ಮುಖ್ಯಗುರು ವರ್ಗಕ್ಕೆ ಕರವೇ ಒತ್ತಾಯ
ಲಿಂಗಸ್ಗೂರು: ತಾಲೂಕಿನ ವ್ಯಾಕರನಾಳ ಗ್ರಾಮದ ಶಾಲಾ ಮುಖ್ಯಗುರುವನ್ನು ಬೇರೆಡೆ ನಿಯೋಜನೆ ಮಾಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಶನಿವಾರ ಬಿಇಒ ಅಮರಪ್ಪ ಭೋವಿ ಅವರಿಗೆ ಮನವಿ ಸಲ್ಲಿಸಿದರು.
ಆರೋಪ: ವ್ಯಾಕರನಾಳ ಗ್ರಾಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯಗುರು ಕಾವೇರಿಬಾಯಿ, ಪ್ರತಿನಿತ್ಯ ಸರಿಯಾಗಿ ಶಾಲೆಗೆ ಹಾಜರಾಗದೆ ಕರ್ತವ್ಯ, ಭ್ರಷ್ಟತೆ, ಹಣ ದುರ್ಬಳಕೆ ಮಾಡಿಕೊಂಡಿದ್ದಾರೆ. ಅಲ್ಲದೆ ಸಹ ಶಿಕ್ಷಕರ ಜೊತೆ ಹೊಂದಾಣಿಕೆ ಇಲ್ಲದಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಪರಿಶಿಷ್ಟ ಜಾತಿ, ಪಂಗಡ ವಿದ್ಯಾರ್ಥಿಗಳ ಶಾಲಾ ಬ್ಯಾಗ್ ನೀಡಿರುವುದಿಲ್ಲ. ಅಲ್ಪಸಂಖ್ಯಾತ ಮಕ್ಕಳ ಶಿಷ್ಯವೇತನದ ಅರ್ಜಿ ಕಳುಹಿಸಿರುವುದಿಲ್ಲ. ಮಕ್ಕಳಿಗೆ ಸಮವಸ್ತ್ರ ಹಂಚಿಕೆ ಮಾಡಿರುವುದಿಲ್ಲವೆಂದು ಆರೋಪಿಸಿದರು.
ಎಚ್ಚರಿಕೆ: ಈ ಎಲ್ಲ ಅಂಶಗಳ ಕುರಿತು ಕೂಲಂಕುಶವಾಗಿ ಪರಿಗಣಿಸಿ ವಾರದೊಳಗೆ ಸೂಕ್ತ ತನಿಖೆ ಕೈಗೊಂಡು ಮುಖ್ಯಗುರು ಕಾವೇರಿಬಾಯಿ ಅವರನ್ನು ಬೇರೆಡೆಗೆ ನಿಯೋಜಿಸಬೇಕು. ಇಲ್ಲದಿದ್ದರೆ ಶಾಲೆಗೆ ಬೀಗ ಹಾಕಿ ಉಗ್ರ ಹೋರಾಟ ನಡೆಸುವುದಾಗಿ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷ ಜಿಲಾನಿ ಪಾಶಾ, ಅಜೀಜ್ ಪಾಶಾ, ಶಿವರಾಜ ನಾಯಕ, ಎಸ್‌ಡಿಎಂಸಿ ಸದಸ್ಯ ಶಂಕರಪ್ಪ, ಗ್ರಾಮದ ಶಂಕರಗೌಡ, ಈರಪ್ಪ, ಯಮನೂರಸಾಬ, ಶರಣಬಸವ, ಮಲ್ಕಾಜಪ್ಪ, ವಿರುಪಾಕ್ಷಪ್ಪ, ಶರಣಪ್ಪ, ಆದಪ್ಪ ಇನ್ನಿತರರು ಇದ್ದರು.