ದಲಿತರಿಗೆ ಶೇ.23ರಷ್ಟು ಹಣ ಮೀಸಲಿಗೆ ಆಗ್ರಹ
ಲಿಂಗಸ್ಗೂರು: ರಾಜ್ಯ ಸರ್ಕಾರದ ಬಜೆಟ್ನಲ್ಲಿ ದಲಿತರಿಗೆ ಶೇ. 23 ರಷ್ಟು ಹಣ ಮೀಸಲಿರಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಪ್ರಭುಲಿಂಗ ಮೇಗಳಮನಿ ಹಾಗೂ ತಾಲೂಕು ಸಂಚಾಲಕ ಹರೀಶ ರಾಠೋಡ ಪತ್ರಿಕಾ ಪ್ರಕಟಣೆ ಮೂಲಕ ಆಗ್ರಹಿಸಿದ್ದಾರೆ. ಪರಿಶಿಷ್ಟಜಾತಿ, ವರ್ಗಗಳಿಗೆ ಸದುಪಯೋಗವಾಗುವ ಯೋಜನೆ ರೂಪಿಸಿ ನಿಗದಿತ ಅವಧಿಯಲ್ಲಿ ಅನುಷ್ಠಾನಗೊಳ್ಳುವಂತೆ ನಿರ್ವಹಿಸಲು ಪ್ರತ್ಯೇಕ ಮಂಡಳಿ ರಚಿಸಬೇಕು. ಏಕಗವಾಕ್ಷಿ ಯೋಜನೆ ಜಾರಿಗೆ ತರಬೇಕು. ಫಲಾನುಭವಿಗಳ ಆಯ್ಕೆ ಸಮಿತಿಗೆ ಆಯಾ ಕ್ಷೇತ್ರದ ಶಾಸಕರ ಅಧ್ಯಕ್ಷತೆ ರದ್ದುಗೊಳಿಸಬೇಕು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಹೈಪವರ್ ಕಮಿಟಿ 6 ತಿಂಗಳಿಗೊಮ್ಮೆ ಕರೆಯಬೇಕು. ಎಲ್ಲ ಬ್ಯಾಕ್ಲಾಗ್ ಹುದ್ದೆಗಳನ್ನು ಒಂದು ವರ್ಷದಲ್ಲಿ ಭರ್ತಿ ಮಾಡಬೇಕು. ಬೆಲೆ ಏರಿಕೆಗೆ ತಕ್ಕಂತೆ ವಿದ್ಯಾರ್ಥಿ ವೇತನ ಹೆಚ್ಚಿಸಬೇಕು. ವಸತಿ ನಿಲಯಗಳ ನಿರ್ವಹಣೆಗೆ ಪ್ರತ್ಯೇಕ ನಿರ್ದೇಶನಾಲಯ ಪ್ರಾರಂಭಿಸಬೇಕು. ಪೀಠೋಪಕರಣಗಳು ಮತ್ತು ಪಾಠೋಪಕರಣಗಳನ್ನು ಸಮರ್ಪಕವಾಗಿ ಪೂರೈಕೆ ಮಾಡಬೇಕು. ವಸತಿ ನಿಲಯದಲ್ಲಿ ನಿರಂತರ ಪಾಠ ಏರ್ಪಾಟು ಮಾಡಬೇಕು. ಅಸಂಘಟಿತ ವಲಯದಲ್ಲಿನ ಪರಿಶಿಷ್ಟಜಾತಿ, ವರ್ಗದ ಕಾರ್ಮಿಕರ ಸಮೀಕ್ಷೆ ನಡೆಸಬೇಕೆಂದು ಮನವಿ ಮಾಡಿದ್ದಾರೆ.