ಹಾಸ್ಟೆಲ್ ಅವ್ಯವಸ್ಥೆ ಖಂಡಿಸಿ ತಾಪಂ ಕಚೇರಿ ಮುತ್ತಿಗೆ
ಕನ್ನಡಪ್ರಭ ವಾರ್ತೆ ಸಿಂಧನೂರು ಜು.3
ನಗರದ ಮೆಟ್ರಿಕ್ ಪೂರ್ವ ಪರಿಶಿಷ್ಟ ಜಾತಿ ಮತ್ತು ಪಂಗಡದ ಬಾಲಕರ ಸರ್ಕಾರಿ ವಸತಿ ನಿಲಯದಲ್ಲಿನ ಅವ್ಯವಸ್ಥೆಯನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ಊಟ ತ್ಯಜಿಸಿ ತಾಲೂಕು ಪಂಚಾಯಿತಿ ಕಚೇರಿ ಮುಂದೆ ಧರಣಿ ನಡೆಸಿದರು.
ಜೂನ್ ತಿಂಗಳಿಂದ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ. ಅಲ್ಲದೇ ಕುಡಿಯಲು ಯೋಗ್ಯವಲ್ಲದ ಕಲುಷಿತ ನೀರನ್ನು ಪೂರೈಸಲಾಗುತ್ತಿದೆ. ಮುಖ್ಯವಾಗಿ ಶೌಚಾಲಯಗಳು ನೀರಿನ ಸರಬರಾಜಿಲ್ಲದೆ ಗಬ್ಬು ವಾಸನೆ ಬೀರುತ್ತಿವೆ. ಇದರಿಂದ ತಮ್ಮ ವಾಸಕ್ಕೆ, ವಿದ್ಯಾಭ್ಯಾಸಕ್ಕೆ ತೀವ್ರ ಅನಾನುಕೂಲವಾಗಿದೆ ಎಂದು ಆಪಾದಿಸಿದ ವಿದ್ಯಾರ್ಥಿಗಳು, ಕೂಡಲೇ ವಸತಿ ನಿಲಯದಲ್ಲಿ ಮೂಲ ಸೌಕರ್ಯ ಕಲ್ಪಿಸುವಂತೆ ಆಗ್ರಹಿಸಿದರು.
ಭೇಟಿ: ವಿದ್ಯಾರ್ಥಿಗಳು ನಡೆಸುತ್ತಿದ್ದ ಧರಣಿ ಸ್ಥಳಕ್ಕೆ ಸಮಾಜ ಕಲ್ಯಾಣಾಧಿಕಾರಿ ನಾಗರಾಜ ಮತ್ತು ವಸತಿ ನಿಲಯದ ಮೇಲ್ವಿಚಾರಕ ಪಾಂಡಪ್ಪ ಅವರು ಭೇಟಿ ನೀಡಿ ವಿದ್ಯಾರ್ಥಿಗಳ ಅಹವಾಲುಗಳನ್ನು ಆಲಿಸಿದರು.
ಮನವೊಲಿಕೆ: ಕುಡಿಯುವ ನೀರಿನ ಸಮಸ್ಯೆಯ ಬಗ್ಗೆ ಇಲಾಖೆಯ ಗಮನಕ್ಕೆ ತರಲಾಗಿದ್ದು ಇಷ್ಟರಲ್ಲೇ ಅನುದಾನ ಮಂಜೂರಾಗಲಿದೆ. ಅನುದಾನ ಬಂದ ಮೇಲೆ ಶುದ್ಧ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಮೇಲ್ವಿಚಾರಕ ಪಾಂಡಪ್ಪ ವಿದ್ಯಾರ್ಥಿಗಳ ಮನಮೊಲಿಸಿದರು.
ಹೊಟೇಲ್ ಊಟ: ವಿದ್ಯಾರ್ಥಿಗಳು ಆಹಾರ ಚೆನ್ನಾಗಿಲ್ಲವೆಂದು ಊಟ ತ್ಯಜಿಸಿದ್ದರಿಂದ ಸಮಾಜ ಕಲ್ಯಾಣಾಧಿಕಾರಿ ನಾಗರಾಜ ಇವತ್ತಿನ ಮಟ್ಟಿಗೆ ಹೊಟೇಲ್‌ನಲ್ಲಿ ಊಟದ ವ್ಯವಸ್ಥೆ ಮಾಡಲಾಗುವುದು. ತದನಂತರ ಅಡುಗೆದಾರರಿಗೆ ಕಟ್ಟುನಿಟ್ಟಿನ ಸೂಚನೆ ನೀಡಿ ಉತ್ತಮ ಅಡುಗೆ ತಯಾರಿಸಲಾಗುವುದು ಎಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ಧರಣಿಯಿಂದ ವಾಪಾಸ್ಸಾದರು.
ಅಂಬೇಡ್ಕರ್ ಮಹಾಸಭಾದ ಜಿಲ್ಲಾಧ್ಯಕ್ಷ ಗುರುರಾಜ ಮುಕ್ಕುಂದಾ, ದಸಂಸ ಸಾಗರ ಬಣದ ನಗರಾಧ್ಯಕ್ಷ ದುರುಗೇಶ ಅವರು ವಿದ್ಯಾರ್ಥಿಗಳ ಮನವೊಲಿಸುವಲ್ಲಿ ಯಶಸ್ವಿಯಾದರು.