ಸಮರ್ಪಕ ಕುಡಿವ ನೀರಿಗೆ ಆಗ್ರಹ
ರಾಯಚೂರು: ತಾಲೂಕಿನ ಮರ್ಚೆಡ್ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಪರಿಹರಿಸುವಂತೆ ಜಿಲ್ಲಾ ಜೈ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಗಂಗಾಧರಸ್ವಾಮಿ ಒತ್ತಾಯಿಸಿದ್ದಾರೆ.
ಈ ಕುರಿತು ಜಿಪಂ ಸಿಇಒ ಅವರಿಗೆ ಮನವಿ ಸಲ್ಲಿಸಿ, ಮರ್ಚೆಡ್ ಗ್ರಾಮದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿದ್ದು, ಜನತೆ ನೀರಿಗಾಗಿ ಪರದಾಡುವಂತಾಗಿದೆ. ವಿದ್ಯುತ್ ಅಭಾವದಿಂದಾಗಿ ಗ್ರಾಮಸ್ಥರು ಮಧ್ಯರಾತ್ರಿ ವೇಳೆಯೂ ನೀರಿಗಾಗಿ ಕಾಯುವಂತಾಗಿದೆ ಎಂದು ದೂರಿದ್ದಾರೆ.
ಸದ್ಯ ಗ್ರಾಮಸ್ಥರು 2 ಕಿಮೀ ದೂರದಿಂದ ನೀರು ಹೊತ್ತು ತರುತ್ತಿದ್ದಾರೆ. ಅದರಿಂದ ಅವರ ದೈನಂದಿನ ಬದುಕಿಗೆ ಅಡಚಣೆಯಾಗಿದೆ. ಗ್ರಾಪಂ ಸದಸ್ಯರಿಗೆ ಈ ಬಗ್ಗೆ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕಾರಣ ಕೂಡಲೇ ಗ್ರಾಮಕ್ಕೆ ಸಮರ್ಪಕ ಕುಡಿಯುವ ನೀರು ಪೂರೈಕೆಗೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಈ ವೇಳೆ ಸಂಘಟನೆಯ ವಿವಿಧ ಘಟಕಗಳ ಪ್ರಮುಖರಾದ ಮಾರೆಪ್ಪ ಮರ್ಚೆಡ್, ನರಸರೆಡ್ಡಿ, ರಘುನಾಥ್, ಮಹಿಮೂದ್ ಮತ್ತಿತರರಿದ್ದರು.
ನವೋದಯ ಪರೀಕ್ಷೆ; ವಿದ್ಯಾರ್ಥಿಗಳ ಸಾಧನೆ
ರಾಯಚೂರು: ಜವಾಹರ ನವೋದಯ ಪ್ರವೇಶ ಪರೀಕ್ಷೆಯಲ್ಲಿ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದ ವಿದ್ಯಾಜ್ಯೋತಿ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ 40 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆಂದು ಸಂಸ್ಥೆ ತಿಳಿಸಿದೆ. ಈ ಕುರಿತು ಪ್ರಕಟಣೆ ನೀಡಿ, 2013-14ನೇ ಸಾಲಿನ ಪ್ರವೇಶಕ್ಕೆ ಫೆಬ್ರವರಿಯಲ್ಲಿ ನಡೆದ ಪರೀಕ್ಷೆಯಲ್ಲಿ ಸಂಸ್ಥೆಯಲ್ಲಿ ತರಬೇತಿ ಪಡೆದ 40 ವಿದ್ಯಾರ್ಥಿಗಳು ಪ್ರವೇಶಾವಕಾಶ ಪಡೆಯುವ ಮೂಲಕ ಉತ್ತಮ ಸಾಧನೆ ಮೆರೆದಿದ್ದಾರೆಂದು ತಿಳಿಸಿದೆ.