ಶಿಕ್ಷಣ ಸಂಸ್ಥೆಗಳಿಗೆ ಅನುದಾನಕ್ಕೆ ಆಗ್ರಹ
ದೇವದುರ್ಗ: ಹೈದ್ರಾಬಾದ್ ಕರ್ನಾಟಕ ಪ್ರದೇಶದ ಶಾಶ್ವತ ಅನುದಾನ ರಹಿತ ಶಿಕ್ಷಣ ಸಂಸ್ಥೆಗಳಿಗೆ 371(ಜೆ)ಕಲಂ ಅಡಿ ಅನುದಾನ ಒದಗಿಸಲು ಅವಕಾಶ ಮಾಡಿಕೊಡುವಂತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಶಿಕ್ಷಕರು, ಉಪನ್ಯಾಸಕರ ಒಕ್ಕೂಟ ಒತ್ತಾಯಿಸಿದೆ. ಈ ಕುರಿತು ಅವರು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಎಚ್.ಕೆ. ಪಾಟೀಲ್ ಅವರಿಗೆ ಈಚೇಗೆ ಮನವಿ ಸಲ್ಲಿಸಿ, ಹೈ-ಕ ಪ್ರದೇಶದಲ್ಲಿ ಶೈಕ್ಷಣಿಕವಾಗಿ ಹಲವಾರು ಖಾಸಗಿ ಶಿಕ್ಷಣ ಸಂಸ್ಥೆಗಳು ಶ್ರಮಿಸುತ್ತಿದ್ದು, ಮತ್ತೊಂದೆಡೆ ವಯೋವಾನ ಮೀರುತ್ತಿರುವ ಶಿಕ್ಷಕರು ಈ ಶಿಕ್ಷಣ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸರ್ಕಾರಿ ಉದ್ಯೋಗಗಳಿಂದ ವಂಚಿತರಾಗಿದ್ದಾರೆ. ಈ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಒದಗಿಸಿದಲ್ಲಿ ಖಾಸಗಿ ಶಾಲೆಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರಿಗೆ ಉದ್ಯೋಗ ಭದ್ರತೆ ನೀಡಿದಂತಾಗುತ್ತದೆ. ಕನಿಷ್ಟ 10 ವರ್ಷ ಪೂರೈಸಿದ ಹೈ-ಕ ಭಾಗದ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಅನುದಾನ ನೀಡಬೇಕು. ಅಲ್ಪ ಸಂಖ್ಯಾತ ಶಿಕ್ಷಣ ಸಂಸ್ಥೆಗಳಲ್ಲಿ ನೇಮಕಾತಿ ಮಾಡುವ ಸಂದರ್ಭದಲ್ಲಿ (ರೋಸ್ಟರ್) ನಿಯಮವನ್ನು ಸಡಿಲಿಸಬೇಕು ಎಂಬುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿದರು. ಈ ವೇಳೆ ಒಕ್ಕೂಟದ ವೆಂಕಟೇಶ ರಾಠೋಡ, ಶಿವಗೇನಿ, ಬಸವೇಶ್ವರ, ಶಿವಪ್ರಸಾದ ನಾಗಲೀಕರ್, ಶಿವರಾಜ ಅಕ್ಕಿಲ್ ಮತ್ತಿತರರಿದ್ದರು.
ಜನಸಂಖ್ಯೆ ಸ್ಥಿರತೆ:
ಭಾಷಣ ಸ್ಪರ್ಧೆ
ಸಿಂಧನೂರು: ಆರೋಗ್ಯ ಇಲಾಖೆಯ ವತಿಯಿಂದ ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಯೋಜನೆಯಡಿಯಲ್ಲಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಗಳಿಗೆ ಜನಸಂಖ್ಯಾ ಸ್ಥಿರತೆ ಕುರಿತು ಭಾಷಣ ಸ್ಪರ್ಧೆಯನ್ನು ನಗರದ ಶಾರದಾ ಮಹಿಳಾ ಪದವಿ ಹಾಗೂ ಪದವಿ ಪೂರ್ವ ಕಾಲೇಜಿನಲ್ಲಿ ಜು.8ರಂದು ಬೆಳಗ್ಗೆ 10 ಗಂಟೆಗೆ ಏರ್ಪಡಿಸಲಾಗಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಸೈಯದ್ ಹಸನ್ ಹುಸೇನಿ ತಿಳಿಸಿದ್ದಾರೆ. ಜನಸಂಖ್ಯಾ ಸ್ಥಿರತೆ ಮತ್ತು ದೇಶದ ಅಭಿವೃದ್ಧಿ, ಜನಸಂಖ್ಯಾ ಸ್ಥಿರತೆಯಲ್ಲಿ ಯುವಜನತೆಯ ಪಾತ್ರ, ಲಿಂಗ ಸಮಾನತೆಯಿಂದ ಜನಸಂಖ್ಯಾ ಸ್ಥಿರತೆ ಮತ್ತು ಹೆಣ್ಣು ಶಿಶುವಿನ ಸಂರಕ್ಷಣೆ, ಜನಸಂಖ್ಯಾ ಸ್ಥಿರತೆಯಲ್ಲಿ ಕುಟುಂಬ ಕಲ್ಯಾಣ ವಿಧಾನಗಳ ಪಾತ್ರ ಎಂಬ ಅಂಶಗಳು ಭಾಷಣದಲ್ಲಿ ಒಳಗೊಂಡಿರಬೇಕು. ಪ್ರಾಂಶುಪಾಲರು ತಮ್ಮ ಕಾಲೇಜಿನ ಆಯ್ದ ವಿದ್ಯಾರ್ಥಿಗಳನ್ನು ಭಾಷಣ ಸ್ಪರ್ಧೆಗೆ ಕಾಲೇಜಿನ ಪರವಾನಗಿ ಪತ್ರದ ಜೊತೆ ಕಳುಹಿಸಬೇಕು. ವಿವರಕ್ಕೆ ಮೊ. 98457 15229, 99458 34069ಕ್ಕೆ ಸಂಪರ್ಕಿಸಬಹುದು.