ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಬಸ್ ಸೌಲಭ್ಯಕ್ಕೆ ಒತ್ತಾಯಿಸಿ ವಿದ್ಯಾರ್ಥಿಗಳಿಂದ ರಸ್ತೆ ತಡೆ

Mainashree
Updated On : 7 Jul 2013, 11:49 am

ಕನ್ನಡಪ್ರಭ ವಾರ್ತೆ  ಸಿಂಧನೂರು  ಜು.6
ಸಿಂಧನೂರು- ಮಸ್ಕಿ ಮಾರ್ಗಕ್ಕೆ ಬೆಳಿಗ್ಗೆ ಬಸ್ ಸಂಚಾರ ಆರಂಭಿಸುವಂತೆ ಆಗ್ರಹಿಸಿ ತಾಲೂಕಿನ ಗುಡದೂರು ಒಳಬಳ್ಳಾರಿ ಚನ್ನಬಸವೇಶ್ವರ ಶಾಲೆಯ ವಿದ್ಯಾರ್ಥಿಗಳು ದಿಢೀರ್ ರಸ್ತೆತಡೆ ಚಳವಳಿ ನಡೆಸಿದರು.
ತಾಲೂಕಿನ ಬಳಗಾನೂರು, ಗೌಡನಬಾವಿ, ಪಗಡದಿನ್ನಿ ಸೇರಿದಂತೆ ಮತ್ತಿತರ ಗ್ರಾಮಗಳಿಂದ ಗುಡದೂರು ಶಾಲೆಗೆ ಆಗಮಿಸಲು ಬಸ್‌ಸೌಲಭ್ಯ ಇಲ್ಲದ ಕಾರಣ ತರಗತಿಗೆ ಹಾಜರಾಗಲು ವಿಳಂಬವಾಗುತ್ತಿದೆ. ಎಕ್ಸ್‌ಪ್ರೆಸ್‌ಗಳು ಸಾಕಷ್ಟು ಓಡಾಡುತ್ತಿದ್ದರೂ ನಿಲ್ಲಿಸುವುದಿಲ್ಲ. ಹೀಗಾಗಿ ನಸುಕಿನಲ್ಲಿ ಎದ್ದು ಸಿದ್ಧರಾಗಿ ಬಸ್ ಆಗಮನಕ್ಕಾಗಿ ರಸ್ತೆಯ ಪಕ್ಕದಲ್ಲಿ ಕಾಯ್ದು ಕುಳಿತುಕೊಳ್ಳುವಂತಾಗಿದೆ. ಈ ಬಗ್ಗೆ ಬಸ್ ಡಿಪೋ ವ್ಯವಸ್ಥಾಪಕರ ಬಳಿ ತಮ್ಮ ಸಮಸ್ಯೆ ಹೇಳಿಕೊಂಡರೂ ಸರಿಯಾದ ಸಮಯಕ್ಕೆ ಬಸ್ ಬಿಡುತ್ತಿಲ್ಲ. ಖಾಸಗಿ ವಾಹನದಲ್ಲಿ ದಿನಾಲೂ ಹತ್ತಾರು ರೂಪಾಯಿ ಕೊಟ್ಟು ಸಂಚರಿಸುವುದು ಹೊರೆಯಾಗುತ್ತಿದೆ ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಲಿಂಗಸ್ಗೂರು ಉಪವಿಭಾಗದ ಸಹಾಯಕ ಆಯುಕ್ತ ಟಿ. ಯೋಗಿಶ ಮಸ್ಕಿ ಹಾಗೂ ಸಿಂಧನೂರು ಕೆಎಸ್‌ಆರ್‌ಟಿಸಿ ಬಸ್ ಡಿಪೋ ವ್ಯವಸ್ಥಾಪಕರನ್ನು ಕರೆಯಿಸಿ ಅವಶ್ಯಕತೆಗೆ ಅನುಗುಣವಾಗಿ ಈ ಮಾರ್ಗದಲ್ಲಿ ಕೂಡಲೇ ಬಸ್ ಸಂಚಾರ ಆರಂಭಿಸುವಂತೆ ಸೂಚಿಸಿದರು. ಸಹಾಯಕ ಆಯುಕ್ತರ ಕ್ರಮದ ಭರವಸೆಯ ಕಾರಣ ವಿದ್ಯಾರ್ಥಿಗಳು ರಸ್ತೆತಡೆ ಚಳವಳಿಯನ್ನು ಮೊಟಕುಗೊಳಿಸಿ ತರಗತಿಗಳಿಗೆ ಹಾಜರಾದರು.
ಸಿಂಧನೂರು- ಮಸ್ಕಿ ಮುಖ್ಯರಸ್ತೆಯಲ್ಲಿ ಪೂರ್ವಾನುಮತಿ ಇಲ್ಲದೆ ವಿದ್ಯಾರ್ಥಿಗಳು ಹಠಾತ್ ರಸ್ತೆತಡೆ ನಡೆಸಿದ್ದರಿಂದ ಸುಮಾರು ಒಂದುವರೆ ಗಂಟೆ ಕಾಲ ಸಂಚಾರ ವಿಳಂಬವಾಯಿತು. ರಸ್ತೆಯುದ್ದಕ್ಕೂ ವಾಹನಗಳು ತುಂಬಿ ಸಂಚಾರ ಅಸ್ತವ್ಯಸ್ತವಾಯಿತು. ಬಳಗಾನೂರು ಪೊಲೀಸ್ ಠಾಣೆ ಪಿಎಸ್‌ಐ ಬಾಳನಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement