ಪ್ರಕ್ರಿಯೆ ನಿಧಾನ, ಸಾಕ್ಷಿಗಳಿಗೆ ಫುಲ್ ಡಿಮ್ಯಾಂಡ್
ಕನ್ನಡಪ್ರಭ ವಾರ್ತೆ ರಾಯಚೂರು ಜು.3
ಒಮ್ಮೆ ಸರ್ವರ್ ಬ್ಯುಸಿ. ಮತ್ತೊಮ್ಮೆ ಅರ್ಧಮರ್ಧ ದಾಖಲೆಗಳ ನೋಂದಾಯಿಸುವಿಕೆ. ನಂತರ ಕೈಕೊಡುವ ಅಂತರ್ಜಾಲ ವ್ಯವಸ್ಥೆ. ಪಡಿತರ ಚೀಟಿ ಹೊಂದಿರುವಂಥವರ ಸಾಕ್ಷಿ ಕೇಳುವಿಕೆ. ಸಾಕ್ಷಿಗಳಿಗೀಗ ಫುಲ್ ಡಿಮ್ಯಾಂಡ್...
ಒಟ್ಟಾರೆ ಪಡಿತರ ಚೀಟಿಗೆ ಭಾವಚಿತ್ರ ಮತ್ತು ಬಯೋವುಟ್ರಿಕ್ ಪಡೆಯುವ ಪ್ರಕ್ರಿಯೆಯನ್ನು ತೀರಾ ನಿಧಾನವಾಗಿಸಿದ್ದು, ಜನತೆಯ ತಾಳ್ಮೆ ಪರೀಕ್ಷಿಸುತ್ತಿದೆ.
ಜನತೆಗೆ ತೊಂದರೆ: ಜಿಲ್ಲೆಯಲ್ಲಿ ಪಡಿತರ ಚೀಟಿ ಭಾವಚಿತ್ರ ಪಡೆಯುವ ಪ್ರಕ್ರಿಯೆ ಅಕ್ಷರಶಃ ಗೊಂದಲದ ಗೂಡು. ನಗರಸಭೆ ಮತ್ತು ವಿಧಾನಸಭೆ ಚುನಾವಣೆ ಕಾರಣಕ್ಕೆ ಈಗಾಗಲೇ ಎರಡು ಬಾರಿ ಸ್ಥಗಿತಗೊಂಡು ತಡವಾಗಿ ಪುನಾರಂಭವಾದ ಹೊಸ ಪಡಿತರ ಚೀಟಿಗಳಿಗೆ ಭಾವಚಿತ್ರ ಮತ್ತು ಬಯೋವುಟ್ರಿಕ್ ನೀಡುವ ಪ್ರಕ್ರಿಯೆ ತಾಂತ್ರಿಕ ಸಮಸ್ಯೆಗಳಿಂದಾಗಿ ಜನತೆಗೆ ತಲೆನೋವು ತಂದಿದೆ.
ಪ್ರಕ್ರಿಯೆ ನಿಧಾನಕ್ಕೇನು ಕಾರಣ?: ಜಿಲ್ಲೆಯಲ್ಲಿ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳಿಗೆ ಸದ್ಯದ ನಿಯಮದಂತೆ ಪಡಿತರ ಚೀಟಿ ವಿತರಿಸುವುದು ಸಂಕಷ್ಟ ತಂದೊಡ್ಡಿದೆ. ಜಿಲ್ಲೆಯಲ್ಲಿ ಪಡಿತರದಾರರ ಭಾವಚಿತ್ರ ಮತ್ತು ಹೆಬ್ಬೆರಳ ಗುರುತು ಪಡೆಯುವ 50 ಕೇಂದ್ರಗಳು ಕಾರ್ಯನಿರ್ವಹಿಸುತ್ತಿವೆ. ಆದರೆ ಅಂತರ್ಜಾಲ ಅವ್ಯವಸ್ಥೆ ಹಾಗೂ ರಾಜ್ಯಾದ್ಯಂತ ಏಕಕಾಲಕ್ಕೆ ಎಲ್ಲರೂ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ವೆಬ್ಸೈಟ್ಗೆ ಲಾಗಿನ್ ಆಗುತ್ತಿರುವುದು ಪ್ರಕ್ರಿಯೆಯನ್ನು ನಿಧಾನವಾಗಿಸಿದೆ.
ದಿನಕ್ಕೆ ನಾಲ್ಕೈದು ಕುಟುಂಬಗಳಿಗೆ ಮಾತ್ರ: ಪಡಿತರ ಚೀಟಿ ಭಾವಚಿತ್ರ ಪಡೆಯುತ್ತಿರುವ ಕೇಂದ್ರಗಳ ಪ್ರಕಾರ ದಿನವೊಂದಕ್ಕೆ ಕೇವಲ ನಾಲ್ಕರಿಂದ ಐವರ ಭಾವಚಿತ್ರ ಮತ್ತು ಹೆಬ್ಬೆರಳ ಗುರುತು ಪಡೆಯುವುದು ಸಾಧ್ಯವಾಗುತ್ತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಈ ಪ್ರಕ್ರಿಯೆ ಮುಗಿಯುವ ಸಾಧ್ಯತೆ ತೀರಾ ಕಡಿಮೆ.
ಇದು ನಿಜವೂ ಹೌದು. ನಗರ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆ ದಿನವೂ ಕೇವಲ ನಾಲ್ಕರಿಂದ ಐದು ಕುಟುಂಬಗಳ ಭಾವಚಿತ್ರ ಮಾತ್ರ ಪಡೆಯಲಾಗುತ್ತಿದೆ. ದಾಖಲೆಗಳನ್ನು ಆನ್ಲೈನ್ನಲ್ಲಿ ನೋಂದಾಯಿಸುವುದು ಸೇರಿದಂತೆ ಎಲ್ಲವೂ ನಿಧಾನಗತಿಯಲ್ಲಿ ಸಾಗುತ್ತಿದೆ.
ಸಾಕ್ಷಿ ಸಮಸ್ಯೆ: ರಾಜ್ಯ ಸರ್ಕಾರ ಖೊಟ್ಟಿ ಕಾರ್ಡುಗಳ ತಯಾರಿಕೆಗೆ ತಡೆಯೊಡ್ಡಲು ಹತ್ತು ಹಲವು ಕ್ರಮಗಳನ್ನು ಕೈಗೊಂಡಿದೆ. ಅದರಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಕಾರ್ಡುಗಳ ಕುಟುಂಬದ ಯಜಮಾನರನ್ನು ಸಾಕ್ಷಿಯಾಗಿ ಕಡ್ಡಾಯವಾಗಿ ಕೇಂದ್ರಗಳಿಗೆ ಕರೆ ತರಬೇಕು. ಅವರ ಹೆಬ್ಬರಳ ಗುರುತು ಪಡೆದ ನಂತರವೇ ಹೊಸ ಕಾರ್ಡುದಾರರ ಎಲ್ಲ ದಾಖಲೆ ಸಂಗ್ರಹಿಸುವ ವ್ಯವಸ್ಥೆ ಅಳವಡಿಸಿದ್ದು ಸಮಸ್ಯೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಹೀಗಾಗಿ ಸಾಕ್ಷಿ ನೀಡಲು ಭಾವಚಿತ್ರದ ಕೇಂದ್ರಗಳಿಗೆ ಆಗಮಿಸುವವರಿಗೆ ಈಗ ಫುಲ್ ಡಿಮ್ಯಾಂಡ್ ಬಂದಿದೆ. ಅದರಲ್ಲೂ ಗ್ರಾಮೀಣ ಭಾಗದಲ್ಲಿ ಈಗಾಗಲೇ ಕಾರ್ಡು ಹೊಂದಿರುವವರು ಹೊಲಗಳಿಗೆ ಮತ್ತು ಕೂಲಿ ಕೆಲಸಕ್ಕೆ ತೆರಳುವುದನ್ನು ಬಿಟ್ಟು ಸಾಕ್ಷಿ ನೀಡಲು ಕೇಂದ್ರಗಳಿಗೆ ಆಗಮಿಸುವಂತೆ ಹೊಸ ಪಡಿತರ ಚೀಟಿ ಪಡೆಯುವವರು ದುಂಬಾಲು ಬೀಳುವಂತಾಗಿದೆ.
ಸಾಕ್ಷಿ ಪಡೆಯಲು ಹಣ ಕೊಡ್ಬೇಕು: ಬಲ್ಲ ಮೂಲಗಳ ಪ್ರಕಾರ- ಸಾಕ್ಷಿದಾರರು ದಿನವೊಂದಕ್ಕೆ ಅವರು ಕೆಲಸಕ್ಕೆ ತೆರಳಿದರೆ ಪಡೆಯುವ ಕೂಲಿಯಷ್ಟು ಹಣ ತಮಗೆ ನೀಡಿದರೆ ಮಾತ್ರ ಸಾಕ್ಷಿ ನೀಡಲು ಒಪ್ಪಿಗೆ ಸೂಚಿಸುತ್ತಿದ್ದಾರೆಂದು ಬಿಜನಗೇರಾ ಗ್ರಾಮದ ರೈತ ದೇವೇಂದ್ರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ.
ಒಂದು ಬಾರಿ ಪಡಿತರ ಚೀಟಿ ಭಾವಚಿತ್ರ ನೀಡುವ ಕೇಂದ್ರಗಳಿಗೆ ಆಗಮಿಸಿದರೆ ಅದೇ ದಿನ ಕೆಲಸ ಪೂರ್ಣಗೊಳ್ಳುವುದು ಅನುಮಾನ ಎಂಬಂಥ ಸ್ಥಿತಿಯಿದೆ. ಹೀಗಾಗಿ ಎಲ್ಲರೂ ಸಾಲುಗಟ್ಟಿ ನಿಲ್ಲಬೇಕು. ಹಾಗೊಂದು ವೇಳೆ ಬಂದ ಕೆಲಸ ಪೂರ್ಣಗೊಳ್ಳದಿದ್ದರೆ ಮತ್ತೆ ಮತ್ತೆ ಪ್ರಯತ್ನಿಸುವಂಥ ಸ್ಥಿತಿಯಿದೆ. ಇಂಥ ಸ್ಥಿತಿಯಲ್ಲಿ ಸಾಕ್ಷಿಗಳು ಹೊಸ ಕಾರ್ಡು ಪಡೆಯುವವರೊಂದಿಗೆ ಇರಲು ನಿರಾಕರಿಸುತ್ತಿರುವುದು ಸಮಸ್ಯೆಯನ್ನು ಹೆಚ್ಚಿಸಿದೆ.
ಇಕ್ಕಟ್ಟಿನಲ್ಲಿ ಅಧಿಕಾರಿಗಳು, ಸಿಬ್ಬಂದಿ: ಒಂದೆಡೆ ಅಂತರ್ಜಾಲ ಸಂಪರ್ಕ ಸಮಸ್ಯೆ, ಮತ್ತೊಂದೆಡೆ ಸರ್ವರ್ ತೊಂದರೆ ಹಾಗೂ ಸಾಕ್ಷಿ ಅವಶ್ಯಕತೆಯಂಥ ಕ್ಲಿಷ್ಟ ಪ್ರಕ್ರಿಯೆಯಿಂದಾಗಿ ಪಡಿತರ ಚೀಟಿಗೆ ಭಾವಚಿತ್ರ ತೆಗೆಯುವ ಕೇಂದ್ರಗಳ ಸಿಬ್ಬಂದಿ ಹಾಗೂ ಆಹಾರ ಮತ್ತು ನಾಗರಿಕ ಇಲಾಖೆಯ ಅಧಿಕಾರಿಗಳು ಇಕ್ಕಟ್ಟಿಗೆ ಸಿಲುಕಿದ್ದಾರೆ.
ಜಗನ್ನಾಥ ಆರ್. ದೇಸಾಯಿ