ಅಕ್ರಮ ಕಲ್ಲು ಗಣಿಗಾರಿಕೆ: ಕ್ರಮಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.4
ಸಿಂಧನೂರು ಮತ್ತು ಮಾನವಿ ತಾಲೂಕಿನಲ್ಲಿ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿರುವವರ ವಿರುದ್ಧ ಸೂಕ್ತ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘದ ಪದಾಧಿಕಾರಿಗಳು ತಹಸೀಲ್ದಾರರ ಮುಖಾಂತರ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜ ಅವರಿಗೆ ಗುರುವಾರ ಮನವಿ ಸಲ್ಲಿಸಿ ಒತ್ತಾಯಿಸಿದರು.
ತಹಸೀಲ್ದಾರರಿಗೆ ಮನವಿ ಸಲ್ಲಿಸಿದ ಆರ್‌ವೈಎಫ್‌ಐ ಜಿಲ್ಲಾ ಕಾರ್ಯದರ್ಶಿ ನಾಗರಾಜ ಪೂಜಾರ್ ಮಾತನಾಡಿ, ಮಾನವಿ ಮೆಕೋ ಕಂಪನಿ ಮಾಲೀಕ ಹಾಗೂ ಗುತ್ತಿಗೆದಾರ ಎಂ.ಈರಣ್ಣ ಮತ್ತು ಇತರೆ 13 ಜನ ಸರ್ಕಾರದಿಂದ ಯಾವುದೇ ಪರವಾನಗಿ ಪಡೆಯದೇ ಭಾರಿ ಸ್ಫೋಟಕ ಬಳಕೆ, ಸರ್ಕಾರಿ ಭೂಮಿ ಒತ್ತುವರಿ, ರಾಷ್ಟ್ರೀಯ ಸಂಪತ್ತಿನ ಲೂಟಿ, ತೆರಿಗೆ ವಂಚನೆ ಸೇರಿದಂತೆ ಅಕ್ರಮ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದಾರೆ.
ಈ ಬಗ್ಗೆ ತನಿಖೆ ನಡೆಸಿ ಕ್ರಮ ಜರುಗಿಸುವಂತೆ ಜಿಲ್ಲಾಧಿಕಾರಿಗಳಿಗೆ ಮತ್ತು ತಹಸೀಲ್ದಾರರಿಗೆ ವರದಿ ಸಲ್ಲಿಸಿ ಆರೇಳು ತಿಂಗಳಾದರೂ ಇದುವರೆಗೂ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಈ ಸಂಬಂಧ ಜೂ.11ರಂದು ಮುಖ್ಯಮಂತ್ರಿ ಹಾಗೂ ಕಂದಾಯ ಸಚಿವರಿಗೆ ಮನವಿ ಮೂಲಕ ಗಮನ ಸೆಳೆಯಲಾಗಿದೆ ಎಂದು ಹೇಳಿದರು.
ಅಧಿಕಾರಿಗಳ ಕರ್ತವ್ಯಲೋಪ: ಅಕ್ರಮ ಕಲ್ಲು ಗಣಿಗಾರಿಕೆ ನಡೆಸಿದ ಎಂ.ಈರಣ್ಣ ಮತ್ತು ಅಕ್ಬರ್ ಪಾಷಾ ವಿರುದ್ಧ ಪ್ರಕರಣ ದಾಖಲಿಸುವಂತೆ ಜಿಲ್ಲಾಧಿಕಾರಿಗಳ ಆದೇಶದ ನಡುವೆಯೂ ತಹಸೀಲ್ದಾರ್ ಪುಟ್ಟನರಸಯ್ಯ ಹಾಗೂ ಹಿರಿಯ ಗಣಿ ಅಧಿಕಾರಿ ಸಿಖಂದರ್ ಪಾಷಾ ನಿಷ್ಕಾಳಜಿ ತೋರಿಸುವ ಮೂಲಕ ಕರ್ತವ್ಯಲೋಪ ಎಸಗಿದ್ದಾರೆ. ಕೂಡಲೇ ಈ ಅಧಿಕಾರಿಗಳನ್ನು ಅಮಾನತುಗೊಳಿಸಿ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ಕೆ.ಆರ್.ಎಸ್. ತಾಲೂಕಾಧ್ಯಕ್ಷ ರಮೇಶ ಪಾಟೀಲ್ ಬೇರಗಿ, ಮುಖಂಡರಾದ ಹುಚ್ಚಪ್ಪ ಮೂಲಿಮನಿ, ಎನ್.ರಾಜಸಾಬ, ನಾಗಪ್ಪ ಬೇರಗಿ, ಈರಪ್ಪ ಭೋವಿ, ರಾಮು, ಪಂಪಣ್ಣ ಕುರುಕುಂದಿ, ಈರಪ್ಪ ಬೇರಗಿ ಮತ್ತಿತರರು ಇದ್ದರು.