ವಿದ್ಯಾರ್ಥಿಗಳಿಗೆ ಏಕಾಗ್ರತೆ, ಬಕಧ್ಯಾನ ಅವಶ್ಯ: ಪರಮೇಶ್ವರಪ್ಪ
ಕನ್ನಡಪ್ರಭ ವಾರ್ತೆ ಸಿಂಧನೂರು ಜು.6
ವಾಣಿಜ್ಯ ಶಾಸ್ತ್ರದ ವಿದ್ಯಾರ್ಥಿಗಳಾದರೂ ಕನ್ನಡ ಸಾಹಿತ್ಯವನ್ನು, ಕಥೆ, ಕವನ, ಕಾವ್ಯಗಳನ್ನು ಅಧ್ಯಯನ ಮಾಡಬೇಕು. ವಿದ್ಯಾರ್ಥಿಗಳು, ಉಪನ್ಯಾಸಕರು ಇಬ್ಬರ ಮನಸ್ಸು ಒಂದಾದರೆ ಮಾತ್ರ ವಿದ್ಯೆ ಲಭಿಸುತ್ತದೆ. ಮುಖ್ಯವಾಗಿ ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ಏಕಾಗ್ರತೆ ಹಾಗೂ ಬಕಧ್ಯಾನ ಅವಶ್ಯ ಎಂದು ರಾಯಚೂರಿನ ಎಸ್‌ಎಸ್‌ಎಂ ಕಾಲೇಜ್ ಕನ್ನಡ ಪ್ರಾಧ್ಯಾಪಕ ಪರಮೇಶ್ವರಪ್ಪ ಅಭಿಪ್ರಾಯಪಟ್ಟರು.
ಕೋಟೆ ವೀರಣ್ಣ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಂಡಿದ್ದ ವಿಜ್ಡಮ್ ಕಾಲೇಜ್ ಆಫ್ ಕಾಮರ್ಸ್ ಮ್ಯಾನೇಜ್‌ಮೆಂಟ್‌ನಲ್ಲಿ ಬಿಕಾಂ ಪ್ರಥಮ ವಿದ್ಯಾರ್ಥಿಗಳಿಗೆ ಸ್ವಾಗತ ಹಾಗೂ ಪಿಜಿಡಿಟಿಎಂ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
ಓದು ನೌಕರಿಗಾಗಿ ಅಲ್ಲ, ಜ್ಞಾನಕ್ಕಾಗಿ: ಯೌವನ, ಶ್ರೀಮಂತಿಕೆ, ಅಧಿಕಾರ ಯಾವುದೂ ಶಾಶ್ವತವಲ್ಲ. ಕಲಿತ ವಿದ್ಯೆ ಮಾತ್ರ ಸಾಯುವ ತನಕ ಎಲ್ಲರೊಂದಿಗೆ ಬರುವುದು. ಓದುವುದು ನೌಕರಿಗಾಗಿ ಅಲ್ಲ, ಜ್ಞಾನಕ್ಕಾಗಿ. ಈ ಹಂತದಲ್ಲಿ ವಿದ್ಯಾರ್ಥಿಗಳು ಅವಿರತವಾಗಿ ಪರಿಶ್ರಮಪಟ್ಟು ಶ್ರದ್ಧೆಯಿಂದ ಅಭ್ಯಾಸ ಮಾಡಿ ಕಾಲೇಜಿನ ಕೀರ್ತಿಯನ್ನು ತರಬೇಕೆಂದು ಕಿವಿಮಾತು ಹೇಳಿದರು.
ಚಾಣಕ್ಯ ಎಜ್ಯುಕೇಷನಲ್ ಟ್ರಸ್ಟ್ ಅಧ್ಯಕ್ಷ ಸಿ.ಕೆ.ರಾಜಣ್ಣ ಮಾತನಾಡಿ, ಕಾಲೇಜು ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಅನೇಕ ಹೊಸ ಹೊಸ ಸಾಮಗ್ರಿಗಳನ್ನು, ಉತ್ತಮ ಗ್ರಂಥಾಲಯವನ್ನು ಹೊಂದಿದೆ. ಬಡವಿದ್ಯಾರ್ಥಿಗಳಿಗೆ ಉಚಿತ ಪ್ರವೇಶಗಳನ್ನು ನೀಡಲು ಮುಂದೆ ಬಂದಿದೆ. ವಿದ್ಯಾರ್ಥಿಗಳು ಕಾಲೇಜಿನ ಸದುಪಯೋಗಪಡಿಸಿಕೊಂಡು ಉತ್ತಮ ಫಲಿತಾಂಶ ನೀಡಬೇಕೆಂದು ಹೇಳಿದರು.
ಕಾರ್ಯಕ್ರಮವನ್ನು ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಹ್ಲಾದ ಗುಡಿ ಉದ್ಘಾಟಿಸಿ ಮಾತನಾಡಿದರು. ವಿದ್ಯಾರ್ಥಿಗಳಾದ ಸುಮಾ ನಾಯ್ದು, ಶ್ರೀರಾಮ, ಪ್ರಿಯಾಂಕ, ಅಶೋಕ, ಲಿಂಗರಾಜ ಪಾಟೀಲ್, ಜಯರಾಮ, ಅಸ್ಮಾ ಖಾನಂ, ಶರಣಪ್ಪ, ಹರೀಶ, ಯಾಸಿಕಾ, ಲೀಲಾ, ಸುಹಾಸ, ಬಷೀರಾ, ಅಂದಾನಪ್ಪ ತಮ್ಮ ಕಾಲೇಜಿನ ಅನುಭವಗಳನ್ನು ಹಂಚಿಕೊಂಡರು. ಉಪನ್ಯಾಸಕರ ಪರವಾಗಿ ವಸಂತಕುಮಾರ ಮಾತನಾಡಿದರು.
ಕಾರ್ಯಕ್ರಮದಲ್ಲಿ ಚಾಣಕ್ಯ ಎಜ್ಯುಕೇಷನಲ್ ಟ್ರಸ್ಟ್‌ನ ಉಪಾಧ್ಯಕ್ಷ ಶರಣಪ್ಪ ಪಾಟೀಲ್, ಕಾರ್ಯದರ್ಶಿ ಆರ್.ಸಿ. ಜಯಪ್ರಕಾಶ, ಖಜಾಂಚಿ ಎಸ್.ಎ.ಖಾದ್ರಿ ಪಾಲ್ಗೊಂಡಿದ್ದರು. ಅಧ್ಯಕ್ಷತೆಯನ್ನು ವಿಜ್ಡಮ್ ಕಾಲೇಜಿನ ಪ್ರಾಚಾರ್ಯ ಆರ್. ಅನಿಲಕುಮಾರ ವಹಿಸಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಸ್ಪರ್ಧಿಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಕಾಲೇಜು ವತಿಯಿಂದ ಬಹುಮಾನಗಳನ್ನು ವಿತರಿಸಲಾಯಿತು. ಆರಂಭದಲ್ಲಿ ಜಗದೀಶ್ವರಿ ಮತ್ತು ಶ್ವೇತ ಪ್ರಾರ್ಥಿಸಿದರು. ಎಸ್.ಎ. ಖಾದ್ರಿ ಪ್ರಾಸ್ತಾವಿಕ ಮಾತನಾಡಿದರು. ಕಾರ್ಯಕ್ರಮವನ್ನು ಶಿವರಾಮರೆಡ್ಡಿ, ಹೀನಾ ತಬ್ ನಿರೂಪಿಸಿದರು. ಬಸವರಾಜ ವಂದಿಸಿದರು.