ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬೆರಗಾದ ಸಂಸದ ಶಿವರಾಮೇಗೌಡ

Lingaraj Badiger
Updated On : 3 Jul 2013, 11:39 am

ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.2
ನಗರಕ್ಕೆ ಸರಬರಾಜು ಮಾಡುವ ಕುಡಿಯುವ ನೀರಿನ ಶುದ್ಧೀಕರಣ ಘಟಕ ಹಾಗೂ ದೆವ್ವದ ಮನೆಯಂತಿರುವ ಸರ್ಕ್ಯೂಟ್ ಹೌಸ್ ವೀಕ್ಷಣೆ ಮಾಡಿದ ಕೊಪ್ಪಳ ಸಂಸದ ಶಿವರಾಮೇಗೌಡ ಅವುಗಳಲ್ಲಿನ ಅವ್ಯವಸ್ಥೆ ಕಂಡು ಬೆರಗಾದರು.
ನಗರಕ್ಕೆ ಅಶುದ್ಧ ನೀರು ಸರಬರಾಜಾಗುತ್ತಿರುವ ಬಗ್ಗೆ ಅನೇಕ ದೂರುಗಳು ಬಂದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಕೆರೆಯನ್ನು, ಶುದ್ಧೀಕರಣ ಘಟಕವನ್ನು ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿ, ಹಳ್ಳದಿಂದ ನೀರನ್ನು ನೇರವಾಗಿ ಶುದ್ಧೀಕರಣ ಘಟಕಕ್ಕೆ ಬಿಡಲಾಗುತ್ತಿದೆ. ಘಟಕವು ನಿಷ್ಕ್ರೀಯವಾಗಿದೆ. ಅಧಿಕಾರಿಗಳು ಇದಕ್ಕೆ ಸರಿಯಾದ ಉತ್ತರ ನೀಡದ ಹಿನ್ನೆಲೆಯಲ್ಲಿ ಸಿಡಿಮಿಡಿಕೊಂಡರು. ಇಂತಹ ನೀರು ಕುಡಿಯಲು ಹೇಗೆ ಸಾಧ್ಯವೆಂದು ಅಧಿಕಾರಿಗಳ ಮೇಲೆ ಹರಿಹಾಯ್ದರು.
ಪರಿಶೀಲಿಸಲು ಡಿಸಿಗೆ ಸೂಚನೆ: ಈ ಸಂದರ್ಭದಲ್ಲಿ ದೂರವಾಣಿ ಮೂಲಕ ಜಿಲ್ಲಾಧಿಕಾರಿಗಳನ್ನು ಸಂಪರ್ಕಿಸಿದ ಸಂಸದರು, ಸಿಂಧನೂರು ಕುಡಿಯುವ ನೀರಿನ ಶುದ್ಧೀಕರಣ ಘಟಕವು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ನೀರು ಸಹ ಕುಡಿಯಲು ಯೋಗ್ಯವಾಗಿಲ್ಲ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು ಎರಡು ಮೂರು ದಿನಗಳಲ್ಲಿ ಭೇಟಿ ಪರಿಶೀಲಿಸುವುದಾಗಿ ಹೇಳಿದರು ಎಂದು ಶಿವರಾಮೇಗೌಡ ಹೇಳಿದರು.
ಕಾಲುವೆಗೆ ನೀರು ಹರಿಸಿ: ಸಿಂಧನೂರು ನಗರ ಸೇರಿದಂತೆ ಬಹುತೇಕ ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆಯಿದೆ. ಅಗತ್ಯ ಮಳೆಯಾಗದ ಕಾರಣ ಎಡದಂಡೆ ನಾಲೆಗೆ ನೀರು ಹರಿಸುವುದು ಸೂಕ್ತ. ಕಳೆದ ವರ್ಷ ಕೇವಲ 4 ಟಿಎಂಸಿ ನೀರಿದ್ದ ಸಂದರ್ಭದಲ್ಲೂ ಬಿಜೆಪಿ ಸರ್ಕಾರ ಕುಡಿಯುವ ನೀರಿಗಾಗಿ ಎಡದಂಡೆ ನಾಲೆಗೆ ನೀರು ಹರಿಸಿದೆ. ಕೂಡಲೇ ಜಿಲ್ಲಾ ಉಸ್ತುವಾರಿ ಸಚಿವರು, ಕಾಡಾ ಅಭಿಯಂತರರು ಈ ಬಗ್ಗೆ ಚರ್ಚೆಸಿ ಕೂಡಲೇ ನಾಲೆಗೆ ನೀರು ಬಿಡಬೇಕೆಂದು ಒತ್ತಾಯಿಸಿದರು.
ತನಿಖೆಗೆ ಒತ್ತಾಯ: ಕುಡಿಯುವ ನೀರಿನ ಶುದ್ಧೀಕರಣ ಘಟಕವನ್ನು ವೀಕ್ಷಣೆ ಮಾಡಿದ ನಂತರ ಹತ್ತಿರದಲ್ಲಿದ್ದ ಸರ್ಕ್ಯೂಟ್ ಹೌಸ್ ವೀಕ್ಷಣೆ ಮಾಡಿದ ಸಂಸದರು, ಅಲ್ಲಿನ ಸ್ಥಿತಿಯನ್ನು ಕಂಡು ಮಾತು ಬಾರದಂತಾದರು. 50 ಲಕ್ಷ ವೆಚ್ಚದಲ್ಲಿ ಅರೆ-ಬರೆ ಕಾಮಗಾರಿ ನಡೆದ ಬಗ್ಗೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಕಟ್ಟಡವೇ ಅಸ್ಥಿರವಾಗಿದೆ. ಗೋಡೆಗಳು ಬಿರುಕು ಬಿಟ್ಟಿವೆ. ಅಲ್ಲಿ ಈಗ ನಿರಾಶ್ರಿತರು ವಾಸವಾಗಿದ್ದಾರೆ. ಒಂದು ಹಂತದಲ್ಲಿ ಇದು ದೆವ್ವದ ಮನೆಯಾಗಿದೆ. ಈ ಬಗ್ಗೆ ಕೂಡಲೇ ಗುತ್ತೇದಾರರು, ಅಧಿಕಾರಿಗಳ ವಿರುದ್ಧ ಇಲಾಖೆಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ತಾಲೂಕಾಧ್ಯಕ್ಷ ದೇವೇಂದ್ರಪ್ಪ ಯಾಲಪಪರ್ವಿ, ನಗರ ಘಟಕದ ಅಧ್ಯಕ್ಷ ಮಧ್ವರಾಜ, ಶಿವಬಸನಗೌಡ ಗೊರೇಬಾಳ, ಜೆಇ ರಾಮಸ್ವಾಮಿ, ನಗರಸಭೆ ಸಹಾಯಕ ಅಭಿಯಂತರ ನರಸಿಂಹಮೂರ್ತಿ ಮತ್ತಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement