ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸ್ವಸ್ಥ ಸಮಾಜದಿಂದ ದೇಶದ ಪ್ರಗತಿ: ಡಿಸಿ

Lingaraj Badiger
Updated On : 2 Jul 2013, 10:44 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.1
ಉತ್ತಮ ಸಮಾಜ ನಿರ್ಮಾಣದಿಂದ ದೇಶದ ಸಮಗ್ರ ಪ್ರಗತಿ ಸಾಧ್ಯ.ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಮಕ್ಕಳ ಸ್ವಾಸ್ಥ್ಯ ಕಾಪಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಶ್ರಮಿಸುವಂತೆ ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು ಸಲಹೆ ನೀಡಿದರು.
ನಗರದ ಕೃಷಿ ವಿಶ್ವವಿದ್ಯಾಲಯದ ಕೃಷಿ ವಿಜ್ಞಾನ ಕೇಂದ್ರದಲ್ಲಿ ಸೋಮವಾರ ಯುನಿಸೆಫ್‌ನಿಂದ ಆಯೋಜಿಸಿದ್ದ 2015ರ ಸಹಸ್ರಮಾನದ ಅಭಿವೃದ್ಧಿಯ ಗುರಿಗಳು ಎಂಬ ವಿಷಯದ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಮಹಿಳೆಯರು ಮತ್ತು ಮಕ್ಕಳ ಆರೋಗ್ಯ ರಕ್ಷಣೆಗೆ ಅನೇಕ ಯೋಜನೆಗಳನ್ನು ರೂಪಿಸುತ್ತಿದ್ದು,ಅಂಥ ಯೋಜನೆಗಳ ಅನುಷ್ಠಾನದಲ್ಲಿ ಎಲ್ಲರೂ ತೋರುತ್ತಿರುವ ನಿರ್ಲಕ್ಷ್ಯದಿಂದಾಗಿ ಯೋಜನೆಗಳ ಲಾಭ ಬಡವರಿಗೆ ತಲುಪುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿದರು.
ಶಿಕ್ಷಣ, ಆರೋಗ್ಯ ಜಾಗೃತಿ ಅವಶ್ಯ: ಮಹಿಳೆಯರು ಮತ್ತು ಮಕ್ಕಳಲ್ಲಿ ಶಿಕ್ಷಣ, ಆರೋಗ್ಯದ ಬಗ್ಗೆ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈ ಬಗ್ಗೆ ಹೆಚ್ಚಿನ ಗಮನ ನೀಡುವುದು ಅಗತ್ಯ ಎಂದ ಅವರು, ಮಹಿಳೆಯರು ಮತ್ತು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಯಿಂದ ಮಾತ್ರ ಸಮಾಜದ, ದೇಶದ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.
ಮಹಿಳೆಯರ ಮತ್ತು ಮಕ್ಕಳ ಪ್ರಗತಿಗೆ ಯೋಜನೆಗಳನ್ನು ರೂಪಿಸುವ ಮೊದಲು ಅವರ ಬೇಕು- ಬೇಡಗಳನ್ನು ಅರ್ಥೈಸಿಕೊಳ್ಳುವುದು ಅಗತ್ಯ. ಹಾಗೆಯೇ ಯೋಜನೆಗಳ ಜಾರಿಗೂ ಮುನ್ನ ಕಾನೂನಾತ್ಮಕ ತೊಡಕುಗಳ ಬಗ್ಗೆಯೂ ಅಧ್ಯಯನ ಕೈಗೊಳ್ಳುವುದು ಹೆಚ್ಚು ಸೂಕ್ತ ಎಂದು ತಿಳಿಸಿದರು.
ದೂರದೃಷ್ಟಿ ಚಿಂತನೆ ಅಗತ್ಯ: ಮುಂದಿನ ಪೀಳಿಗೆಗೆ ಆರೋಗ್ಯವಂತ ಸಮಾಜ ಕಟ್ಟಿಕೊಡುವುದು ಎಲ್ಲರ ಗುರಿಯಾಗಬೇಕು. ಸಾಮಾಜಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯವನ್ನು ಎಲ್ಲರೂ ಮಾಡಬೇಕಿದೆ. ಬಡತನ, ಹಸಿವು, ಲಿಂಗ ಅಸಮಾನತೆಯನ್ನು ಹೋಗಲಾಡಿಸುವುದು ಎಲ್ಲರ ಆದ್ಯ ಕರ್ತವ್ಯವಾಗಬೇಕೆಂದು ಹೇಳಿದರು.
