ಹಣ ದುರುಪಯೋಗ: ತನಿಖೆಗೆ ಒತ್ತಾಯ
ಕನ್ನಡಪ್ರಭ ವಾರ್ತೆ, ಸಿಂಧನೂರು, ಜು.4
ತಾಲೂಕಿನ ಗುಡದೂರು ಗ್ರಾಮ ಪಂಚಾಯಿತಿಯಲ್ಲಿ 2012-13ನೇ ಸಾಲಿನ 13ನೇ ಹಣಕಾಸು ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿಗಳಿಗೆ ಮಂಜೂರಾದ 6ಲಕ್ಷ ಹಣವನ್ನು ದುರುಪಯೋಗ ಮಾಡಿಕೊಳ್ಳಲಾಗಿದೆ ಎಂದು ಸದಸ್ಯರು ಒತ್ತಾಯಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮತ್ತು ಅಭಿವೃದ್ಧಿ ಅಧಿಕಾರಿ ಶಾಮೀಲಾಗಿ ಯಾವುದೇ ಕಾಮಗಾರಿಗಳನ್ನು ಕೈಗೊಳ್ಳದೆ ದುರ್ಬಳಕೆ ಮಾಡಿಕೊಂಡಿದ್ದಾರೆ. ಕಾಮಗಾರಿ ಕ್ರಿಯಾಯೋಜನೆ ಆಗಬೇಕಾದರೆ ಸರ್ವ ಸದಸ್ಯರ ಗಮನಕ್ಕೆ ತರಬೇಕು. ಅದು ಸಾಮಾನ್ಯ ಸಭೆಯಲ್ಲಿ ಠರಾವು ಕೂಡ ಆಗಬೇಕು. ಅಂದಾಗ ಮಾತ್ರ ಹಣವನ್ನು ಬಳಸಬಹುದು. ಆದರೆ ಪಿಡಿಒ ಮತ್ತು ಅಧ್ಯಕ್ಷರು ಸದಸ್ಯರಿಗೆ ತಿಳಿಸದೇ ತಮ್ಮ ಮನಸೋಇಚ್ಛೇ ವರ್ತಿಸುತ್ತಿದ್ದಾರೆ. ಸಾಮಾನ್ಯ ಸಭೆ ಕರೆಯದೇ ನಿರ್ಲಕ್ಷ್ಯ ತಾಳಿದ್ದಾರೆಂದು ಆರೋಪಿಸಿದ್ದಾರೆ.
ಗ್ರಾಪಂ ವ್ಯಾಪ್ತಿಯ ಹಲವು ಗ್ರಾಮಗಳಲ್ಲಿ ಅನೇಕ ಕಾಮಗಾರಿಗಳು ನೆನೆಗುದಿಗೆ ಬಿದಿದ್ದು, ಅವುಗಳನ್ನು ಕೈಗೆತ್ತಿಕೊಳ್ಳಬೇಕು. 6 ಲಕ್ಷ ಹಣವನ್ನು ಪುನಃ ಪಂಚಾಯಿತಿ ಖಾತೆಗೆ ಸೇರಿಸಬೇಕೆಂದು ಸದಸ್ಯರಾದ ಸಂಗಪ್ಪ ದೀನಸಮುದ್ರ, ಅಮರೇಶ ಹಸಮಕಲ್, ನೀಲಕಂಠ ರಂಗಾಪೂರ, ಕೈಲಾಸಪತಿ ಹೆಡಗಿನಾಳಕ್ಯಾಂಪ್, ಅಮೀನಸಾಬ ಮೇರನಾಳ, ಶಂಕ್ರಪ್ಪ ಹಸಮಕಲ್, ದೊಡ್ಡನಗೌಡ ಗೋನಾಳ, ಹಾಗೂ ಅಖಿಲ ಭಾರತ ದಲಿತ ಮಹಾಸಭಾ ಜಿಲ್ಲಾಧ್ಯಕ್ಷ ಮರಿಸ್ವಾಮಿ ಹಸಮಕಲ್ ಆಗ್ರಹಿಸಿದ್ದಾರೆ.