ಪುರಾತನ ರಸ್ತೆ ರಕ್ಷಣೆ: ಕಾಮಗಾರಿ ಸ್ಥಗಿತ ಎಚ್ಚರಿಕೆ
ಲಿಂಗಸ್ಗೂರು: ಅಮರೇಶ್ವರ ಕ್ರಾಸ್ ಹತ್ತಿರದ ಪುರಾತನ ರಸ್ತೆ ಉಳಿಸಬೇಕು. ಇಲ್ಲದಿದ್ದರೆ ಉಪಕಾಲುವೆ ಕಾಮಗಾರಿ ಸ್ಥಗಿತಗೊಳಿಸಲಾಗುವುದೆಂದು ಗ್ರಾಮಸ್ಥರು ಎಚ್ಚರಿಕೆ ನೀಡಿದರು.
ತಾಲೂಕಿನ ಸುಕ್ಷೇತ್ರ ಅಮರೇಶ್ವರ ಕ್ರಾಸ್ ಬಳಿ ರಾಂಪೂರ ಏತ ನೀರಾವರಿಯ 10ನೇ ಉಪಕಾಲುವೆ ಸುಮಾರು 15 ಕಿಮೀ.ವರೆಗೆ ಕಾಮಗಾರಿ ಆರಂಭಿಸಲಾಗಿದೆ. ಮೇದಿನಾಪುರದಿಂದ ಸುಕ್ಷೇತ್ರ ಅಮರೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆ ಪುರಾತನ ಕಾಲದಿಂದ ಇರುತ್ತದೆ. ಆದರೆ ರಸ್ತೆ ಮೇಲೆ ಕಾಲುವೆ ಹಾದು ಹೋಗಿದ್ದು, ಸುಗಮ ಸಂಚಾರಕ್ಕೆ ಕಾಲುವೆ ಮೇಲೆ ಸೇತವೆ ನಿರ್ಮಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಮನವಿ ಮಾಡಿದರೆ ಸೇತುವೆ ನಿರ್ಮಿಸಲು ನಿರಾಕರಿಸುತ್ತಿದ್ದಾರೆ.
ಅಲ್ಲದೆ, ಅಮರೇಶ್ವರ ಕ್ರಾಸ್ನಿಂದ ಸಂಚರಿಸುವಂತೆ ತಾಕೀತು ಮಾಡುತ್ತಿದ್ದಾರೆ. ಇದರಿಂದ ಸುತ್ತಮುತ್ತಲ ಗ್ರಾಮಸ್ಥರು ಹೊಲ, ಗದ್ದೆಗಳಿಗೆ ತೆರಳಲು ತೀವ್ರ ತೊಂದರೆ ಅನುಭವಿಸುವಂತಾಗಿದೆ. ಕೂಡಲೆ ಅಧಿಕಾರಿಗಳು ಗಮನ ಹರಿಸಿ ಕಾಲುವೆ ಮೇಲೆ ಸೇತುವೆ ನಿರ್ಮಿಸಲು ಸೂಚನೆ ನೀಡಬೇಕು. ಇಲ್ಲದಿದ್ದರೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದೆಂದು ರೈತರಾದ ಶಿವಪ್ಪ ಐದನಾಳ, ದೊಡ್ಡ ಲಿಂಗಪ್ಪ, ಸಾಬಣ್ಣ ಹಂಚಿನಾಳ, ಅಂಬಣ್ಣ, ಮಾನಪ್ಪ, ಎಚ್.ಎ. ಗೌಡರ, ಮಾನಪ್ಪ ಉಪ್ಪಾರ, ದುರುಗಪ್ಪ ಕರೇಕುರಿ ಸೇರಿದಂತೆ ಎಚ್ಚರಿಕೆ ನೀಡಿದರು.