ನೌಕರರ ಸಂಘದ ಚುನಾವಣೆ: ಡಿಸಿ ಮಧ್ಯಪ್ರವೇಶಕ್ಕೆ ಆಗ್ರಹ
ಕನ್ನಡಪ್ರಭ ವಾರ್ತೆ, ರಾಯಚೂರು, ಜು.8
ಸರ್ಕಾರಿ ನೌಕರರ ಸಂಘದ ಜಿಲ್ಲಾ ಹಾಗೂ ಎಲ್ಲ ತಾಲೂಕು ಘಟಕಗಳ ಚುನಾವಣೆ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ರೀತಿಯಲ್ಲಿ ನಡೆಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶಿಸುವಂತೆ ಸಂಘದ ಸದಸ್ಯ ರಾಮಚಂದ್ರಪ್ಪ ಆಗ್ರಹಿಸಿದರು.
ಸೋಮವಾರ ನಗರದಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ನಡೆಯಲಿರುವ ಚುನಾವಣೆಯಲ್ಲಿ ಎಲ್ಲರೂ ಸಕ್ರಿಯವಾಗಿ ಭಾಗವಹಿಸುವುದು ಅವಶ್ಯಕ. ಆದರೆ ಸದ್ಯ ಜಾರಿಯಲ್ಲಿರುವ ಚುನಾವಣೆ ಪ್ರಕ್ರಿಯೆಯಲ್ಲಿ ಅನಗತ್ಯ ಗೊಂದಲ ಹುಟ್ಟು ಹಾಕಲಾಗಿದೆ ಎಂದು ಆರೋಪಿಸಿದರು.
ಕೈವಾಡ: ಜಿಲ್ಲೆಯಲ್ಲಿ ನಡೆಯುತ್ತಿರುವ ಚುನಾವಣೆ ಪ್ರಕ್ರಿಯೆ ಅನೇಕ ಸಂಶಯಗಳಿಗೆ ಎಡೆ ಮಾಡಿದೆ. ಮತದಾರರ ಕರಡು ಪಟ್ಟಿ ಪ್ರಕಟಿಸದೇ ಹಾಗೂ ಚುನಾವಣಾಕಾರಿಗಳ ನೇಮಕ ಬಗ್ಗೆ ಯಾವುದೇ ಮಾಹಿತಿ ಒದಗಿಸದೇ ಚುನಾವಣೆ ನಡೆಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಈ ಕೃತ್ಯದಲ್ಲಿ ಜಿಲ್ಲಾ ಸಂಘದ ಹಾಲಿ ಸದಸ್ಯರ ಕೈವಾಡವಿದೆ ಎಂದು ಆರೋಪಿಸಿದರು.
ಉಲ್ಲಂಘನೆ: ರಾಜ್ಯ ಘಟಕದ ಸೂಚನೆಯಂತೆ ಕಳೆದ ತಿಂಗಳ ಒಂದರಂದು ಮತದಾರರ ಕರಡು ಪಟ್ಟಿ ಆಯಾ ಘಟಕಗಳಲ್ಲಿ ಪ್ರಕಟಿಸಿ ಮತದಾರರ ಗಮನಕ್ಕೆ ತಂದು ಜು. 5ರೊಳಗೆ ಆಕ್ಷೇಪಣೆ ಸ್ವೀಕರಿಸಬೇಕು. ನಂತರ ಮತದಾರರ ಪಟ್ಟಿ ಸರಿಪಡಿಸಿ ಅಂತಿಮಗೊಳಿಸಬೇಕು ಎಂದಿತ್ತು. ಆದರೆ ಈಗಿನ ಸಂಘದ ಪದಾಕಾರಿಗಳು ಮತ್ತು ನಿಯುಕ್ತಿಗೊಂಡಿರುವ ಚುನಾವಣಾಕಾರಿ ಈ ಎಲ್ಲ ನಿಯಮಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿದ್ದಾರೆಂದು ದೂರಿದರು.
ಸರ್ಕಾರಿ ನೌಕರರ ಮತದಾರರ ಕರಡು ಪಟ್ಟಿ ಪ್ರಕಟಿಸದಿರುವುದು ಅನುಮಾನಗಳಿಗೆ ದಾರಿಯಾಗಿದ್ದು, ಅದರಿಂದ ಅನೇಕ ನೌಕರರು ಬೇಸರಗೊಂಡಿದ್ದಾರೆ. ಚುನಾವಣೆ ನಡೆಸಲು ಹೊರಟಿರುವ ವೇಳೆಯೇ ಚುನಾವಣಾಕಾರಿ ಯಾರೆಂಬ ಬಗ್ಗೆ ಮತದಾರರಾದ ನೌಕರರಿಗೆ ಮಾಹಿತಿ ನೀಡದಿರುವುದು ಸಂಶಯ ಬಲಗೊಳಿಸಿದೆ ಎಂದರು.
ಆಗ್ರಹ: ಸರ್ಕಾರಿ ನೌಕರರ ಸಂಘದ ಜಿಲ್ಲಾ ಮತ್ತು ತಾಲೂಕು ಘಟಕಗಳಿಗೆ ನಡೆವ ಚುನಾವಣೆಯಲ್ಲಿ ಸಾಕಷ್ಟು ಅಕ್ರಮಗಳು ನಡೆಯುವ ಸಾಧ್ಯತೆಯಿದೆ. ಸಂಘದ ಪದಾಧಿಕಾರಿಗಳು, ನಿಯುಕ್ತಗೊಂಡ ಚುನಾವಣಾಧಿಕಾರಿ ನಿಯಮಗಳನ್ನು ಉಲ್ಲಂಘಿಸಿದ್ದು, ಈ ಹಿನ್ನೆಲೆಯಲ್ಲಿ ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವಂತಾಗಲು ಜಿಲ್ಲಾಧಿಕಾರಿಗಳು ಮಧ್ಯಪ್ರವೇಶಿಸುವಂತೆ ಒತ್ತಾಯಿಸಿದರು.
ಅನ್ಯಾಯ ಸರಿಪಡಿಸಿ: ಅನೇಕ ನೌಕರರಿಗೆ ಸದ್ಯದ ವ್ಯವಸ್ಥೆಯಲ್ಲಿ ಚುನಾವಣೆ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಆಗದಂತೆ ಮಾಡಲಾಗುತ್ತಿದೆ. ಈ ಅನ್ಯಾಯ ಸರಿಪಡಿಸಲು ಜಿಲ್ಲಾಧಿಕಾರಿಗಳ ಮಧ್ಯಪ್ರವೇಶ ಅಗತ್ಯ ಎಂದ ಅವರು, ಚುನಾವಣೆಯ ಕ್ರಮದಲ್ಲಾಗಿರುವ ತಪ್ಪುಗಳನ್ನು ಸರಿಪಡಿಸಿ ಮುಕ್ತ, ಪಾರದರ್ಶಕ ಹಾಗೂ ಕಾನೂನು ಬದ್ಧ ಚುನಾವಣೆ ನಡೆಸುವ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದರು. ಚುನಾವಣೆ ವೇಳೆ ಅಹಿತಕರ ಘಟನೆಗಳು ನಡೆಯುವ ಮುನ್ಸೂಚನೆ ಹಿನ್ನೆಲೆ ಸೂಕ್ತ ಬಿಗಿ ಬಂದೋಬಸ್ತ್ ವ್ಯವಸೆ ಮಾಡಬೇಕು. ಚುನಾವಣೆಗಳು ಸುಸೂತ್ರ ನಡೆಯುವಂತೆ ಕ್ರಮ ಕೈಗೊಳ್ಳಲು ಮನವಿ ಮಾಡಿದರು.
ಪ್ರಮುಖರಾದ ಮೆಹಬೂಬ್ ಅಲಿ, ತಾಯರಾಜ್ ಮರ್ಚಟ್ಹಾಳ ಮತ್ತಿತರರಿದ್ದರು.