುನ್ಸೂಚನೆಗಳನ್ನು ನೀಡದೆ ಮಾಡುವ ದಾಳಿಗಳು ಪರಿಣಾಮಕಾರಿಯಾಗಿರುತ್ತವೆ. ತಿಂಗಳಲ್ಲಿ ಒಮ್ಮೆಯಾದರೂ ದಾಳಿ ನಡೆಸಿ ಪ್ರಕರಣ ದಾಖಲಿಸಬೇಕು ಎಂದು ಆದೇಶಿಸಿದರು.
ಹೋಟೆಲ್, ಧಾಬಾಗಳು, ವರ್ಕ್ಸ್ ಶಾಪ್ ಮತ್ತಿತರೆಡೆ ಬಾಲಕಾರ್ಮಿಕರ ರಕ್ಷಣೆಯ ಕಾರ್ಯವನ್ನು ನಗರಸಭೆಯ ಅಧಿಕಾರಿಗಳು ಮಾಡಬೇಕು. ತಪ್ಪಿತಸ್ಥರ ವಿರುದ್ದ ಕಾಯ್ದೆನ್ವಯ ಕ್ರಮ ಜರುಗಿಸಬೇಕು ಎಂದು ಅವರು ಸೂಚಿಸಿದರು.
ಬಾಲ ಕಾರ್ಮಿಕ ಮಕ್ಕಳನ್ನು ಮುಖ್ಯವಾಹಿನಿಗೆ ಕರೆ ತಂದು ಸರ್ಕಾರಿ ವಸತಿ ಶಾಲೆಗಳಲ್ಲಿ ಪ್ರವೇಶ ದೊರಕಿಸಿಕೊಡಲು ಪ್ರಯತ್ನಿಸಲಾಗುವುದು ಎಂದು ಜಿಲ್ಲಾಧಿಕಾರಿ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಆರ್.ಎಸ್. ನಂದಿಕೂರ, ಹಿಂದುಳಿದ ವರ್ಗಗಳ ಇಲಾಖೆಯ ಜಿಲ್ಲಾಧಿಕಾರಿ ಮಹದೇವಯ್ಯ, ಸಂಯೋಜಕ ರಾಘವೇಂದ್ರ ಭಟ್, ತಹಸೀಲ್ದಾರ್ ಆರತಿ, ಪ್ರಾದೇಶಿಕ ಸಾರಿಗೆ ಅಧಿಕಾರಿ ಸಿದ್ದಲಿಂಗಯ್ಯ, ನಗರಸಭೆಯ ಎಇಇ ಮಲ್ಲಿಕಾರ್ಜುನ, ಶಿಕ್ಷಣ, ಯುವಜನಸೇವೆ, ಕೈಗಾರಿಕೆ ಇತರ ಇಲಾಖೆಗಳ ಅಧಿಕಾರಿಗಳು ಪಾಲ್ಗೊಂಡಿದ್ದರು.