ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಸಂಕ್ಷಿಪ್ತ ಸುದ್ದಿ

Mainashree
Updated On : 7 Jul 2013, 11:49 am

ನಾಳೆಯಿಂದ ಬಿ.ಟೆಕ್, ಬಿಎಸ್ಸಿ(ಕೃಷಿ) ಕೌನ್ಸೆಲಿಂಗ್
ರಾಯಚೂರು: ರಾಯಚೂರು ಕೃಷಿ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ(ಕೃಷಿ) ಮತ್ತು ಬಿ.ಟೆಕ್(ಕೃಷಿ ತಾಂತ್ರಿಕ) ಕೋರ್ಸುಗಳ ಪ್ರವೇಶಕ್ಕೆ ಜು. 8ರಿಂದ ಕೌನ್ಸೆಲಿಂಗ್ ಪ್ರಕ್ರಿಯೆ ನಡೆಯಲಿದೆ ಎಂದು ವಿವಿ ತಿಳಿಸಿದೆ. ಬಿಎಸ್ಸಿ(ಕೃಷಿ), ಬಿಟೆಕ್ (ಕೃಷಿ ತಾಂತ್ರಿಕ) ಸ್ನಾತಕ ಪದವಿಗಳ ಪ್ರವೇಶಕ್ಕೆ ಈಗಾಗಲೇ ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳ ಮೆರಿಟ್ ಪಟ್ಟಿಯನ್ನು ವಿವಿ ಅಂತರ್ಜಾಲದಲ್ಲಿ ಜು. 4ರಂದು ಪ್ರಕಟಿಸಲಾಗಿದೆ. ಅಭ್ಯರ್ಥಿಗಳು ಮೆರಿಟ್ ಆಧಾರದಲ್ಲಿ ಶೇ.60 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದವರು ಜು. 8ರಂದು ಕೌನ್ಸೆಲಿಂಗ್‌ಗೆ ಹಾಜರಾಗಲು ತಿಳಿಸಿದೆ. ಜು.9ರಂದು ಶೇ.50 ಹಾಗೂ ಅದಕ್ಕಿಂತ ಹೆಚ್ಚಿನ ಅಂಕ ಗಳಿಸಿದ ಅಭ್ಯರ್ಥಿಗಳು ಹಾಗೂ ಜು. 10ರಂದು ಶೇ. 50ಕ್ಕಿಂತ ಕಡಿಮೆ ಅಂಕ ಗಳಿಸಿದವರು ಕೌನ್ಸೆಲಿಂಗ್‌ನಲ್ಲಿ ಪಾಲ್ಗೊಳ್ಳಬೇಕು. ಕೌನ್ಸೆಲಿಂಗ್‌ಗೆ ಹಾಜರಾಗಲು ಕುಲಸಚಿವ ಡಿ.ಪಿ. ಬಿರಾದಾರ್ ತಿಳಿಸಿದ್ದು, ಎನ್‌ಸಿಸಿ, ಕ್ರೀಡೆ, ಗೈಡ್ಸ್, ಡಿಫೆನ್ಸ್, ಮಾಜಿ ಸೈನಿಕ, ಅಂಗವಿಕಲ ಮತ್ತು ಆಂಗ್ಲೋ ಇಂಡಿಯನ್ ವಿಶೇಷ ಕೋಟಾದಡಿ ಸೀಟು ಬಯಸುವ ಅಭ್ಯರ್ಥಿಗಳು ಜು.8ರಂದು ಪ್ರಕ್ರಿಯೆಗೆ ಹಾಜರಾಗಲು ತಿಳಿಸಿದ್ದಾರೆ.
