ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಿಡಾಡಿ ದನಗಳ ಠಿಕಾಣಿಗೆ ವಾಹನ ಸವಾರ ಗಲಿಬಿಲಿ

Lingaraj Badiger
Updated On : 5 Jul 2013, 11:40 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.4
ಪ್ರಮುಖ ರಸ್ತೆಗಳಲ್ಲಿ ಬಿಡಾಡಿ ದನಗಳ ವಿಹಾರ. ವಾಹನ ಸವಾರರಿಗೆ ನೆಮ್ಮದಿ ಹಾಳು. ಅಡ್ಡಾದಿಡ್ಡಿ ಓಡಾಡುವ ದನಗಳ ಹಾವಳಿಗೆ ಜನತೆ ತತ್ತರ. ಕಟ್ಟಡಗಳ ಅತಿಕ್ರಮಣ ತೆರವುಗೊಳಿಸುವ ಜಿಲ್ಲಾಡಳಿತಕ್ಕೆ ರಸ್ತೆ ಅತಿಕ್ರಮಿಸಿಕೊಳ್ಳುವ ದನಗಳ ಹಾವಳಿ ತಡೆಯುವುದು ಅಸಾಧ್ಯ ಎಂಬಂಥ ಸ್ಥಿತಿ. ಪರಿಣಾಮ ಜನತೆ ಬಿಡಾಡಿ ದನಗಳ ಕಿರಿಕಿರಿಯ ಮಧ್ಯೆಯೇ ಸಂಚಾರ ಅನಿವಾರ್ಯ ಎಂಬಂತಾಗಿದೆ.
ನಗರದಲ್ಲಿ ಬಿಡಾಡಿ ದನಗಳ ಹಾವಳಿ ಆರಂಭಗೊಂಡು ವರ್ಷಗಳೇ ಕಳೆದಿವೆ. ಆದರೆ ನಗರಸಭೆಯು ರಾಜಕೀಯ ಪ್ರಭಾವಕ್ಕೆ ಮಣಿದು ಮೌನಕ್ಕೆ ಶರಣಾಗಿದ್ದರೆ, ಜಿಲ್ಲಾಡಳಿತದ ಅಧಿಕಾರಿಗಳು ಜಾಣ ಕುರುಡು ನೀತಿ ಪ್ರದರ್ಶಿಸುತ್ತಿದ್ದಾರೆ. ಹಾಗಾಗಿ ದನಗಳು ಚತುಷ್ಪಥ ರಸ್ತೆ ಸೇರಿ ನಗರಾದ್ಯಂತ ವಿಹರಿಸುತ್ತಿವೆ. ವಾಹನ ಸವಾರರಿಗೆ ಸವಾಲಾಗಿ ಪರಿಣಮಿಸಿವೆ.
ನೋಟಿಸ್ ನೀಡಿ ಸುಮ್ಮನಾದ ನಗರಸಭೆ: ಬಿಡಾಡಿ ದನಗಳ ಹಾವಳಿ ನಿಯಂತ್ರಣಕ್ಕೆ ನಗರಸಭೆಯು ಅನೇಕ ಸಲ ಅವುಗಳ ಮಾಲೀಕರಿಗೆ ನೋಟಿಸ್ ಜಾರಿ ಮಾಡಿದೆ. ಹಾಗೆಯೇ ಅಷ್ಟೇ ಬೇಗ ಮುಂದಿನ ಕ್ರಮ ಕೈಗೊಳ್ಳುವುದನ್ನೇ ಮರೆತಿದೆ. ಕಳೆದ ಎರಡು ವರ್ಷಗಳಿಂದ ಭೀಕರ ಬರದ ಹಿನ್ನೆಲೆ ಮಾಲೀಕರು ದನಗಳನ್ನು ಸಾಕಾಣಿಕೆ ಮಾಡಲು ಸಾಧ್ಯವಾಗದೇ ರಸ್ತೆಗೆ ಬಿಟ್ಟಿದ್ದು ಸಮಸ್ಯೆಗೆ ಮೂಲ ಕಾರಣ.
ಬಿಡಾಡಿ ದನಗಳ ನಿಯಂತ್ರಣದ ಮಾತು ಅಂದಿನಿಂದ ಇಂದಿನವರೆಗೆ ನಗರದಲ್ಲಿ ಕೇಳಿಬರುತ್ತಿದೆ. ಆದರೆ ಈ ನಿಟ್ಟಿನಲ್ಲಿ ನಿಯಂತ್ರಣ ಕ್ರಮ ಕೈಗೊಂಡಿದ್ದು ತೀರಾ ಕಡಿಮೆ. ಕಳೆದ ವರ್ಷ ಬಿಡಾಡಿ ದನಗಳನ್ನು ನಗರಸಭೆಯ ಸಿಬ್ಬಂದಿ ಹಿಡಿದು ನಗರದಿಂದ ಹೊರಗೆ ಕಳಿಸುವ ಪ್ರಯತ್ನ ಮಾಡಿದ್ದರು.
