ಇಂದು ಉಸುಕಿನ ಚೀಲ ಹೊರುವ ಸ್ಪರ್ಧೆ
ರಾಯಚೂರು: ನಗರದಲ್ಲಿ ರಾಜೇಂದ್ರ ಗಂಜ್ ಹಮಾಲರ ಸಂಘ ಸೇರಿ ವಿವಿಧ ಸಂಘಗಳ ಸಂಯುಕ್ತಾಶ್ರಯದಲ್ಲಿ ಜು. 9ರಂದು ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಉಸುಕಿನ ಚೀಲ ಹಾಗೂ ಕಲ್ಲು ಹೊರುವ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ.
ಅಂದು ಬೆಳಗ್ಗೆ 9ಕ್ಕೆ ನಗರದ ರಾಜೇಂದ್ರ ಗಂಜ್ ಆವರಣದಲ್ಲಿ ಹಮಾಲರಿಗೆ ನಡೆಯುವ ಈ ಸ್ಪರ್ಧೆಗಳಿಗೆ ಮಾಜಿ ಶಾಸಕ ಹಾಗೂ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಾರೆಡ್ಡಿ ಚಾಲನೆ ನೀಡಲಿದ್ದಾರೆ. ಅಧ್ಯಕ್ಷತೆಯನ್ನು ಹಮಾಲರ ಸಂಘದ ಪ್ರಧಾನ ಕಾರ್ಯದರ್ಶಿ ಲಾಲಪ್ಪ ವಹಿಸಲಿದ್ದಾರೆ. ಸಾನ್ನಿಧ್ಯವನ್ನು ಮುನ್ನೂರು ಕಾಪು ಸಮಾಜದ ಶ್ರೀತಿಪ್ಪೇಶ್ವರ ಸ್ವಾಮೀಜಿ ವಹಿಸಲಿದ್ದಾರೆ.
ಶಾಸಕರಾದ ಡಾ. ಶಿವರಾಜ್ ಪಾಟೀಲ್, ತಿಪ್ಪರಾಜು, ಗಂಜ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ಮಾಜಿ ಶಾಸಕ ಸೈಯದ್ ಯಾಸೀನ್, ಜಿಪಂ ಉಪಾಧ್ಯಕ್ಷ ಶರಣಪ್ಪ ಕಲ್ಮಲಾ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ಈ ವೇಳೆ ಹಮಾಲರಿಗೆ 110 ಕೆಜಿ ಉಸುಕಿನ ಚೀಲ ಹೊತ್ತು ಸಾಗುವುದು, ಗಂಜ್ ಕಸಗೂಡಿಸುವ ಮಹಿಳೆಯರಿಗೆ ಎರಡು ಕೈಯಲ್ಲಿ 10- 10 ಕೆಜಿ ತೂಕದ ಕಲ್ಲು ಹೊತ್ತು ಸಾಗುವ ಸ್ಪರ್ಧೆ ಆಯೋಜಿಸಲಾಗಿದೆ. ವಿಜೇತರಿಗೆ ಸಂಘದಿಂದ ಬಹುಮಾನ ವಿತರಿಸಲಾಗುತ್ತದೆ ಎಂದು ಸಂಘಟಕರು ತಿಳಿಸಿದ್ದಾರೆ.