ಸಿಬ್ಬಂದಿಗೆ ಕಿರುಕುಳ; ಆರೋಪ
ಮುದಗಲ್: ಸಮೀಪದ ಮಟ್ಟೂರು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಬಿಸಿಯೂಟ ತಯಾರಿಸುವ ಮಹಿಳಾ ಸಿಬ್ಬಂದಿಗೆ ಗ್ರಾಮದ ಕೆಲವರು ಪದೇ ಪದೇ ಕಿರುಕುಳ ನೀಡುತ್ತಿದ್ದಾರೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಬಸವರಾಜ ಛಲವಾದಿ ಮುಂದೆ ಮಹಿಳಾ ಸಿಬ್ಬಂದಿ ತಮ್ಮ ಅಳಲು ತೋಡಿಕೊಂಡರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರದ ಬಿಸಿಯೂಟದಲ್ಲಿ ಹುಳು ಬಂದಿವೆ ಎನ್ನುವ ಆರೋಪದಡಿಯಲ್ಲಿ ಸಹಾಯಕ ನಿರ್ದೇಶಕರು ಶಾಲೆಗೆ ಭೇಟಿ ನೀಡಿದ್ದರು. ಭೇಟಿ ಸಂದರ್ಭದಲ್ಲಿ ಸಹಾಯಕ ನಿರ್ದೇಶಕರು ಸಿಬ್ಬಂದಿಗೆ ಕೆಲ ಷರತ್ತುಗಳನ್ನು ವಿಧಿಸಿ ಉತ್ತಮ ಆಹಾರ ತಯಾರಿಸಲು ಸೂಚಿಸಿದರು. ಆದರೆ ಬಿಸಿಯೂಟದ ಮಹಿಳಾ ಸಿಬ್ಬಂದಿ ಸಹಾಯಕ ನಿರ್ದೇಶಕರ ಮುಂದೆ ತಮಗಿರುವ ಸಮಸ್ಯೆಗಳನ್ನು ಬಿಚ್ಚಿಟ್ಟರು.
ಜಿಪಂ.ನಿಂದ ಕುಡಿಯುವ ನೀರು ತೊಟ್ಟಿ ನಿರ್ಮಿಸಿದ್ದರೂ ನೀರು ಸರಬರಾಜಾಗುತ್ತಿಲ್ಲ. ಗ್ರಾಮದ ಕೆಲವು ಕುಚೋದ್ಯಿಗಳು ಪದೇ ಪದೇ ನಮಗೆ ಅಶ್ಲೀಲ ಶಬ್ದಗಳಿಂದ, ಬಿಸಿಯೂಟದಲ್ಲಿ ಹುಳುಗಳನ್ನು ತಂದು ಹಾಕುತ್ತೀರಿ ಎಂದು ಕಿರುಕುಳ ನೀಡುತ್ತಿದ್ದಾರೆ. ಶಾಲೆಯ ಎಸ್ಡಿಎಂಸಿ, ಶಿಕ್ಷಕ ವರ್ಗ ಅದಕ್ಕೆ ಕ್ಯಾರೆ ಎನ್ನುತ್ತಿಲ್ಲ ಎಂದು ಅಳಲು ತೋಡಿಕೊಂಡರು. ಈ ವೇಳೆ ಎಸ್ಡಿಎಂಸಿ ಅಧ್ಯಕ್ಷ ಬಸಣ್ಣ ಜಾವೂರ, ಮಾನಪ್ಪ ಬೆಂಚಮಟ್ಟಿ ಇತರರು ಇದ್ದರು.