ಬಂಗಾಲಿಯರು ಭಾರತೀಯ ಪ್ರಜೆಗಳು
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.4
ದೇಶದ ಯಾವುದೇ ಭಾಗದಲ್ಲಿ ಒಬ್ಬ ವ್ಯಕ್ತಿ ಐದು ವರ್ಷ ಸತತವಾಗಿ ವಾಸವಾಗಿದ್ದರೆ ಆತ ಭಾರತದ ನಾಗರಿಕನಾಗುತ್ತಾನೆ. ಬಂಗಾಲಿಯರು ತಾಲೂಕಿನಲ್ಲಿ ಕಳೆದ 42 ವರ್ಷಗಳಿಂದ ವಾಸವಾಗಿರುವುದರಿಂದ ಅವರು ನಿರಾಶ್ರಿತರಲ್ಲ. ಭಾರತೀಯ ಪ್ರಜೆಗಳು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ವೈ.ಎಂ. ಮೊಹ್ಮದ್ ಯುಸೂಫ್ ಹೇಳಿದರು.
ತಾಲೂಕಿನ ಶಾಂತಿನಗರದಲ್ಲಿ ಮಾ ಸಾರದಾ ಪದವಿ ಪೂರ್ವ ಕಾಲೇಜನಲ್ಲಿ ಜನಕಲ್ಯಾಣ ಸಂಸ್ಥೆಯ 17 ವಾರ್ಷಿಕೋತ್ಸವ ಹಾಗೂ ಪ್ರಥಮ ವರ್ಷದ ಪಿಯುಸಿ ವಿದ್ಯಾರ್ಥಿ ಸ್ವಾಗತ ಸಮಾರಂಭದಲ್ಲಿ ವಿದ್ಯಾರ್ಥಿ ವೇತನ ವಿತರಣೆ ಮಾಡಿ ಅವರು ಮಾತನಾಡಿದರು.
'ಜನಕಲ್ಯಾಣ' ಕಾರ್ಯಕ್ಕೆ ಮೆಚ್ಚುಗೆ: ಜನಕಲ್ಯಾಣ ಸಂಸ್ಥೆ ಕಳೆದ 16 ವರ್ಷಗಳಿಂದ ವಿನೂತನ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಈ ಭಾಗದ ಜನರ ಮೆಚ್ಚುಗೆಗೆ ಪಾತ್ರವಾಗಿದೆ. ಒಂದು ಮಗುವನ್ನು ಕೇಂದ್ರವಾಗಿಟ್ಟುಕೊಂಡು ಆ ಮಗುವಿಗೆ ಬೇಕಾಗುವ ಎಲ್ಲ ಸೇವೆಗಳನ್ನು ಒದಗಿಸುತ್ತಿರುವ ಕಾರ್ಯ ಶ್ಲಾಘನೀಯ.
ಮಗುವಿನ ಶಿಕ್ಷಣ, ಆರೋಗ್ಯಕ್ಕೆ ಅವಶ್ಯಕವಿರುವ ವ್ಯವಸ್ಥೆ, ಸಾಮಗ್ರಿಗಳ ಪೂರೈಕೆಗಾಗಿ ಜನ-ಶಿಕ್ಷಾ ಮತ್ತು ಜನ-ರಕ್ಷಾ ಕಾರ್ಯಕ್ರಮಗಳ ಜೊತೆಗೆ ಕುಟುಂಬದ ಆರ್ಥಿಕ ಸಬಲೀಕರಣಕ್ಕೆ ಜನ- ಉದ್ಯೋಗ, ಜನ- ಕೃಷಿ, ಜನ-ಜಲ, ಜನ- ಶಕ್ತಿ, ಜನ- ಸಂಘಟನೆ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಿ ಎಂದು ಕರೆ ನೀಡಿದರು.
ಜನ ಕಲ್ಯಾಣ ಸಂಸ್ಥೆಯ ಕಾರ್ಯದರ್ಶಿ ಪ್ರಸೇನ್ ರಪ್ತಾನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಾ ಸಾರದಾ ಪದವಿ ಪೂರ್ವ ಕಾಲೇಜ ಪ್ರಾಚಾರ್ಯ ಶಿವರಾಜ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು.
ವಿದ್ಯಾರ್ಥಿ ವೇತನ, ಸಾಮಗ್ರಿ ವಿತರಣೆ: ಕಾರ್ಯಕ್ರಮದಲ್ಲಿ 102 ವಿದ್ಯಾರ್ಥಿಗಳಿಗೆ ಶಿಕ್ಷಣ ಸಾಮಗ್ರಿಗಳು, 9 ವಿದ್ಯಾರ್ಥಿಗಳಿಗೆ 2 ಸಾವಿರ ವಿದ್ಯಾರ್ಥಿ ವೇತನ, 105 ಕುಟುಂಬಗಳಿಗೆ ಸ್ವಚ್ಛತಾ ಸಾಮಗ್ರಿ, 25 ಕುಟುಂಬಗಳಿಗೆ ಜೀವನೋಪಾಯ ಸಾಮಗ್ರಿಗಳನ್ನು ವಿತರಿಸಲಾಯಿತು. ತಾಪಂ ಸದಸ್ಯೆ ಹೇಮಲತಾ ಸರಕಾರ, ಗ್ರಾಪಂ ಅಧ್ಯಕ್ಷೆ ಶಾರದ ಮಣಿಶಂಕರ, ಸದಸ್ಯರಾದ ಸುನೀಲ್ ಮೇಸ್ತ್ರಿ, ತಪನ್ ಮಂಡಲ್, ಶ್ರೀಜಲಕುಮಾರ ಡೇ ಮತ್ತಿತರರು ಭಾಗವಹಿಸಿದ್ದರು. ಪದ್ಮಾ, ಶ್ವೇತಾ ಪ್ರಾರ್ಥಿಸಿದರು. ರವಿ ಬಿ. ಸಾಸಲಮರಿ ಸ್ವಾಗತಿಸಿದರು.