ಕಸಾಪ ಮಸ್ಕಿ ಘಟಕ ಉದ್ಘಾಟನೆ
ಮಸ್ಕಿ: ಜಾಗತೀಕರಣ, ಖಾಸಗೀಕರಣ, ಉದಾರೀಕರಣದಿಂದ ದೇಶದ ಪ್ರಗತಿಯಾಗಿ ಮಾನವನ ಬದುಕು ಬದಲಾಗುತ್ತಿರುವುದು ಸಂತಸದ ವಿಷಯವಾದರೂ ಅಂತಃಕರಣ ಎಂಬುದು ಇದರ ಪ್ರಭಾವದಿಂದ ದೂರವಾಗುತ್ತಿದೆ ಎಂದು ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಕಳವಳ ವ್ಯಕ್ತಪಡಿಸಿದರು.
ಈಚೇಗೆ ಪಟ್ಟಣದ ಭ್ರಮರಾಂಬಾ ದೇವಸ್ಥಾನದಲ್ಲಿ ಮಸ್ಕಿಯ ಕಸಾಪ ಘಟಕ ಉದ್ಘಾಟಿಸಿ ಮಾತನಾಡಿ, ಕಳೆದ ದಶಕಗಳ ಹಿಂದಿನ ಸಂದರ್ಭ ಹೋಲಿಸಿದರೆ, ಸೌಲಭ್ಯಗಳ ಕೊರತೆಯಿತ್ತು. ಆದರೆ ಬದುಕು ನೆಮ್ಮದಿಯಿಂದಿತ್ತು. ಆದರೆ ಸೌಲಭ್ಯ ಬೇಕಾದಷ್ಟು ಸದ್ಯ ಲಭ್ಯವಿದ್ದರೂ ನೆಮ್ಮದಿಯಿಲ್ಲವಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.
ಸಾಹಿತ್ಯದ ಅಧ್ಯಯನ ಹಾಗೂ ಸಾಹಿತ್ಯದ ಕಾರ್ಯಕ್ರಮಗಳಲ್ಲಿ ಹೆಚ್ಚು ಭಾಗವಹಿಸುವಿಕೆಯಿಂದ ನೆಮ್ಮದಿ ಪಡೆಯಬಹುದಾಗಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ಮಹಾಂತೇಶ ಮಸ್ಕಿ ಮಾತನಾಡಿ, ಮಸ್ಕಿಯಲ್ಲಿ ನಿರಂತರ ಸಾಹಿತ್ಯಿಕ ಚಟುವಟಿಕೆ ಕೈಗೊಳ್ಳಲು ಸಾಹಿತ್ಯ ಭವನ ನಿರ್ಮಾಣಕ್ಕೆ ನಿವೇಶನವನ್ನು ಪಂಚಾಯತಿಯಿಂದ ದೊರಕಿಸಿಕೊಡುವಂತೆ ಮನವಿ ಮಾಡಿದರು.
ಜಿಪಂ ಸದಸ್ಯ ಮಹಾದೇವಪ್ಪಗೌಡ ಪೋಲೀಸ್ ಪಾಟೀಲ್, ಎಪಿಎಂಸಿ ಅಧ್ಯಕ್ಷ ಮಂಜುನಾಥ ಪಾಟೀಲ್, ತಾಪಂ ಸದಸ್ಯರಾದ ಹನುಮಂತಪ್ಪ ಮೋಚಿ, ನೀಲಮ್ಮ ಮರಳದ, ಕಸಾಪ ಮಸ್ಕಿ ಘಟಕದ ಗೌರವಾಧ್ಯಕ್ಷ ಗುಂಡಯ್ಯ ಶೆಟ್ಟಿ, ಕಸಾಪ ಮಸ್ಕಿ ಘಟಕದ ಅಧ್ಯಕ್ಷ ಗುಂಡುರಾವ್ ದೇಸಾಯಿ ಮತ್ತಿರರರಿದ್ದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಎಂ. ಅಮರೇಶ ಹಾಗೂ ಸಾಹಿತಿ ಡಾ. ಸ್ವಾಮಿರಾವ್ ಕುಲಕರ್ಣಿ ಅವರನ್ನು ಮಸ್ಕಿ ಕಸಾಪ ಘಟಕದಿಂದ ಸನ್ಮಾನಿಸಲಾಯಿತು.