12ರಿಂದ ಮಕ್ಕಳ ಚಲನ ಚಿತ್ರೋತ್ಸವ
ರಾಯಚೂರು: ಜಿಲ್ಲಾದ್ಯಂತ ಜು. 12ರಿಂದ ಮಕ್ಕಳ ಚಲನಚಿತ್ರೋತ್ಸವ ಆಯೋಜಿಸಲು ಇತ್ತೀಚೆಗೆ ನಗರದಲ್ಲಿ ಕರೆದಿದ್ದ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯ ಸಭೆಯಲ್ಲಿ ನಿರ್ಧರಿಸಲಾಯಿತು. ಈ ಬಗ್ಗೆ ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರ ಸೂಚನೆ ಮೇರೆಗೆ ಈ ಚಿತ್ರೋತ್ಸವ ಆಯೋಜಿಸಿದ್ದು, ಜು. 12ರಿಂದ 18ರವರೆಗೆ ವಿವಿಧ ಚಿತ್ರಮಂದಿರಗಳಲ್ಲಿ ಆಯೋಜಿಸಲು ಸಭೆ ನಿರ್ಧರಿಸಿತು.
ತಲಾ 10 ಪ್ರವೇಶ ದರ: ಚಲನಚಿತ್ರ ವೀಕ್ಷಿಸಲು ತಲಾ 10 ವಿಧಿಸಲು ಸಭೆ ನಿರ್ಧರಿಸಿತು. ಜಿಲ್ಲೆಯ ಎಲ್ಲ ತಾಲೂಕುಗಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಮ್ಮ ತಮ್ಮ ತಾಲೂಕುಗಳಲ್ಲಿನ ಚಿತ್ರಮಂದಿರಗಳ ಆಸನ ವ್ಯವಸ್ಥೆ ಗಮನದಲ್ಲಿಟ್ಟುಕೊಂಡು ಆಯಾ ಶಾಲೆಗಳ ಮಕ್ಕಳನ್ನು ಚಲನಚಿತ್ರೋತ್ಸವ ಕಾರ್ಯಕ್ರಮಕ್ಕೆ ಕರೆದೊಯ್ಯಲು ಶಾಲೆಗಳ ಮುಖ್ಯಗುರುಗಳಿಗೆ ಸೂಚಿಸಲು ಹೆಚ್ಚುವರಿ ಜಿಲ್ಲಾಧಿಕಾರಿ ತಿಮ್ಮಪ್ಪ ತಿಳಿಸಿದರು. ಚಲನಚಿತ್ರ ಪ್ರದರ್ಶನವನ್ನು ಬೆಳಗ್ಗೆ 8ರಿಂದ 10ರವರೆಗೆ ಮಾತ್ರ ನಡೆಸಲು ಸಭೆ ನಿರ್ಧರಿಸಿತು. ಜಿಲ್ಲೆಯ ಎಲ್ಲಾ ತಹಸೀಲ್ದಾರರು ಸಂಬಂಧಿಸಿದ ಅರಕ್ಷಕ ವೃತ್ತ ನಿರೀಕ್ಷಕರು, ಕ್ಷೇತ್ರ ಶಿಕ್ಷಣಾಧಿಕಾರಿಗಳು ಚಿತ್ರಮಂದಿರಗಳ ಮಾಲೀಕರೊಂದಿಗೆ ಸಭೆ ನಡೆಸಿ ಚಲನಚಿತ್ರ ಪ್ರದರ್ಶನದ ಯಶಸ್ವಿಗೆ ಕಾರ್ಯನಿರ್ವಹಿಸಲು ಸಭೆ ಆದೇಶಿಸಿತು.
ಉದ್ಘಾಟನೆ: ತಾಲೂಕುಗಳಲ್ಲಿ ತಹಸೀಲ್ದಾರರರು ಜು.12ರಂದು ಆಯ್ದ ಚಲನಚಿತ್ರ ಮಂದಿರದಲ್ಲಿ ಚಿತ್ರೋತ್ಸವಕ್ಕೆ ಚಾಲನೆ ನೀಡಬೇಕು. ಜು.14ರಂದು ಚಿತ್ರಪ್ರದರ್ಶನ ನಡೆಸದಂತೆ ಸಭೆ ಸೂಚಿಸಿತು. ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.