ಇಂದು ಶಾಸಕರ ಮನೆ ಮುಂದೆ ಧರಣಿ
ಸಿಂಧನೂರು: ಜಸ್ಟೀಸ್ ಸದಾಶಿವ ವರದಿ ಅನುಷ್ಠಾನಗೊಳಿಸುವಂತೆ ಒತ್ತಾಯಿಸಿ ಮಾದಿಗ- ಛಲವಾದಿ ಮೀಸಲಾತಿ ಹೋರಾಟ ಸಮಿತಿಯಿಂದ ಶಾಸಕ ಬಾದರ್ಲಿ ಹಂಪನಗೌಡ ಅವರ ಮನೆಯ ಮುಂದೆ ಜುಲೈ 10ರಂದು ಪ್ರತಿಭಟನಾ ಧರಣಿ ಹಮ್ಮಿಕೊಳ್ಳಲಾಗಿದೆ ಎಂದು ಮುಖಂಡರಾದ ಶೇಖರಪ್ಪ ಗಿಣಿವಾರ, ಸುಭಾಷ್ ಪ್ರಾಂಕ್ಲಿನ್, ವೀರಭದ್ರಪ್ಪ ಮಲ್ಲಾಪುರ ಹಾಗೂ ಆರ್. ಆಂಬ್ರೂಸ್ ತಿಳಿಸಿದ್ದಾರೆ.
ಮಂಗಳವಾರ ಜಂಟಿ ಪತ್ರಿಕಾ ಹೇಳಿಕೆ ನೀಡಿರುವ ಅವರು, ರಾಷ್ಟ್ರೀಯ ಅನುಸೂಚಿತ ಜಾತಿಗಳ ಆಯೋಗವು ಸೇರಿದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಶಾಸನಬದ್ಧ ಹಕ್ಕುಗಳ ರಕ್ಷಣೆಗಾಗಿ ದಿಟ್ಟ ನಿರ್ಧಾರ ತೆಗೆದುಕೊಳ್ಳುವ ಕಾಲ ಪರಿಪಕ್ವವಾಗಿದೆ. ಕಾಂಗ್ರೆಸ್ ನೂತನ ಸರ್ಕಾರದ ಅಧಿವೇಶನ ಜುಲೈ 12ರಿಂದ ಆರಂಭಗೊಳ್ಳುವ ಕಾರಣ ಸದರಿ ಅಧಿವೇಶನದಲ್ಲಿ ಬಹುದಿನಗಳ ಬೇಡಿಕೆಯಾದ ಮೀಸಲಾತಿ ವರ್ಗೀಕರಣ ವಿಷಯ ಬೇಷರತ್ತಾಗಿ ಅಂಗೀಕಾರವಾಗಲು ಹೋರಾಟ ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಹೇಳಿದ್ದಾರೆ.
ಪ್ರತಿಭಟನಾ ಧರಣಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಾಂಧವರು ಭಾಗವಹಿಸುವಂತೆ ಯಮನಪ್ಪ ಮಲ್ಲಾಪುರ, ಹೆಚ್.ಎನ್. ಬಡಿಗೇರ, ಪಿ. ಹನುಮಂತಪ್ಪ, ನರಸಪ್ಪ ಕಟ್ಟಿಮನಿ ಹಾಗೂ ವೆಂಕಟೇಶ ಗಿರಿಜಾಲಿ ಕೋರಿದ್ದಾರೆ.