ಮಕ್ಕಳಿಗೆ ಸೋಯಾಬಿನ್‌ಯುಕ್ತ ಆಹಾರ: ಜಿಪಂ ಸಿಇಒ ಜ್ಞಾನಪ್ರಕಾಶ್ ಮಾತನಾಡಿ, ಜಿಲ್ಲೆಯಲ್ಲಿ ಅಪೌಷ್ಟಿಕತೆ, ಬಾಲ್ಯವಿವಾಹದಂಥ ಸಾಮಾಜಿಕ ಸಮಸ್ಯೆಗಳ ನಿವಾರಣೆಗೆ ಸರ್ಕಾರ ನಿರಂತರ ಕೆಲಸ ಮಾಡುತ್ತಿದೆ. ಜಿಪಂ.ನಿಂದ ಅಪೌಷ್ಟಿಕತೆ ನಿವಾರಣೆಗೆ ಜಿಲ್ಲೆಯಲ್ಲಿನ 2.60 ಲಕ್ಷ ಅಂಗನವಾಡಿ ಮಕ್ಕಳಿಗೆ ನಿತ್ಯ ಸೋಯಾಬಿನ್‌ಯುಕ್ತ ಆಹಾರದ ಪ್ಯಾಕೆಟ್ ಒದಗಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಈಗಾಗಲೇ ಪ್ರಾಯೋಗಿಕವಾಗಿ ನಾಗಪುರದ ಖಾಸಗಿ ಸಂಸ್ಥೆಯಿಂದ ಉಚಿತವಾಗಿ ಲಭ್ಯವಾದ ಇಂಥ ಆಹಾರವನ್ನು ರಾಯಚೂರು ತಾಲೂಕಿನ ಹುಣಸಿಹಾಳ ಹುಡಾ ಗ್ರಾಮದಲ್ಲಿ ವಿತರಿಸುವ ಮೂಲಕ ಮಕ್ಕಳ ಆರೋಗ್ಯದಲ್ಲಿನ ಬದಲಾವಣೆ ಪರಿಶೀಲಿಸಿದ್ದು, ಮಕ್ಕಳಲ್ಲಿ ಗಮನಾರ್ಹ ಮಾರ್ಪಾಟು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲ ಅಂಗನವಾಡಿ ಮಕ್ಕಳಿಗೆ ಈ ಯೋಜನೆ ವಿಸ್ತರಿಸಲಾಗುತ್ತಿದೆ ಎಂದು ಹೇಳಿದರು.
ಅಪೌಷ್ಟಿಕತೆಗೆ ನೀರೂ ಕಾರಣ: ಮಕ್ಕಳಲ್ಲಿ ಅಪೌಷ್ಟಿಕತೆಗೆ ಕಲುಷಿತ ಕುಡಿಯುವ ನೀರಿನ ಸೇವನೆಯೂ ಒಂದು ಕಾರಣವಾಗಿದೆ. ಈ ಹಿನ್ನೆಲೆ ದಕ್ಷಿಣ್ ಗ್ರೂಪ್ ಎಂಬ ಕಂಪನಿಯೊಂದಿಗೆ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಗೆ ಜಿಪಂ ಒಪ್ಪಂದ ಮಾಡಿಕೊಂಡಿದ್ದು, ಮಾನವಿ ತಾಲೂಕಿನ ಕಲ್ಲೂರು ಮತ್ತು ಪೋತ್ನಾಳ ಗ್ರಾಮಗಳಲ್ಲಿ ಜು.18ರಿಂದ 20ರೊಳಗೆ ಈ ಘಟಕಗಳನ್ನು ಸ್ಥಾಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಜಿಲ್ಲಾದ್ಯಂತ ಇಂಥ ಘಟಕಗಳನ್ನು ಸ್ಥಾಪಿಸುವ ಗುರಿಯಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬೆಂಗಳೂರಿನ ಸಿಆರ್‌ಟಿ ಸಂಸ್ಥೆಯ ಕಾರ್ಯನಿರ್ವಾಹಕ ನಿರ್ದೇಶಕ ವಾಸುದೇವ ಶರ್ಮಾ, ದೇಶದ ಅಭಿವೃದ್ಧಿಗಾಗಿ ಜಾಗತಿಕ ಸಂಬಂಧಗಳ ಸುಧಾರಣೆ, ಹೆರಿಗೆ ವೇಳೆ ಮಹಿಳೆಯರ ಸಾವಿಗೀಡಾಗುತ್ತಿರುವ ಪ್ರಮಾಣ ಇಳಿಕೆಗೆ ಯತ್ನ, ಬಾಲ್ಯವಿವಾಹಕ್ಕೆ ತಡೆ, ಪರಿಸರದಲ್ಲಿ ಸಮತೋಲನ ಕಾಪಾಡುವುದು ಅವಶ್ಯಕ ಎಂದರು.
ಸಮಾರಂಭದಲ್ಲಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ವೆಂಕಟೇಶ ನಾಯಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ರೋಹಿಣಿ ಹಿರೇಮಠ, ಬೆಂಗಳೂರಿನ ಬ್ರೆಡ್ಸ್ ಸಂಸ್ಥೆಯ ಫಾದರ್ ಜೊಯ್ ನೆಡುಂಪರಂಬಿಲ್, ಯುನಿಸೆಫ್‌ನ ಜಿಲ್ಲಾ ಅಧಿಕಾರಿ ರಾಘವೇಂದ್ರ ಭಟ್ ಸೇರಿ ಅನೇಕರಿದ್ದರು. ವಿವಿಧೆಡೆಯಿಂದ ಆಗಮಿಸಿದ್ದ ಶಾಲಾ ವಿದ್ಯಾರ್ಥಿಗಳು, ತಜ್ಞರು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement