ನೀರು ಬಿಡದಿರಲು ನೆಪ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.2
ಬೇಸಿಗೆಯಲ್ಲಿ ನದಿಯಲ್ಲಿ ನೀರಿನ ಅಭಾವದಿಂದ ಕುಡಿಯುವ ನೀರಿಗೆ ಜನರ ಪರದಾಟ. ಮಳೆಗಾಲದ ಈ ದಿನಗಳಲ್ಲಿ ಕೃಷ್ಣಾ ನದಿಯಲ್ಲಿ ನೀರಿನ ಹರಿವಿದ್ದರೂ ನಗರದ ಜನತೆಗೆ ನೀರಿಗಾಗಿ ಪರದಾಡುವುದು ತಪ್ಪಿಲ್ಲ. ಒಮ್ಮೆ ತಾಂತ್ರಿಕ ಸಮಸ್ಯೆ, ಮತ್ತೊಮ್ಮೆ ವಿದ್ಯುತ್ ಕಡಿತದ ನೆಪ. ಅಧಿಕಾರಿಗಳ ಅಸಮರ್ಪಕ ಕಾರ್ಯವೈಖರಿಯಿಂದಾಗಿ ನಗರದ ಜನತೆಗೆ ನೀರಿಗಾಗಿ ಅಲೆದಾಟ ನಿರಂತರವಾಗಿದೆ.
ನಗರಕ್ಕೆ ಕಳೆದ ಐದು ತಿಂಗಳಿನಿಂದ ಕುಡಿಯುವ ನೀರಿನ ಪೂರೈಕೆಯಲ್ಲಿ ಗೊಂದಲ ತಪ್ಪಿಲ್ಲ. ಕಳೆದ ಬೇಸಿಗೆಯ ಆರಂಭದೊಂದಿಗೆ ಕೃಷ್ಣಾ ನದಿಯಲ್ಲಿ ನೀರಿನ ಹರಿವು ಕಡಿಮೆಯಾಯಿತು. ಆಗಿನಿಂದಲೇ ನಗರದ ಜನತೆಗೆ ದಿನ ಬಿಟ್ಟು ದಿನ ನೀರೊದಗಿಸುವ ಕಾರ್ಯ ನಗರಸಭೆ ಆರಂಭಿಸಿದೆ. ಅದು ಈಗಲೂ ಅದೇ ಪದ್ಧತಿ ಮುಂದುವರಿಸಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ.
ನೀರಿನ ಹರಿವು ಹೆಚ್ಚಳ: ಕೃಷ್ಣಾ ನದಿಯಿಂದ ನಗರದ 35 ವಾರ್ಡುಗಳ ಪೈಕಿ 22 ವಾರ್ಡುಗಳ ಜನತೆಗೆ ಕುಡಿಯುವ ನೀರೊದಗಿಸಲಾಗುತ್ತದೆ. ದಿನವೂ ನಗರಕ್ಕೆ ಒಟ್ಟು 24 ಮಿಲಿಯನ್ ಲೀಟರ್ ನೀರಿನ ಅಗತ್ಯವಿದೆ. ಬೇಸಿಗೆಯಲ್ಲಿ ಇಷ್ಟೊಂದು ಪ್ರಮಾಣದ ನೀರು ಲಭ್ಯವಾಗದು. ಹಾಗಾಗಿ ಸಹಜವಾಗಿಯೇ ಲಭ್ಯವಿರುವ ನೀರನ್ನೇ ಮರಳಿನ ಚೀಲ ಬಳಸಿ ನಿಲುಗಡೆ ಮಾಡಿ ನಗರದ ಜನತೆಗೆ ದಿನ ಬಿಟ್ಟು ದಿನ ಒದಗಿಸುವುದು ಸಾಮಾನ್ಯ ಸಂಗತಿ.
ಆದರೆ ಸದ್ಯ ಮಳೆಗಾಲ ಆರಂಭಗೊಂಡಿದೆ. ಜಿಲ್ಲೆಯ ವಿವಿಧೆಡೆ ಆಗಾಗ್ಗೆ ಸುರಿಯುವ ಮಳೆಯು ಕೃಷ್ಣಾ ನದಿಯಲ್ಲಿ ನೀರಿನ ಹರಿವು ಹೆಚ್ಚಿಸಿದೆ. ಅಷ್ಟೇ ಅಲ್ಲ, ಕೃಷ್ಣಾ ನದಿ ಪಾತ್ರದಲ್ಲಿಯೂ ಅಬ್ಬರದ ಮಳೆ ಸುರಿಯುತ್ತಿರುವುದು ನದಿಯಲ್ಲಿ ನೀರಿನ ಹರಿವು ಹೆಚ್ಚಳಕ್ಕೆ ಕಾರಣವಾಗಿದೆ.
ವಿದ್ಯುತ್ ಕಡಿತದ ನೆಪ: ನದಿಯಲ್ಲಿ ಕಳೆದ 15 ದಿನಗಳಿಂದ ನೀರು ಹರಿಯುತ್ತಿದ್ದರೂ ನಗರಸಭೆ ಮಾತ್ರ ಈಗಲೂ ನಗರದ ಜನತೆಗೆ ಬೇಸಿಗೆಯಲ್ಲಿನ ಪರಿಸ್ಥಿತಿಯನ್ನು ಮುಂದುವರಿಸಿದೆ. ದಿನ ಬಿಟ್ಟು ದಿನ ನೀರೊದಗಿಸುತ್ತಿದೆ. ಒಮ್ಮೊಮ್ಮೆ ಎರಡರಿಂದ ಮೂರು ದಿನಕ್ಕೊಮ್ಮೆ ನೀರೊದಗಿಸುವ ಕಾರ್ಯ ಅಧಿಕಾರಿಗಳು ಮಾಡುತ್ತಿದ್ದಾರೆ.
ಅಂಥ ಸಂದರ್ಭದಲ್ಲಿ ವಿದ್ಯುತ್ ಕಡಿತ, ನೀರೆತ್ತುವ ಮೋಟಾರ್ಗಳ ದುರಸ್ತಿಯ ನೆಪವೊಡ್ಡಲಾಗುತ್ತಿದೆ. ನಗರಸಭೆಯ ಕೆಲ ವರ್ಷಗಳ ಹಿಂದೆಯೇ ಎಕ್ಸ್ಪ್ರೆಸ್ ವಿದ್ಯುತ್ ಮಾರ್ಗ ಅಳವಡಿಕೆಗೆ ಕೋಟಿ ರು. ಜೆಸ್ಕಾಂಗೆ ಪಾವತಿಸಿದೆ. ವಿದ್ಯುತ್ ಸಂಪರ್ಕ ದೊರೆತರೂ ವಿದ್ಯುತ್ ಕಡಿತದ ನೆಪ ಹೇಳುವುದು ಮಾತ್ರ ನಿಂತಿಲ್ಲ.
ಕೃತಕ ಅಭಾವ ಸೃಷ್ಟಿ: ಈ ಕುರಿತು 'ಕನ್ನಡಪ್ರಭ'ಕ್ಕೆ ಪ್ರತಿಕ್ರಿಯಿಸಿದ ನಗರಸಭೆಯ ಹಿರಿಯ ಸದಸ್ಯ ಜಯಣ್ಣ, ನಗರಸಭೆಯ ಹಿರಿಯ ಅಧಿಕಾರಿಗಳು ಕುಡಿಯುವ ನೀರಿನ ಕೃತಕ ಅಭಾವ ಸೃಷ್ಟಿಸಿದ್ದಾರೆ. ರಾಂಪುರ ಕೆರೆಯಲ್ಲಿ ನೀರಿನ ಅಭಾವವಿದೆ ನಿಜ. ಆದರೆ ಕೃಷ್ಣಾ ನದಿಯಿಂದ ದಿನವೂ ನೀರೊದಗಿಸಲು ಯಾವುದೇ ಸಮಸ್ಯೆಯಿಲ್ಲ. ಇದು ಅಧಿಕಾರಿಗಳು ಸೃಷ್ಟಿಸಿದ ಕೃತಕ ಅಭಾವವಾಗಿದೆ ಎಂದಿದ್ದಾರೆ.
ಒಂದೆಡೆ ಜನತೆ ಬೇಸಿಗೆ ಮುಗಿದರೂ ನೀರಿಗಾಗಿ ಅಲೆದಾಡುವುದು ತಪ್ಪಿಲ್ಲ. ಕೃಷ್ಣಾ ನದಿಯಲ್ಲಿ ನೀರಿನ ಹರಿವಿದ್ದರೂ ನಗರಸಭೆಯ ಕಾರ್ಯವೈಖರಿಯಿಂದಾಗಿ ಕೃತಕ ಅಭಾವ ಸೃಷ್ಟಿಯಾಗಿದ್ದು, ಜನತೆಗೆ ನೀರಿಗಾಗಿ ಅಲೆದಾಡುವುದು ತಪ್ಪಿಲ್ಲ.
- ಜಗನ್ನಾಥ ಆರ್. ದೇಸಾಯಿ