ಜೀತದಾಳು ಪತ್ತೆಯಲ್ಲಿ ನಿರ್ಲಕ್ಷ್ಯ: ಆರೋಪ
ದೇವದುರ್ಗ: ತಾಲೂಕಿನಲ್ಲಿ ಜೀತದಾಳುಗಳನ್ನು ಗುರ್ತಿಸುವ ಕಾರ್ಯವನ್ನು ಅಧಿಕಾರಿಗಳು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎಂದು ಜೀತ ವಿಮುಕ್ತಿ ಕರ್ನಾಟಕ ತಾಲೂಕು ಸಮಿತಿ ಒತ್ತಾಯಿಸಿದೆ.
ಈ ಕುರಿತು ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿರುವ ಸಮಿತಿಯ ಕಾರ್ಯಕರ್ತರು, ಜೀತದಾಳು ಗುರ್ತಿಸುವಲ್ಲಿ ಕಂದಾಯ ನಿರೀಕ್ಷಕರು, ಗ್ರಾಪಂ ಅಭಿವೃದ್ಧಿ ಅಧಿಕಾರಿಗಳು ಸೇರಿ ಕೆಲ ಅಧಿಕಾರಿಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ. ಮೇಲಧಿಕಾರಿಗಳ ಸೂಚನೆಯ ಹೊರತಾಗಿಯೂ ಕೆಳಹಂತದ ಅಧಿಕಾರಿಗಳು ಈ ಬಗ್ಗೆ ಕಾರ್ಯಪ್ರವೃತ್ತವಾಗುತ್ತಿಲ್ಲ ಎಂದು ದೂರಿದ್ದಾರೆ. ಸರ್ಕಾರವು ಈ ಕಾರ್ಯಕ್ಕೆ ಒಂದು ತಿಂಗಳ ಗಡುವು ನೀಡಿದ್ದು, ಆರು ತಿಂಗಳು ಕಳೆದರೂ ಜೀತದಾಳು ಗುರ್ತಿಸುವ ಕೆಲಸವಾಗಿಲ್ಲ. ಸುಪ್ರೀಂಕೋರ್ಟ್ ಜೀತದಾಳುಗಳನ್ನು ಗುರ್ತಿಸುವುದು ಕಲ್ಯಾಣ ಕಾರ್ಯ ಎಂದು ತಿಳಿಸಿದ್ದರೂ, ಅಧಿಕಾರಿಗಳು ವಿನಾಕಾರಣ ವಿಳಂಬ ಮಾಡುತ್ತಿದ್ದಾರೆಂದು ಆರೋಪಿಸಿದ್ದಾರೆ.
ಸಮಿತಿಯ ಜಿಲ್ಲಾ ಸಂಚಾಲಕ ಕೆ.ಪ್ರಕಾಶ, ಬಸವರಾಜ ಯರಮಸಾಳ, ಯೇಸು ಮಸರಕಲ್, ರಾಘವೇಂದ್ರ ಅಂಜಳ, ರಂಗಪ್ಪ ಹೇರುಂಡಿ, ಹನುಮಂತ ಹೇಮನೂರು, ಹನುಮಂತ ಯರಮಸಾಳ ಇದ್ದರು.