ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ನೀರು ನಮ್ಮ ಹಕ್ಕು, ಉಚಿತ ಕೊಡಿ

Lingaraj Badiger
Updated On : 10 Jul 2013, 11:05 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.9
ಶುದ್ಧ ಕುಡಿವ ನೀರು ನಮ್ಮ ಹಕ್ಕು. ಹಣ ಕೊಟ್ಟು ನೀರು ಖರೀದಿಸುವುದು ನಮ್ಮಿಂದಾಗದು. ಉಚಿತವಾಗಿಯೇ ನೀರು ಕೊಡಿ. ಜಿಲ್ಲಾ ಪಂಚಾಯಿತಿ ಟ್ಯಾಂಕರ್ ನೀರು ಸಮರ್ಪಕವಾಗಿ ದೊರೆಯುತ್ತಿಲ್ಲ. ಗ್ರಾಮಗಳಲ್ಲಿ ನೀರಿನ ಬಳಕೆ ಸಂಪೂರ್ಣ ನಿಷೇಧಿಸಿರುವುದು ಸಮಂಜಸವಲ್ಲ...
ಜಿಲ್ಲೆಗೆ ಮಂಗಳವಾರ ಆರ್ಸೆನಿಕ್‌ಯುಕ್ತ ಸಮಸ್ಯಾತ್ಮಕ ಗ್ರಾಮಗಳಿಗೆ ಭೇಟಿ ನೀಡಿದ್ದ ರಾಜ್ಯದ ತಜ್ಞರ ತಂಡದ ಮುಂದೆ ಗ್ರಾಮಸ್ಥರು ಸಲ್ಲಿಸಿದ ಅಹವಾಲುಗಳ ಪ್ರಮುಖಾಂಶಗಳು.
ತಜ್ಞರಿಗೆ ಅಹವಾಲು: ಜಿಲ್ಲೆಯ ಮಾನವಿ ತಾಲೂಕಿನ ವಟಗಲ್, ಪಾಮನಕಲ್ಲೂರು, ಲಿಂಗಸ್ಗೂರು ತಾಲೂಕಿನ ನಿಲೋಗಲ್, ಹಟ್ಟಿ, ದೇವದುರ್ಗ ತಾಲೂಕಿನ ಪಲಕನಮರಡಿ, ವಂದಲಿ, ಊಟಿ ಮತ್ತಿತೆರೆಡೆ ಭೇಟಿ ನೀಡಿದ ತಜ್ಞರ ತಂಡದ ಮುಖ್ಯಸ್ಥ ಡಾ. ಸುದರ್ಶನ್, ಡಾ.ಆರ್.ಎಚ್. ಸಾಹುಕಾರ್, ಕೆಆರ್ ಐಡಿಎಲ್ ಎಂಡಿ ಶಿವಾನಂದಮೂರ್ತಿ ಅವರಿಗೆ ಗ್ರಾಮಸ್ಥರು ಅಹವಾಲು ಸಲ್ಲಿಸಿದರು.
ಜಿಲ್ಲೆಯಲ್ಲಿ ಜು.1ರಿಂದ ಆರ್ಸೆನಿಕ್ ಯುಕ್ತ ನೀರಿನ ಬಳಕೆಗೆ ಜಿಲ್ಲಾಡಳಿತ ನಿಷೇಧ ಹೇರಿದೆ. ಆದರೆ ಪರ್ಯಾಯವಾಗಿ ಅಗತ್ಯ ನೀರು ದೊರೆಯುತ್ತಿಲ್ಲ. ಟ್ಯಾಂಕರ್ ಮೂಲಕ ನೀರು ಒದಗಿಸಲಾಗುತ್ತಿದೆ. ಆದರೆ ಆ ನೀರು ಸಾಕಾಗುತ್ತಿಲ್ಲ. ಗ್ರಾಮದಲ್ಲಿ ವಿದ್ಯುತ್ ಕೊರತೆಯಿಂದಾಗಿ ಸಮಸ್ಯೆ ಉಲ್ಬಣಿಸಿದೆ ಎಂದು ಗ್ರಾಮಸ್ಥರು ದೂರಿದರು.
ವಟಗಲ್ ಗ್ರಾಮದಲ್ಲಿ ನೀರು ಶುದ್ಧೀಕರಣ ಘಟಕವನ್ನು ಸ್ಮಾಟ್ ಕಂಪನಿಯ ಮೂಲಕ ಜಿಪಂ ಆರಂಭಿಸಿದೆ. ಅಲ್ಲಿ ಹಣ ನೀಡಿ ನೀರು ಖರೀದಿಸುವುದು ಅವಶ್ಯಕ. ಆದರೆ ಹಣ ನೀಡಿ ನೀರು ಖರೀದಿಸುವುದು ತಮ್ಮಿಂದಾಗದು ಎಂದ ಗ್ರಾಮಸ್ಥರು, ನೀರು ತಮ್ಮ ಹಕ್ಕು. ಸರ್ಕಾರ ಉಚಿತವಾಗಿ ತಮಗೆ ನೀರು ನೀಡಬೇಕೆಂದು ಒತ್ತಾಯಿಸಿದರು.
