ಸರ್ಕಾರಿ ನೌಕರರ ಸಂಘದ ಚುನಾವಣಾ ಅಧಿಸೂಚನೆ ಪ್ರಕಟ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.1
ಕರ್ನಾಟಕ ಸರ್ಕಾರಿ ನೌಕರರ ಸಂಘದ ಚುನಾವಣೆ ಅಧಿಸೂಚನೆಯನ್ನು ಕೇಂದ್ರ ಸಂಘದ ಅಧ್ಯಕ್ಷ ಎಲ್. ಭೈರಪ್ಪ ಅವರು ಹೊರಡಿಸಿರುವುದಾಗಿ ಸಂಘದ ತಾಲೂಕು ಅಧ್ಯಕ್ಷ ಭೀಮಪ್ಪ ನಾಯಕ ತಿಳಿಸಿದರು.
ಸ್ಥಳೀಯ ಸಂಘದ ಕಚೇರಿಯಲ್ಲಿ ಭಾನುವಾರ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ನಡೆಸಿ 2013-18ನೇ ಸಾಲಿನ ಸರ್ಕಾರಿ ನೌಕರರ ಸಂಘದ ಚುನಾವಣೆ ಅಧಿಸೂಚನೆ ಹೊರಡಿಸಿದ ಪ್ರಯುಕ್ತ ಹಲವು ವಿಷಯಗಳ ಕುರಿತು ಚರ್ಚಿಸಲಾಯಿತು.
ತಾಲೂಕಿನ ಎಲ್ಲ ಇಲಾಖೆಯ ಸದಸ್ಯತ್ವ ಹೊಂದಿದವರಿಗೆ ಮತದಾನ ಹಕ್ಕು ಮತ್ತು 3ವರ್ಷ ಸತತ ಸದಸ್ಯತ್ವ ಹೊಂದಿದವರಿಗೆ ಪ್ರತಿನಿಧಿ ಸ್ಥಾನಗಳಿಗೆ ಸ್ಪರ್ಧಿಸಲು ಬೈಲಾ ನಿಯಮಾವಳಿ ಪ್ರಕಾರ ತೀರ್ಮಾನ ತೆಗೆದುಕೊಳ್ಳಲಾಯಿತು.
ಶಿಕ್ಷಣ ಇಲಾಖೆಯ ನೌಕರರೊಬ್ಬರು ಮಾತ್ರ ಸದಸ್ಯತ್ವ ನಿರಾಕರಿಸಿದ ಪ್ರಯುಕ್ತ ಅವರ ಹೆಸರನ್ನು ಮತದಾರರ ಪಟ್ಟಿಯಿಂದ ತೆಗೆಯಲಾಗಿದ್ದು, ಉಳಿದ ಎಲ್ಲ ನೌಕರರು ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲಿದ್ದಾರೆ. ಕಾರ್ಯಕಾರಿ ಸಮಿತಿಯ ಸರ್ವಾನುಮತ ನಿರ್ಣಯದಂತೆ ಚುನಾವಣೆ ನಡೆಸಲು ಚುನಾವಣಾಧಿಕಾರಿಯನ್ನಾಗಿ ಅಮರೇಶ ತೋಪಲಮತ ಅವರನ್ನು ನೇಮಕ ಮಾಡಲಾಯಿತು.
ನೌಕರರ ಸಂಘದ ಕಾರ್ಯಕಾರಿ ಸಮಿತಿ ಚುನಾವಣೆ ಜು.22 ರಂದು ನಡೆಯಲಿದ್ದು, ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಹಾಗೂ ಕೋಶಾಧ್ಯಕ್ಷ ಸ್ಥಾನಕ್ಕೆ ಆ.1 ರಂದು ಚುನಾವಣೆ ನಡೆಸಲು ತೀರ್ಮಾನಿಸಲಾಯಿತು. ಅಧ್ಯಕ್ಷರ ಅಪ್ಪಣೆ ಮೇರೆಗೆ ಇನ್ನಿತರ ಚುನಾವಣಾ ಪ್ರಕ್ರಿಯೆಗಳ ಬಗ್ಗೆ ತೀರ್ಮಾನ ತೆಗೆದುಕೊಳ್ಳಲು ನಿರ್ಧರಿಸಲಾಯಿತು ಎಂದು ಸಂಘದ ಅಧ್ಯಕ್ಷ ಭೀಮಪ್ಪ ನಾಯಕ ತಿಳಿಸಿದ್ದಾರೆ.
ಸಭೆಯಲ್ಲಿ ಸಂಘದ ಅಮರೇಶ ಗೌಡೂರು, ಹಾಜಿಬಾಬು, ರಾಮಕೃಷ್ಣ, ಕುಮಾರಸ್ವಾಮಿ, ಹಾಜಿ ಮಲಂಗಬಾಬ, ಗುರುಸಂಗಯ್ಯ ಗಣಾಚಾರಿ, ಸಂಗಪ್ಪ ಅಡವಿಭಾವಿ, ಶಿವಶರಣಪ್ಪ, ಶಿವಯೋಗಪ್ಪ, ಗುರುಸಿದ್ದಪ್ಪ ಸೇರಿದಂತೆ ಇದ್ದರು.