ಕುಡಿವ ನೀರಲ್ಲೂ ಗೋಲ್‌ಮಾಲ್!
ಕನ್ನಡಪ್ರಭ ವಾರ್ತೆ, ಮುದಗಲ್, ಜು.7
ಈಗಾಗಲೇ ಅನುಷ್ಠಾನಗೊಂಡ ರಾಷ್ಟ್ರೀಯ ಗ್ರಾಮೀಣ ನೀರು ಸರಬರಾಜು ಯೋಜನೆಯ ಕುಡಿಯುವ ನೀರಿನ ಕಾಮಗಾರಿ ತೋರಿಸಿ ಮತ್ತೊಂದು ಯೋಜನೆ ಹೆಸರಲ್ಲಿ ಲಕ್ಷಾಂತರ ರುಪಾಯಿ ನುಂಗಲು ಹುನ್ನಾರ ನಡೆಸಿದ ಪ್ರಕರಣ ಬೆಳಕಿಗೆ ಬಂದಿದೆ.
ಮಸ್ಕಿ ವಿಧಾನಸಭಾ ಕ್ಷೇತ್ರದ ಮಟ್ಟೂರ ತಾಂಡಾದಲ್ಲಿ ಶಾಸಕರ ವಿಶೇಷ ಆಸಕ್ತಿಯಿಂದ ತಾಂಡಾ ನಿವಾಸಿಗಳಿಗಾಗಿ ಪ್ರತಾಪಗೌಡ ಕಾಲೋನಿಯಲ್ಲಿ 100 ಗುಂಪು ಮನೆಗಳನ್ನು ನಿರ್ಮಾಣ ಮಾಡಿ, ಬಡ ಜನರಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಕುಡಿಯುವ ನೀರು, ರಸ್ತೆ ಸೇರಿದಂತೆ ಮೂಲ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಸರ್ಕಾರ ಅನುದಾನ ನೀಡಿದೆ. ಆದರೆ ಕಳೆದ ವರ್ಷವೇ ಜಿಪಂ.ನಿಂದ ಅನುಷ್ಠಾನಗೊಂಡ ಕುಡಿಯುವ ನೀರು ಯೋಜನೆಗೆ ಭೂ ಸೇನಾ ಇಲಾಖೆಯಿಂದ ಬೋಗಸ್ ಬಿಲ್ ಸೃಷ್ಟಿಸಿ ಲಕ್ಷಾಂತರ ರುಪಾಯಿ ಎತ್ತುವ ಯತ್ನ ನಡೆದಿದೆ.
ಗ್ರಾಮೀಣ ಪ್ರದೇಶದಲ್ಲಿನ ಬಡ ಹಾಗೂ ಕೂಲಿಕಾರ್ಮಿಕ ಕುಟುಂಬಗಳಿಗೆ ಸೂರು ಕಲ್ಪಿಸುವ ನಿಟ್ಟಿನಲ್ಲಿ ರಾಜೀವಗಾಂಧಿ ವಸತಿ ನಿಗಮದಡಿ ತಾಂಡದಲ್ಲಿನ ಬಹುತೇಕ ಲಂಬಾಣಿ ಜನಾಂಗಕ್ಕೆ ಮನೆಗಳನ್ನು ನಿರ್ಮಿಸಿ ಕೊಡಲಾಗಿದೆ. ಇದರ ಜೊತೆಗೆ ಇಲ್ಲಿನ ನಿವಾಸಿಗಳಿಗೆ ನೀರು ಪೂರೈಸಲು 2012- 13ನೇ ಸಾಲಿನ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆಯಡಿ ಸುಮಾರು 7 ಲಕ್ಷ ವೆಚ್ಚದಲ್ಲಿ ಕಿರು ನೀರು ಸರಬರಾಜು ಬೋರವೆಲ್, 4 ನೀರಿನ ಗುಮ್ಮಿ ನಿರ್ಮಾಣ ಮಾಡಲಾಗಿದೆ.
ಅನುದಾನ ಕೊಳ್ಳೆಗೆ ಹುನ್ನಾರ: ಆದರೆ ಈಗಾಗಲೇ ಕಾಮಗಾರಿ ಮುಗಿದು ನೀರು ಸರಬರಾಜಾಗುತ್ತಿರುವ ಯೋಜನೆಗೆ ಮತ್ತೊಂದು ಭಾರಿ ರಾಜೀವಗಾಂಧಿ ವಸತಿ ನಿಗಮದಿಂದ ಕುಡಿಯುವ ನೀರು ಮತ್ತು ವಿದ್ಯುತ್ ಸರಬರಾಜು ಮಾಡುವುದಕ್ಕೆ 17 ಲಕ್ಷ ಮಂಜೂರಾಗಿ ಭೂ ಸೇನಾ ನಿಗಮಕ್ಕೆ ಕಾಮಗಾರಿಯ ಹೊಣೆಯನ್ನು ವಹಿಸಿದೆ.
ಕಾಲೋನಿಗೆ ಕುಡಿಯುವ ನೀರು ಸರಬರಾಜಿಗೆ 10.17 ಲಕ್ಷ ಮತ್ತು ವಿದ್ಯುತ್ ಸರಬರಾಜು ಮಾಡುವ ಕೆಲಸಕ್ಕೆ 7 ಲಕ್ಷ ಎಂದು ನಕಲಿ ಬಿಲ್ ಬಿಲ್ ಸೃಷ್ಟಿಸಿ ಹಳೆಯ ಕೆಲಸದ ಫೋಟೋಗಳೊಂದಿಗೆ 10 ಲಕ್ಷ ನುಂಗಿ ಹಾಕುವುದಕ್ಕೆ ಮಸ್ಕಿ ಶಾಸಕರ ಆಪ್ತ ಸಹಾಯಕ ಎಂದು ಬಿಂಬಿಸಿಕೊಳ್ಳುವ ವ್ಯಕ್ತಿಯೊಬ್ಬರು ಭೂ ಸೇನಾ ನಿಗಮದ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಹಣ ಪಡೆಯುವುದಕ್ಕೆ ಮುಂದಾಗಿದ್ದಾರೆ ಎಂದು ದಸಂಸ ಮುಖಂಡ ಹನುಮಂತಪ್ಪ ಕುಣಿಕೆಲ್ಲೂರ ಆರೋಪಿಸಿದ್ದಾರೆ.
ಈಗಾಗಲೇ ತಾಂಡಾದ ಕಾಲೋನಿಯಲ್ಲಿ ಜಿಪಂ.ನಿಂದ ಕೊಳವೆಬಾವಿ, ಪಂಪ್‌ಹೌಸ್, ಪೈಪ್‌ಲೈನ್ ಕೆಲಸ ಮಾಡಿ ನೀರು ಪೂರೈಸಲಾಗುತ್ತಿದೆ. ಆದರೆ ಶಾಸಕರ ಆಪ್ತ ಸಹಾಯಕ ಎಂದು ಹೇಳಿಕೊಳ್ಳುವ ಶರಣಬಸವ ಅವರು ಅಧಿಕಾರಿಗಳೊಂದಿಗೆ ಶಾಮೀಲಾಗಿ ಮಾಡಿದ ಕೆಲಸಕ್ಕೆ ಮತ್ತೊಂದು ಯೋಜನೆಯಿಂದ ಬೋಗಸ್ ಬಿಲ್ ಮಾಡಿ ಲಕ್ಷಾಂತರ ರು. ಅವ್ಯವಹಾರಕ್ಕೆ ಮುಂದಾಗಿದ್ದಾರೆಂದು ಅವರು ದೂರಿದ್ದಾರೆ.
ಶಾಸಕರು ಎಚ್ಚೆತ್ತುಕೊಳ್ಳಲಿ: ಕುಡಿಯುವ ನೀರಿನ ತೊಟ್ಟಿಯ ಮೇಲೆ ಬರೆಯಿಸಿದ್ದ ಯೋಜನೆಯ ವಿವರದ ಬೋರ್ಡ್ ಹಿಂಬದಿ ಮತ್ತೊಂದು ಯೋಜನೆಯ ಬೋರ್ಡ್ ಬರೆಸಿ ಫೋಟೋ ತೆಗೆದು ಭೂ ಸೇನಾ ಅಧಿಕಾರಿಗಳಿಗೆ ನೀಡಿ ಹಣ ಎತ್ತುವ ಹುನ್ನಾರು ನಡೆದಿದ್ದು ಶಾಸಕರ ಹೆಸರಿಗೆ ಮಸಿ ಬಳೆಯುವಂತ ಇಂತಹ ಪ್ರಕರಣಗಳ ಬಗ್ಗೆ ಶಾಸಕರು ಎಚ್ಚೆತ್ತು ಸೂಕ್ತ ಕ್ರಮಕ್ಕೆ ಮುಂದಾಗಬೇಕೆಂದು ಹನುಮಂತಪ್ಪ ಒತ್ತಾಯಿಸಿದ್ದಾರೆ.