ಕಾರ್ಯಾಚರಣೆ ಸಂಪೂರ್ಣ ಸ್ಥಗಿತ: ಆದರೆ ರಾಜಕೀಯ ಪ್ರಭಾವದ ಪರಿಣಾಮ ಮುಂದೆ ಕಾರ್ಯಾಚರಣೆ ಸಂಪೂರ್ಣ ಸ್ಥಗಿತಗೊಂಡಿತು. ಅಲ್ಲಿಗೆ ಮತ್ತೆ ದನಗಳು ರಸ್ತೆಗಿಳಿದು ಅಲ್ಲಿಯೇ ಬಿಡಾರ ಹೂಡುತ್ತಿವೆ. ಮನಬಂದಂತೆ ಓಡಾಡುವ ಭಾರೀ ಸಂಖ್ಯೆಯ ದನಗಳಿಂದಾಗಿ ಅನೇಕ ವಾಹನ ಸವಾರರು ಅಪಘಾತಕ್ಕೆ ಸಿಲುಕಿ ಗಾಯಗೊಂಡಿದ್ದೂ ಇದೆ.
ಜಿಲ್ಲಾಡಳಿತ ಕಳೆದ ಕೆಲ ದಿನಗಳಿಂದ ನಗರದಲ್ಲಿ ಸ್ವಚ್ಛತೆಯ ಬಗ್ಗೆ ಜನತೆಗೆ ಎಚ್ಚರಿಕೆ ನೀಡುವ ರೀತಿಯಲ್ಲಿ ಕಾರ್ಯಾಚರಣೆ ನಡೆಸಿದೆ. ಚರಂಡಿಯಲ್ಲಿ ತಂದು ಬಿಸಾಕುತ್ತಿದ್ದ ಕಸವನ್ನು ಪುನಾ ಅಂಗಡಿಗಳೊಳಗೆ ಚೆಲ್ಲುವ ಮೂಲಕ ಎಚ್ಚರಿಕೆ ನೀಡುವ ಕಾರ್ಯವನ್ನು ಜಿಲ್ಲಾಧಿಕಾರಿ ಮಾಡುತ್ತಿದ್ದಾರೆ.
ಜಿಲ್ಲಾಡಳಿತ ಮೌನ ಮುರಿಯಲಿ: ಹಾಗೆಯೇ ನಗರದಲ್ಲಿ ರಸ್ತೆ ಅಗಲೀಕರಣ ಹಿನ್ನೆಲೆ ರಸ್ತೆ ಅತಿಕ್ರಮಣ ಮಾಡಿಕೊಂಡ ಕಟ್ಟಡಗಳನ್ನು ತೆರವುಗೊಳಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಅತ್ಯಾಸಕ್ತಿ ತೋರುತ್ತಿರುವುದು ಸಾರ್ವಜನಿಕರಲ್ಲಿ ಮೆಚ್ಚುಗೆಗೆ ಕಾರಣವಾಗಿದೆ. ಆದರೆ ರಸ್ತೆ ಅಗಲೀಕರಣದ ನಂತರ ಅಂಥ ರಸ್ತೆಗಳಲ್ಲಿ ಬಿಡಾಡಿ ದನಗಳು ಬಿಡಾರ ಹೂಡುತ್ತಿರುವುದು ವಾಹನಗಳ ಸಂಚಾರಕ್ಕೆ ತಡೆಯೊಡ್ಡುತ್ತಿರುವುದು ಜಿಲ್ಲಾಡಳಿತಕ್ಕೆ ಕಾಣುತ್ತಿಲ್ಲ ಎಂಬ ಆರೋಪ ಸಾರ್ವಜನಿಕರಿಂದ ಕೇಳಿಬಂದಿದೆ.
ದಿನವೂ ನಗರದ ಎಸ್ಪಿ ಕಚೇರಿಯಿಂದ ಆರ್‌ಟಿಒ ವೃತ್ತದವರೆಗೆ ನಿರ್ಮಾಣ ಹಂತದಲ್ಲಿರುವ ಚತುಷ್ಪಥ ರಸ್ತೆ ಸೇರಿ ಬಹುತೇಕ ಕಡೆ ಬಿಡಾಡಿ ದನಗಳು ಠಿಕಾಣಿ ಹೂಡುತ್ತಿರುವುದು ಶಾಲೆಗೆ ತೆರಳುವ ಮಕ್ಕಳು, ವಾಹನ ಸವಾರರು, ಪಾದಚಾರಿಗಳು ಹೀಗೆ ಎಲ್ಲರಿಗೂ ತಲೆನೋವು ತಂದಿವೆ.
ರಾಜಕೀಯ ಪ್ರಭಾವ ಕಾರಣ: ನಗರಸಭೆ ಅಧಿಕಾರಿಗಳು ಸಾಲು ಸಾಲು ಚುನಾವಣೆಗಳ ಹಿನ್ನೆಲೆಯಲ್ಲಿ ರಾಜಕೀಯ ಪ್ರಭಾವಕ್ಕೆ ಮಣಿದು ದನಗಳ ಹಾವಳಿ ನಿಯಂತ್ರಣವನ್ನೇ ಕೈಬಿಟ್ಟಿದ್ದಾರೆ. ಜಿಲ್ಲಾಡಳಿತವಾದರೂ ಜಿಲ್ಲಾ ಕೇಂದ್ರದಲ್ಲಿನ ಈ ಸಮಸ್ಯೆ ನಿವಾರಣೆಗೆ ಮುಂದಾಗಬೇಕಿದೆ ಎಂಬುದು ನಾಗರಿಕರ ಮೊರೆಯಾಗಿದೆ.
- ಜಗನ್ನಾಥ ಆರ್. ದೇಸಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement