ರಂಜಾನ್ ತಿಂಗಳ ಸ್ವಾಗತ ಕಾರ್ಯಕ್ರಮ
ಮುದಗಲ್: ಸ್ಥಳೀಯ ಹಜರತ್ ಖ್ವಾಜಾ ಗರೀಬ್ ನವಾಜ್ ಅಂಜುಮನ್ ಇಸ್ಲಾಮಿಕ್ ಟ್ರಸ್ಟ್ ವತಿಯಿಂದ ರಂಜಾನ್ ತಿಂಗಳ ಸ್ವಾಗತ ಕಾರ್ಯಕ್ರಮವನ್ನು ಪಟ್ಟಣದ ನಾನಾ ದರ್ದಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೌಲಾನಾ ಅಹ್ಮದರಜಾಸಾಬ, ರಂಜಾನ್ ತಿಂಗಳಲ್ಲಿ ಉಪವಾಸ ವ್ರತ ಮಾಡಬೇಕು. ಅಲ್ಲಾಹ ಇಬಾದತ್ ಮಾಡಬೇಕು. ಅಲ್ಲಾ ರಂಜಾನ್ ತಿಂಗಳಲ್ಲಿ ಸ್ವರ್ಗದ ಬಾಗಿಲನ್ನು ತೆಗೆದಿರುತ್ತಾನೆ. ರಂಜಾನ್ ಉಪವಾಸ ವ್ರತದ ಮೂಲಕ ಸಮಾಜದಲ್ಲಿ ಉತ್ತಮ ಕಾರ್ಯ ನಿರ್ವಹಿಸುವಂತಾಗಬೇಕು.
ಮೌಲಾನಾ ಜಾಫರ್‌ಖಾನ್ ಸಾಬ ರಾಯಚೂರು ಮಾತನಾಡಿ, ರಂಜಾನ್ ತಿಂಗಳಲ್ಲಿ ಉಪವಾಸ ವ್ರತ ಮತ್ತು ತರಾವೀ- ನಮಾಜ್ ತಪ್ಪದೇ ಮಾಡಬೇಕು. ತಂದೆ- ತಾಯಿಯ ಮನಸ್ಸನ್ನು ನೋಯಿಸದೆ ಇರಬೇಕು. ತಾಯಿ- ತಂದೆಯ ಸೇವೆಯ ಮೂಲಕ ಸ್ವರ್ಗದ ಬಾಗಿಲನ್ನು ಕಾಣಬೇಕು ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಮಿತಿ ಅಧ್ಯಕ್ಷ ಹಾಗೂ ಪಪಂ ಸದಸ್ಯ ಮಹ್ಮದ ಮಾಸೂಮ್ ಷರೀಫ್ ವಹಿಸಿದ್ದರು. ವೇದಿಕೆ ಮೇಲೆ ಪಪಂ ಸದಸ್ಯ ಬಂದೇ ನವಾಜ್, ಪಪಂ ಮಾಜಿ ಸದಸ್ಯರಾದ ಅಮೀರಬೇಗ್ ಉಸ್ತಾದ, ಮಹಿಬೂಬಸಾಬ, ಸೈ.ಯಾಸೀನ್ ಖಾದ್ರಿ, ಗಯಾಸುದ್ದೀನ್, ಮಾಪಾಶಾ, ಅಬ್ದುಲ್ ಮಜೀದ್ ಇತರರು ಇದ್ದರು.