ಪುರಸಭೆ ಮುಖ್ಯಾಧಿಕಾರಿ ವಿರುದ್ಧ ಕ್ರಮಕ್ಕೆ ಬಿಜೆಪಿ ಸದಸ್ಯರ ಆಗ್ರಹ
ಕನ್ನಡಪ್ರಭ ವಾರ್ತೆ, ದೇವದುರ್ಗ, ಜು.7
ಸ್ಥಳೀಯ ಪುರಸಭೆ ಮುಖ್ಯಾಧಿಕಾರಿಗಳು ಕಚೇರಿಗೆ ಸತತ ಗೈರು ಹಾಜರಾಗುತ್ತಿದ್ದು, ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ಪುರಸಭೆಯ ಬಿಜೆಪಿ ಸದಸ್ಯರು ಒತ್ತಾಯಿಸಿದ್ದಾರೆ.
ಈ ಕುರಿತು ಅವರು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದ್ದು, ಪಟ್ಟಣದ ನೈರ್ಮಲ್ಯೀಕರಣ, ಬೀದಿ ದೀಪಗಳ ಅಳವಡಿಕೆ, ಶುದ್ಧ ಕುಡಿಯುವ ನೀರು ಪೂರೈಕೆ, ಮಹಿಳೆಯರ ಸಾರ್ವಜನಿಕ ಶೌಚಾಲಯಗಳ ಸ್ವಚ್ಛತೆಯಂಥ ಸೌಲಭ್ಯಗಳ ನಿರ್ವಹಣೆಯಲ್ಲಿ ಪುರಸಭೆ ವಿಫಲವಾಗಿದೆ. ಪುರಸಭೆ ಮುಖ್ಯಾಧಿಕಾರಿ ಅಸರ್ಮಪಕ ಕಾರ್ಯನಿರ್ವಣೆಯಿಂದಾಗಿ ಸಿಬ್ಬಂದಿ ಸಹ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ಅನೇಕ ಕಾಮಗಾರಿಗಳು ಹಾಗೂ ಮಹತ್ವದ ಕೆಲಸಗಳು ಆರಂಭಗೊಳ್ಳಬೇಕಿದ್ದು, ಮುಖ್ಯಾಧಿಕಾರಿ ಗೈರು ಹಾಜರಿಯಿಂದ ದೈನಂದಿನ ಕಚೇರಿ ಕಾರ್ಯನಿರ್ವಹಣೆಯಲ್ಲಿ ವಿಳಂಬವಾಗುತ್ತಿದೆ. ಕಾರಣ ಕೂಡಲೇ ಅವರ ವಿರುದ್ಧ ಕ್ರಮ ಜರುಗಿಸುವಂತೆ ಪುರಸಭೆ ಸದಸ್ಯರಾದ ತಾಹೇರಾ ಬೇಗಂ, ಯೂನೂಸ್ ಶಹಾಪುರಿ, ರಂಗಪ್ಪ ನಾಯಕ, ನಾಗಪ್ಪ ಉಪ್ಪಾರ, ಚಂದ್ರಶೇಖರ ಚಲುವಾದಿ, ವೆಂಕಟೇಶ ನಾಯಕ ಸೋಮಕಾರ ಸೇರಿ 17 ಜನ ಸದಸ್ಯರು ದೂರಿದ್ದಾರೆ.