ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

3ರಿಂದ ಶ್ರೀಮದನುವ್ಯಾಖ್ಯಾನ ಸುಧಾ ಮಂಗಳ ಮಹೋತ್ಸವ

Lingaraj Badiger
Updated On : 1 Feb 2013, 11:14 am

ರಾಯಚೂರು: ಉಡುಪಿಯ ಶ್ರೀಪೇಜಾವರ ಮಠದ ಆಶ್ರಯದಲ್ಲಿ ಫೆ.3, 4 ಮತ್ತು 5 ರಂದು 31ನೇ ಶ್ರೀಮದನುವ್ಯಾಖ್ಯಾನ-ನ್ಯಾಯಸುಧಾ ಮಂಗಳ ಮಹೋತ್ಸವ ಸಮಾರಂಭ ಆಯೋಜಿಸಲಾಗಿದೆ.
 ನಗರದ ಎಲ್ ವಿಡಿ ಕಾಲೇಜಿನ ಮುಂಭಾಗದಲ್ಲಿರುವ ಯಾದವ ಸಂಘದ ಶ್ರೀಕೃಷ್ಣ ದೇವಾಲಯದ ಆವರಣದಲ್ಲಿನ ಶ್ರೀಆನಂದತೀರ್ಥ ಮಂಟಪದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಫೆ.3ರಂದು ಮಧ್ಯಾಹ್ನ 4.30ಕ್ಕೆ ಶ್ರೀಮನ್ಯಾಯ ಸುಧಾಗ್ರಂಥ ಹಾಗೂ ಶ್ರೀ ವಿಶ್ವೇಶತೀರ್ಥ ಶ್ರೀಗಳ ಶೋಭಾಯಾತ್ರೆಯು ನಗರದ ರಾಘವೇಂದ್ರಸ್ವಾಮಿಗಳ ಕಲ್ಯಾಣ ಮಂಟಪದಿಂದ ಯಾದವ ಸಂಘದ ಮೈದಾನದವರೆಗೆ ನಡೆಯಲಿದೆ.
ಪ್ರವಚನ: ನಂತರ ಸಂಜೆ 6ಕ್ಕೆ ಪ್ರವಚನ ನಡೆಯಲಿದೆ. ಶ್ರೀಸುವಿದ್ಯೇಂದ್ರತೀರ್ಥರು ಸಾನಿಧ್ಯ ವಹಿಸುವರು. ಫೆ.4ರಂದು ಬೆಳಗ್ಗೆ 9ಕ್ಕೆ ವಿದ್ಯಾರ್ಥಿಗಳಿಂದ ಸುಧಾನುವಾದ, ಪರೀಕ್ಷೆ ಮತ್ತು ವಿದ್ವಾಂಸರಿಂದ ಪ್ರವಚನ ನಡೆಯಲಿದ್ದು, ಈ ಕಾರ್ಯಕ್ರಮದ ಸಾನಿಧ್ಯವನ್ನು ಉತ್ತರಾದಿಮಠದ ಪೀಠಾಧಿಪತಿಗಳಾದ ಶ್ರೀಸತ್ಯಾತ್ಮತೀರ್ಥರು, ಪೇಜಾವರ ಮಠದ ಕಿರಿಯ ಸ್ವಾಮಿ ಶ್ರೀವಿಶ್ವಪ್ರಸನ್ನ ತೀರ್ಥರು, ಕೂಡ್ಲಿಯ ಶ್ರೀರಘುವಿಜಯತೀರ್ಥರು, ಹನಸೋಗೆಯ ಶ್ರೀವಿಶ್ವನಂದನತೀರ್ಥರು, ಬನ್ನಂಜೆ ಶ್ರೀರಾಘವೇಂದ್ರತೀರ್ಥರು, ರಾಮೋಹಳ್ಳಿಯ ಶ್ರೀವಿಶ್ವಭೂಷಣ ತೀರ್ಥರು ವಹಿಸುವರು.
ಪ್ರವಚನ ಕಾರ್ಯಕ್ರಮ: ಅದೇ ದಿನ ಮಧ್ಯಾಹ್ನ 3ರಿಂದ 5.30ರವರೆಗೆ ವಿದ್ಯಾರ್ಥಿಗಳಿಂದ ಸುಧಾನುವಾದ, ಸಂಜೆ 6ಕ್ಕೆ ವಿದ್ವಾಂಸರು ಪ್ರವಚನ ನಡೆಸಿಕೊಡುವರು. ರಾತ್ರಿ 8ಕ್ಕೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿದ್ವಾನ್ ಯು.ಶ್ರೀನಿವಾಸನ್ ಅವರು ಮೆಂಡೋಲಿನ್ ವಾದನ ಪ್ರಸ್ತುತಪಡಿಸಲಿದ್ದಾರೆ.
ಫೆ.5ರಂದು ಬೆಳಗ್ಗೆ 9.30ಕ್ಕೆ ಶ್ರೀವಿಶ್ವೇಶತೀರ್ಥರಿಂದ ಸುಧಾನುವಾದ ನಡೆಯಲಿದ್ದು, ಈ ವೇಳೆ ಮಂತ್ರಾಲಯದ ಶ್ರೀಸುಯತೀಂದ್ರತೀರ್ಥರು, ಉಡುಪಿಯ ಫಲಿಮಾರು ಮಠದ ಶ್ರೀವಿದ್ಯಾಧೀಶತೀರ್ಥ, ತಂಬಿಹಳ್ಳಿಯ ಶ್ರೀವಿದ್ಯಾಸಾಗರ ಮಾಧವತೀರ್ಥ, ಉಡುಪಿ ಭಂಡಾರಕೇರಿ ಮಠದ ಶ್ರೀವಿದ್ಯೇಶತೀರ್ಥ, ಮುಳಬಾಗಿಲಿನ ಶ್ರೀಕೇಶವನಿಧಿ ತೀರ್ಥ, ಕಾಣಿಯೂರು ಮಠದ ಶ್ರೀವಿದ್ಯಾವಲ್ಲಭ ತೀರ್ಥ, ಕಣ್ವಮಠದ ಶ್ರೀವಿದ್ಯಾಭಾಸ್ಕರ ತೀರ್ಥ ಸೇರಿದಂತೆ ಅನೇಕ ಮಠಾಧೀಶರು ಉಪಸ್ಥಿತರಿರುವರು.
 ಅಂದು ಮಧ್ಯಾಹ್ನ 12ಕ್ಕೆ ಶ್ರೀವೇದವ್ಯಾಸಪೂಜೆ, ಯತಿಪೂಜೆ, ಗುರುಕಾಣಿಕೆ, ಸುಧಾವಿದ್ಯಾರ್ಥಿಗಳ ಪುರಸ್ಕಾರ, ಸಂಜೆ 5.30ರಿಂದ ಶ್ರೀಸುಗುಣೇಂದ್ರತೀರ್ಥರ ಸಾನಿಧ್ಯದಲ್ಲಿ ಸಭಾಕಾರ್ಯಕ್ರಮ ನಡೆಯಲಿದ್ದು, ವಿದ್ವಾಂಸರಿಂದ ಪ್ರವಚನ ನೆರವೇರಲಿದೆ. ವಿವಿಧ ಮಠಾಧೀಶರ ಅನುಗ್ರಹ ಸಂದೇಶದ ನಂತರ ಸಂಜೆ 7.30ಕ್ಕೆ ಸಂಗೀತಗಾರರಾದ ಸಂಗೀತಾ ಕಟ್ಟಿ, ಅನಂತ ಕುಲಕರ್ಣಿ, ರಾಯಚೂರು ಶೇಷಗಿರಿದಾಸ್, ವೆಂಕಟೇಶ್ ಆಲ್ಕೋಡ್ ಅವರಿಂದ ದಾಸವಾಣಿ ಕಾರ್ಯಕ್ರಮ ಆಯೋಜಿಸಲಾಗಿದೆ.

ಆದಿತ್ಯ ನಾರಾಯಣ ಸಂಘಕ್ಕೆ ಭೇಟಿ
ಸಿಂಧನೂರು: ಉಡುಪಿಯ ಪೇಜಾವರ ಮಠದ ವಿಶ್ವೇಶ್ವರತೀರ್ಥ ಸ್ವಾಮೀಜಿ ರಾಯಚೂರಿಗೆ ಹೋಗುವ ದಾರಿ ಮಧ್ಯದಲ್ಲಿ ನಗರದ ಆದಿತ್ಯ ನಾರಾಯಣ ಪತ್ತಿನ ಸೌಹಾರ್ದ ಸಂಘಕ್ಕೆ ಭೇಟಿ ನೀಡಿದರು. ಸಂಘದ ಚಟುವಟಿಕೆಗಳನ್ನು ಆಲಿಸಿದ ಅವರು, ವಿಪ್ರ ನೌಕರರು ಮತ್ತು ವಿಪ್ರ ಸಮಾಜದ ಮುಖಂಡರು ಸೇರಿ ಪ್ರಾರಂಭಿಸಿರುವ ಸಹಕಾರಿ ಸಂಘದಿಂದ ಬಡವರಿಗೆ, ದೀನ ದಲಿತರಿಗೆ ನೆರವು ಒದಗಿಸುವಂತೆ ಸಲಹೆ ನೀಡಿದರು.
 ಸಂಘ  ಅಭಿವೃದ್ಧಿಗೊಳಿಸುವ ಜೊತೆಗೆ ಜನರ ಆರ್ಥಿಕ ಮಟ್ಟ ಸುಧಾರಣೆ ಮಾಡಲು ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳುವಂತೆ ಉಪದೇಶಿಸಿದರು. ಸಂಘದ ಅಧ್ಯಕ್ಷ ವೆಂಕಟೇಶ ಕೆಂಗಲ್, ನಿರ್ದೇಶಕರಾದ ವೆಂಕಟೇಶ ಪ್ರಭು, ಪಾಂಡುರಂಗರಾವ್ ದೇಸಾಯಿ, ಹನುಮೇಶ ಜಾಗೀರದಾರ, ಮಧ್ವರಾಜ್, ಅಜಯಕುಮಾರ ಕಾನಿಹಾಳ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement