ಉತ್ತರಾಖಂಡ ಸಂತ್ರಸ್ತರಿಗೆ ನಿಧಿ ಸಂಗ್ರಹ
ಕನ್ನಡಪ್ರಭ ವಾರ್ತೆ ಸಿಂಧನೂರು ಜು.3
ಸಿಂಧನೂರಿನಲ್ಲಿ ಬುಧವಾರ ಯುವ ಕಾಂಗ್ರೆಸ್‌ನಿಂದ ಭೀಕರ ಪ್ರವಾಹದಿಂದ ಕಂಗಾಲಾಗಿ ಬದುಕು ದುರ್ಬರವಾಗಿದೆ. ಈ ಹಿನ್ನೆಲೆಯಲ್ಲಿ ಉತ್ತರಾಖಂಡ ಸಂತ್ರಸ್ತರ ನೆರವಿಗೆ ನಿಧಿ ಸಂಗ್ರಹ ನಡೆಸಲಾಯಿತು.
ನಗರದ ಶಾಸಕರ ಕಾರ್ಯಾಲಯದಿಂದ ನಿಧಿ ಸಂಗ್ರಹಣೆಗೆ ಶಾಸಕ ಹಂಪನಗೌಡ ಬಾದರ್ಲಿ ಚಾಲನೆ ನೀಡಿದರು. ನಂತರ ಮಾತನಾಡಿ, ಉತ್ತರಾಖಂಡದಲ್ಲಿ ಉಂಟಾದ ಮೇಘ ಸ್ಪೋಟದಿಂದಾಗಿ ಅಪಾರ ಪ್ರಮಾಣದ ಆಸ್ತಿಪಾಸ್ತಿಗಳು, ಲಕ್ಷಾಂತರ ಜೀವರಾಶಿಗಳು ನೀರು ಪಾಲಾದವು. ಇದರಿಂದ ಅಲ್ಲಿನ ಜನರ ಬದುಕು ಪ್ರವಾಹದಲ್ಲಿ ಕೊಚ್ಚಿಹೊಯಿತು. ಈಗ ಅಲ್ಲಿ ಜನತೆ ಊಟಕ್ಕಾಗಿ ಪರದಾಡುವ ದುಸ್ಥಿತಿಯಲ್ಲಿದ್ದಾರೆ. ಅವರಿಗೆ ಸಹಾಯ ಹಸ್ತ ನೀಡುವುದು ಅಗತ್ಯವಾಗಿದೆ.
ಪವಿತ್ರ ಕ್ಷೇತ್ರಗಳಾದ ಬದರಿನಾಥ, ಕೇದಾರನಾಥ, ಗಂಗೋತ್ರಿ, ಯಮನೋತ್ರಿ, ಗುಪ್ತಕಾಶಿಗೆ ತೆರಳಿದ್ದ ಸಾವಿರಾರು ಯಾತ್ರಿಗಳ ಶವಗಳನ್ನು ಹುಡುಕುವ ಕಾರ್ಯ ನಡೆದಿದೆ. ಹೆಚ್ಚಿನ ಸಂಖ್ಯೆಯಲ್ಲಿ ನಗರದ ನಾಗರಿಕರು, ವ್ಯಾಪಾರಿ ಬಂಧುಗಳು ದೇಣಿಗೆ ನೀಡಬೇಕೆಂದು ಮನವಿ ಮಾಡಿದರು.
ಯುವ ಕಾಂಗ್ರೆಸ್‌ನ ಅಧ್ಯಕ್ಷ ಮುರ್ತುಜಾ ಹುಸೇನ್ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಗಾಂಧಿವೃತ್ತ, ಬಸವ ವೃತ್ತ, ಎಪಿಎಂಸಿ ಗಂಜ್ ಸೇರಿದಂತೆ ಅನೇಕ ಕಡೆ ನಿಧಿ ಸಂಗ್ರಹಿಸಿದರು. ನಿಧಿ ಸಂಗ್ರಹಣೆಯಲ್ಲಿ ಜಿಪಂ ಸದಸ್ಯರಾದ ಚಂದುಸಾಬ ಮುಳ್ಳೂರು, ಶಿವನಗೌಡ ಎಲೆಕೂಡ್ಲಗಿ, ಎಪಿಎಂಸಿ ಅಧ್ಯಕ್ಷ ಸಣ್ಣಕರಿಯಪ್ಪ, ಉಪಾಧ್ಯಕ್ಷ ರಾಮಣ್ಣ, ನಿರ್ದೇಶಕರಾದ ಶರಣೇಗೌಡ ಗಿಣಿವಾರ, ಮಲ್ಲನಗೌಡ ಮೇಟಿ, ಕೊಪ್ಪಳ ಲೋಕಸಭಾ ಕ್ಷೇತ್ರದ ಯುವಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ, ನಗರಸಭೆ ಸದಸ್ಯರಾದ ಪ್ರಭುರಾಜ, ವೆಂಕಟೇಶ ಬಂಡಿ ವಕೀಲರು, ನನ್ನುಸಾಬ್ ಮೇಸ್ತ್ರಿ, ಖದೀರ, ಅಲಿಸಾಬ್, ನಬಿಸಾಬ್, ಪುರಸಭೆ ಮಾಜಿ ಸದಸ್ಯ ಎನ್.ಅಮರೇಶ, ಲಿಂಗಾಧರ ಗುರುಸ್ವಾಮಿ, ದುರುಗಪ್ಪ ಕಟಾಲಿ ಮತ್ತಿತರರು ಭಾಗವಹಿಸಿದ್ದರು.