9ರಂದು ತ್ಯಾಜ್ಯ ನಿರ್ವಹಣೆ ತರಬೇತಿ
ರಾಯಚೂರು: ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಪಶುಪಾಲನಾ, ಪಶು ವೈದ್ಯಕೀಯ ಸೇವಾ ಇಲಾಖೆ ಹಾಗೂ ಜಿಲ್ಲೆಯಲ್ಲಿನ ಎಲ್ಲ ಖಾಸಗಿ ಆಸ್ಪತ್ರೆಗಳ ತ್ಯಾಜ್ಯ ನಿರ್ವಹಣೆ ಕುರಿತು ಇಲಾಖೆಗಳ ಸಿಬ್ಬಂದಿಗೆ ಜು.9ರಂದು ತರಬೇತಿ ಆಯೋಜಿಸಲಾಗಿದೆ. ಅಂದು ಬೆಳಗ್ಗೆ 10ಕ್ಕೆ ಭಾರತೀಯ ವೈದ್ಯಕೀಯ ಸಂಘದ ಸಭಾಂಗಣದಲ್ಲಿ ಈ ಕಾರ್ಯಾಗಾರ ಏರ್ಪಡಿಸಿದ್ದು, ಕಾರ್ಯಾಗಾರವನ್ನು ಜಿಲ್ಲಾಧಿಕಾರಿ ಎಸ್.ಎನ್. ನಾಗರಾಜು ಉದ್ಘಾಟಿಸಲಿದ್ದಾರೆ. ಬೆಂಗಳೂರಿನ ಸೇಂಟ್ ಜಾನ್ಸ್ ಮೆಡಿಕಲ್ ಕಾಲೇಜಿನ ಪ್ರೊ. ರಾಮನಗೌಡ ತರಬೇತಿ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ವೆಂಕಟೇಶ್ ಹಾಗೂ ಆರೋಗ್ಯ ತ್ಯಾಜ್ಯ ನಿರ್ವಹಣಾಧಿಕಾರಿ ಸಂತೋಷ್ ಪಾಲ್ಗೊಳ್ಳಲಿದ್ದಾರೆಂದು ಪ್ರಕಟಣೆ ತಿಳಿಸಿದೆ.
ಮದ್ಯ ವ್ಯಸನಿ ಆತ್ಮಹತ್ಯೆ
ರಾಯಚೂರು: ದೇವದುರ್ಗ ತಾಲೂಕಿನ ಜಾಗೀರ ಜಾಡಲದಿನ್ನಿ ಗ್ರಾಮದಲ್ಲಿ ಮದ್ಯ ವ್ಯಸನಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮೃತನನ್ನು ಭದ್ರಪ್ಪ ಎಂದು ಗುರುತಿಸಲಾಗಿದೆ. ಈತ ಮದ್ಯ ವ್ಯಸನಿಯಾಗಿದ್ದು, ರಾತ್ರಿ ವೇಳೆ ಮನೆಯಲ್ಲಿರಿಸಿದ್ದ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದಾನೆ. ಕೂಡಲೇ ಆತನನ್ನು ರಾಯಚೂರಿನ ಸುರಕ್ಷಾ ಆಸ್ಪತ್ರೆಗೆ ಸೇರಿಸಿದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ದೇವದುರ್ಗ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹೊಟ್ಟೆನೋವು; ವ್ಯಕ್ತಿ ಆತ್ಮಹತ್ಯೆ
ರಾಯಚೂರು: ಮಾನವಿ ತಾಲೂಕಿನ ಹಾಲಾಪುರ ಗ್ರಾಮದಲ್ಲಿ ಸಾಲ ಬಾಧೆ ಮತ್ತು ಹೊಟ್ಟೆನೋವಿನಿಂದ ಬೇಸತ್ತ ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಮೃತನನ್ನು ಶೇಖರಪ್ಪ ಎಂದು ಗುರುತಿಸಲಾಗಿದೆ. ಈತ ಸಾಲ ಮಾಡಿಕೊಂಡಿದ್ದು, ಹೊಟ್ಟೆನೋವಿನಿಂದ ಬಳಲುತ್ತಿದ್ದ. ಅದರಿಂದ ಬೇಸತ್ತಿದ್ದ ಈತ ಕ್ರಿಮಿನಾಶಕ ಸೇವಿಸಿ ಅಸ್ವಸ್ಥಗೊಂಡಿದ್ದು, ಲಿಂಗಸ್ಗೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ. ಈ ಕುರಿತು ಕವಿತಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಂಜಲದಿನ್ನಿ; ವ್ಯಕ್ತಿ ಶವ ಪತ್ತೆ
ರಾಯಚೂರು: ಸಿಂಧನೂರು ತಾಲೂಕಿನ ನಂಜಲದಿನ್ನಿ ಗ್ರಾಮದಲ್ಲಿ ಅಪರಿಚಿತ ವ್ಯಕ್ತಿಯೊಬ್ಬನ ಶವವು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಮೃತನ ಗುರುತು ಪತ್ತೆಯಾಗಿಲ್ಲ. ಗ್ರಾಮದ ಈರಪ್ಪ ಎಂಬುವವರ ಹೊಲದಲ್ಲಿ ವ್ಯಕ್ತಿಯೊಬ್ಬನ ಶವ ಮರಕ್ಕೆ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಬಗ್ಗೆ ಸಿಂಧನೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಶಿಷ್ಯ ವೇತನ ಪರೀಕ್ಷೆಯಲ್ಲಿ ತೇರ್ಗಡೆ
ಲಿಂಗಸ್ಗೂರು: ತಾಲೂಕಿನ ಬಯ್ಯಾಪುರ ಸರ್ಕಾರಿ ಪ್ರೌಢ ಶಾಲೆ ಮತ್ತು ಪಟ್ಟಣದ ಅಮರೇಶ್ವರ ಬಾಲಕಿಯರ ಪ್ರೌಢ ಶಾಲೆ ಮಕ್ಕಳು ಎನ್‌ಎಂಎಂಎಸ್(ರಾಷ್ಟ್ರೀಯ ಪ್ರತಿಭಾನ್ವೇಷಣೆ ವಿದ್ಯಾರ್ಥಿ ವೇತನ) ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಬಯ್ಯಾಪುರ ಸರ್ಕಾರಿ ಪ್ರೌಢ ಶಾಲೆಯ 8ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಲಕ್ಷ್ಮೀ ಅಂದಾನಿಗೌಡ ಹಾಗೂ ಪಟ್ಟಣದ ಅಮರೇಶ್ವರ ಬಾಲಕಿಯರ ಪ್ರೌಢ ಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ಕುಮಾರಿ ಶಾರದಾ ಕುಪ್ಪಯ್ಯ ಎಂಬುವರು 2012- 13 ನೇ ಸಾಲಿನ ಎನ್‌ಎಂಎಂಎಸ್ ಪ್ರತಿಭಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಮಕ್ಕಳ ಈ ಸಾಧನೆಗೆ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಹಾಗೂ ಶಿಕ್ಷಕ, ಸಿಬ್ಬಂದಿ ವರ್ಗ ಅಭಿನಂದಿಸಿದ್ದಾರೆ.
ಪದಾಧಿಕಾರಿ ಆಯ್ಕೆ: ಇಂದು ಬಿಜೆಪಿ ಸಭೆ
ದೇವದುರ್ಗ: ತಾಲೂಕಿನ ಗಲಗದಲ್ಲಿ ಜು.7ರಂದು ಬಿಜೆಪಿ ಪಕ್ಷದ ತಾಲೂಕು ಪದಾಧಿಕಾರಿಗಳ ಆಯ್ಕೆ ಕುರಿತು ಮಹತ್ವದ ಸಭೆ ಆಯೋಜಿಸಲಾಗಿದೆ.
ಅಂದು ಗ್ರಾಮದಲ್ಲಿ ಮಾಜಿ ಶಾಸಕ ಶಿವನಗೌಡ ನಾಯಕ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಪಕ್ಷದ ಪ್ರಮುಖರ ಸಭೆಯಲ್ಲಿ ಕೊಪ್ಪಳ ಸಂಸದ ಶಿವರಾಮೇಗೌಡ, ಎಂಎಲ್ಸಿ ಹಾಲಪ್ಪ ಆಚಾರ್ ಸೇರಿ ಅನೇಕ ಮುಖಂಡರು ಪಾಲ್ಗೊಳ್ಳಲಿದ್ದು, ತಾಲೂಕು ಪದಾಧಿಕಾರಿಗಳ ಆಯ್ಕೆ ನಡೆಸಲಿದ್ದಾರೆಂದು ಪಕ್ಷ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement