ಬಿಎಸ್ವೈ ಮರು ಸೇರ್ಪಡೆ ಕೇಂದ್ರ ನಾಯಕರಿಗೆ ಬಿಟ್ಟದ್ದು: ಈಶ್ವರಪ್ಪ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.2
ಯಡಿಯೂರಪ್ಪ ಅವರನ್ನು ಬಿಜೆಪಿಗೆ ಮರಳಿ ಸೇರ್ಪಡೆಗೊಳಿಸಿಕೊಳ್ಳುವುದು ಪಕ್ಷದ ಕೇಂದ್ರ ನಾಯಕರಿಗೆ ಬಿಟ್ಟ ವಿಚಾರ. ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರುವುದಾಗಿ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದರು.
ನಗರದಲ್ಲಿ ಮಂಗಳವಾರ ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾಜಿ ಸಿಎಂ ಯಡಿಯೂರಪ್ಪ ಸೇರ್ಪಡೆಯ ಬಗ್ಗೆ ಈಗಾಗಲೇ ರಾಜ್ಯಾಧ್ಯಕ್ಷ ಪ್ರಹ್ಲಾದ ಜೋಷಿ ಅವರ ನೇತೃತ್ವದ ಸಭೆಯಲ್ಲಿ ಚರ್ಚಿಸಿ ಅಭಿಪ್ರಾಯವನ್ನು ಕೇಂದ್ರ ನಾಯಕರಿಗೆ ರವಾನಿಸಲಾಗಿದೆ ಎಂದು ಹೇಳಿದರು.
ಸೋಲಿಗೆ ಕಾರಣ ರಾಜಕೀಯ ಬಿಕ್ಕಟ್ಟು: ಬಿಜೆಪಿ ಪಕ್ಷದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದು, ಪಕ್ಷದ ವರಿಷ್ಠರು ಯಡಿಯೂರಪ್ಪ ಸೇರ್ಪಡೆಯ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆಂದ ಅವರು, ಬಿಎಸ್ವೈ ಸೇರ್ಪಡೆಯಿಂದ ಪಕ್ಷದ ಬಲವರ್ಧನೆಯಾಗಲಿದೆಯೇ ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.
ರಾಜ್ಯ ವಿಧಾನಸಭೆಯ ಚುನಾವಣೆಯಲ್ಲಿ ಪಕ್ಷ ಸೋಲಲು ನಾಯಕರಲ್ಲಿನ ಒಗ್ಗಟಿನ ಕೊರತೆಯೇ ಕಾರಣ. ಅದರ ಜತೆಗೆ ಅಭಿವೃದ್ಧಿ ಕಾರ್ಯಗಳನ್ನು ಮತದಾರರು ಪರಿಗಣಿಸದೇ ಬಿಜೆಪಿ ಸರ್ಕಾರದ ಅವಧಿಯಲ್ಲಿನ ರಾಜಕೀಯ ಬಿಕ್ಕಟ್ಟುಗಳನ್ನು ಹೆಚ್ಚಾಗಿ ಗಮನಿಸಿದ್ದರಿಂದ ಸೋಲಾಯಿತು ಎಂದರು.
ಎನ್ಡಿಎ ಮೈತ್ತಿಕೂಟಕ್ಕೆ ಗೆಲವು: ಚುನಾವಣೆಯ ನಂತರದಲ್ಲಿ ಪಕ್ಷವನ್ನು ಬಲಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿದೆ. ಪಕ್ಷದ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಪದಾಧಿಕಾರಿಗಳ ಆಯ್ಕೆ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಮುಂಬರುವ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವ ಕಾರ್ಯ ಭರದಿಂದ ಸಾಗಿದೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಬಿಜೆಪಿ ಏಕಾಂಗಿ ಸ್ಪರ್ಧಿಸಲಿದೆ. ಯಾವುದೇ ಪಕ್ಷದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವುದಿಲ್ಲ. ಕೇಂದ್ರದ ಯುಪಿಎ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜನತೆ ಯುಪಿಎ ಸರ್ಕಾರದ ವಿರುದ್ಧ ಮತ ಚಲಾಯಿಸಲಿದ್ದು, ಎನ್ಡಿಎ ಮೈತ್ರಿಕೂಟಕ್ಕೆ ಗೆಲುವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಮೋದಿ ಪರ ಜನ ಬೆಂಬಲ: ಎನ್ಡಿಎ ಮೈತ್ರಿಕೂಟದಲ್ಲಿ ಎದ್ದಿರುವ ಗೊಂದಲ ಶೀಘ್ರ ಶಮನವಾಗಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ ಅವರು, ಈಗಾಗಲೇ ಕೇಂದ್ರ ನಾಯಕರು ಸಮಾಲೋಚನೆ ಕಾರ್ಯದಲ್ಲಿದ್ದಾರೆ. ಲೋಕಸಭೆ ಚುನಾವಣೆ ಹೊತ್ತಿಗೆ ಮೈತ್ರಿಕೂಟ ಮತ್ತಷ್ಟು ಬಲಗೊಳ್ಳಲಿದೆ ಎಂದು ಹೇಳಿದರು.
ಮುಂಬರುವ ಲೋಕಸಭೆ ಚುನಾವಣೆಯನ್ನು ಗುಜರಾತ್ ಸಿಎಂ ನರೇಂದ್ರ ಮೋದಿ ನೇತೃತ್ವದಲ್ಲಿಯೇ ಎದುರಿಸಲಾಗುತ್ತದೆಯೇ ವಿನಾ ರಾಜ್ಯ ನಾಯಕರ ಮುಂದಾಳತ್ವದಲ್ಲಲ್ಲ. ಮೋದಿ ಅವರ ಪರ ಜನರ ಒಲವಿದ್ದು, ಬಿಜೆಪಿ ಜಯಭೇರಿ ಬಾರಿಸುವುದರಲ್ಲಿ ಸಂಶಯವಿಲ್ಲ ಎಂದು ಅವರು ಹೇಳಿದರು.
ಶಾಂತಾ, ಸಣ್ಣಫಕೀರಪ್ಪಗೆ ನೋಟಿಸ್: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಬಿಜೆಪಿ- ಕೆಜೆಪಿ ಮತ ವಿಭಜನೆಯೇ ಮೂಲ ಕಾರಣ. ಕಾಂಗ್ರೆಸ್ ಸರ್ಕಾರ ಈಗಷ್ಟೇ ಅಧಿಕಾರಕ್ಕೆ ಬಂದಿದ್ದು, ಈಗಿನಿಂದಲೇ ವಿರೋಧಿಸುವುದು ಸಮಂಜಸವಲ್ಲ. ಆಡಳಿತ ನಿರ್ವಹಣೆಗೆ ಕಾಲಾವಕಾಶ ಅಗತ್ಯ. ಹಾಗೊಂದು ವೇಳೆ ಸರ್ಕಾರವು ಜನವಿರೋಧಿ ನೀತಿ ಅನುಸರಿಸಿದರೆ ಹೋರಾಟದ ಮೂಲಕ ಸರ್ಕಾರಕ್ಕೆ ಎಚ್ಚರಿಸಲಾಗುತ್ತದೆ ಎಂದು ಹೇಳಿದರು.
ಬಳ್ಳಾರಿ ಸಂಸದೆ ಜೆ. ಶಾಂತಾ ಮತ್ತು ರಾಯಚೂರು ಸಂಸದ ಸಣ್ಣಫಕೀರಪ್ಪ ಅವರು ಪಕ್ಷ ವಿರೋಧಿ ಚಟುವಟಿಕೆ ನಡೆಸಿರುವುದು ಗಮನಕ್ಕೆ ಬಂದಿದೆ. ಅವರಿಗೆ ಅನೇಕ ಸಲ ನೋಟಿಸ್ ನೀಡಲಾಗಿದೆ. ಮುಂದಿನ ದಿನಗಳಲ್ಲಿ ನಡೆಯುವ ಲೋಕಸಭೆ ಚುನಾವಣೆಯಲ್ಲಿ ಅವರಿಗೆ ಸ್ಪರ್ಧೆಗೆ ಪುನಾ ಅವಕಾಶ ನೀಡಬೇಕೆ ಅಥವಾ ಬೇಡವೇ ಎಂಬ ಬಗ್ಗೆ ಪಕ್ಷದ ರಾಜ್ಯ ನಾಯಕರ ಸಭೆ ನಡೆಸಿ ಚರ್ಚಿಸಲಾಗುತ್ತದೆ ಎಂದು ಉತ್ತರಿಸಿದರು.
ಆಡ್ವಾಣಿ ಮುನಿದಿಲ್ಲ: ಪಕ್ಷದ ರಾಷ್ಟ್ರೀಯ ನಾಯಕ ಎಲ್.ಕೆ. ಆಡ್ವಾಣಿ ಅವರು ನರೇಂದ್ರ ಮೋದಿ ನೇಮಕದಿಂದ ಮುನಿದಿಲ್ಲ. ಬದಲಿಗೆ ಪಕ್ಷದ ಸಿದ್ಧಾಂತ, ತತ್ವಗಳ ಪಾಲನೆಯಾಗುತ್ತಿಲ್ಲ ಎಂಬ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ಬಗ್ಗೆ ಪಕ್ಷದ ಇನ್ನಿತರ ನಾಯಕರು ಆಡ್ವಾಣಿ ಅವರೊಂದಿಗೆ ಸಮಾಲೋಚನೆ ನಡೆಸಿ ಮನವೊಲಿಸಿದ್ದು, ಮುಂದಿನ ದಿನಗಳಲ್ಲಿ ಪಕ್ಷದ ಮೂಲತತ್ವಕ್ಕೆ ಧಕ್ಕೆಯಾಗದಂತೆ ಕಾರ್ಯನಿರ್ವಹಿಸುವ ಬಗ್ಗೆ ಭರವಸೆ ನೀಡಿದ್ದಾರೆಂದು ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ಮುಖಂಡ ರಘುನಾಥರಾವ್ ಮಲ್ಕಾಪುರೆ, ಗ್ರಾಮೀಣ ಶಾಸಕ ತಿಪ್ಪರಾಜು, ಜಿಲ್ಲಾಧ್ಯಕ್ಷ ಬಸನಗೌಡ ಬ್ಯಾಗವಾಟ್, ಮುಖಂಡರಾದ ತ್ರಿವಿಕ್ರಮ್ ಜೋಷಿ ಸೇರಿ ಅನೇಕರಿದ್ದರು.