ಸಪ್ಪೆ ನೀರು: ಕನಿಷ್ಟ ಎರಡು ವರ್ಷಗಳವರೆಗೆ ಸರ್ಕಾರವೇ ನೀರಿನ ಹಣ ಭರಿಸಬೇಕು. ಸ್ಮಾಟ್ ಸಂಸ್ಥೆಯು ಆರಂಭಿಸಿರುವ ಶುದ್ಧೀಕರಣ ಘಟಕದ ನೀರು ಸಪ್ಪೆಯಾಗಿದ್ದು, ಅದರಿಂದ ಸೇವನೆಗೆ ಗ್ರಾಮಸ್ಥರು ನಿರಾಸಕ್ತಿ ಪ್ರದರ್ಶಿಸಿ, ಸರ್ಕಾರ ಪ್ರತಿ ವ್ಯಕ್ತಿಗೆ ಕನಿಷ್ಟ 7 ಲೀಟರ್ ನೀರು ಪ್ರತಿ ದಿನ ಉಚಿತವಾಗಿ ವಿತರಿಸಬೇಕು ಎಂದು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ತಂಡದ ಮುಖ್ಯಸ್ಥ ಡಾ.ಸುದರ್ಶನ್, ಸರ್ಕಾರದ ನಿಯಮಾವಳಿಯಂತೆ ಉಚಿತವಾಗಿ ನೀರೊದಗಿಸುವುದು ಅಸಾಧ್ಯ. ಗ್ರಾಮಸ್ಥರು ಕನಿಷ್ಟ ಶೇ.50ರಷ್ಟು ಹಣ ಪಾವತಿಸಬೇಕು. ಇನ್ನುಳಿದ ಮೊತ್ತವನ್ನು ಗ್ರಾಪಂ ಇಲ್ಲವೇ ಸರ್ಕಾರದಿಂದ ಭರಿಸಲು ಸಲಹೆ ನೀಡಲಾಗುತ್ತದೆ ಎಂದು ತಿಳಿಸಿದರು.
ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಗ್ರಾಮಸ್ಥರು, ರಾಜ್ಯ ಸರ್ಕಾರವೇ ಸಂಪೂರ್ಣ ಹಣ ಭರಿಸುವ ಕಾರ್ಯ ಮಾಡಬೇಕು. ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಆರ್ಸೆನಿಕ್ ಯುಕ್ತ ಸಮಸ್ಯಾತ್ಮಕ ಗ್ರಾಮಗಳ ಜನತೆಯ ಮನವಿ ತಿಳಿಸಿ ಹಣ ಒದಗಿಸುವಂತೆ ಮನವಿ ಮಾಡಲು ಒತ್ತಾಯಿಸಿದರು.
ಕಳೆದ 10 ವರ್ಷಗಳಿಂದ ಭೂಸೇನಾ ನಿಗಮವು ವಟಗಲ್ ಗ್ರಾಮಕ್ಕೆ ಶಾಶ್ವತ ಕುಡಿಯುವ ನೀರು ಒದಗಿಸುವ ತುಂಗಭದ್ರಾ ನದಿ ಪೂರೈಕೆ ಕಾಮಗಾರಿ ಕೈಗೊಂಡಿದೆ. ಆದರೆ ಕಾಮಗಾರಿ ಇನ್ನೂ ಮುಗಿದಿಲ್ಲ. ಈ ಹಿನ್ನೆಲೆಯಲ್ಲಿ ಭೂಸೇನಾ ನಿಗಮಕ್ಕೆ ಕಾಮಗಾರಿ ಚುರುಕುಗೊಳಿಸಲು ಗ್ರಾಮಸ್ಥರು ಒತ್ತಾಯಿಸಿದರು.
ಶುದ್ಧ ನೀರಿಲ್ಲ: ನಂತರ ತಂಡವು ಮಾನವಿ ತಾಲೂಕಿನ ಪಾಮನಕಲ್ಲೂರಿಗೆ ಭೇಟಿ ನೀಡಿದ ತಂಡಕ್ಕೆ ಗ್ರಾಮಸ್ಥರು, ಆರ್ಸೆನಿಕ್ ಯುಕ್ತ ನೀರು ಬಳಸದಂತೆ ತಡೆದಿರುವ ಆಡಳಿತವು ಅದಕ್ಕೆ ಪ್ರತಿಯಾಗಿ ಪರ್ಯಾಯವಾಗಿ ಶುದ್ಧ ನೀರು ಒದಗಿಸುವಲ್ಲಿ ವಿಫಲವಾಗಿದೆ. ಜತೆಗೆ ಆರ್ಸೆನಿಕ್‌ಯುಕ್ತ ನೀರಿನ ಮೂಲಗಳನ್ನು ಜಾನುವಾರುಗಳಿಗೆ, ಬಟ್ಟೆ ತೊಳೆಯುವುದು ಸೇರಿ ಇನ್ನಿತರೆ ಕಾರ್ಯಗಳಿಗೆ ಬಳಸಲೂ ಅವಕಾಶ ನೀಡದಿರುವುದು ಸಮಂಜಸವಲ್ಲ ಎಂದು ದೂರಿದರು. ಈ ವೇಳೆ ಗ್ರಾಮದಲ್ಲಿ ಸಮೂಹ ಸಂಸ್ಥೆಯಿಂದ ಸ್ಥಾಪಿಸಿದ ಆರ್ಸೆನಿಕ್ ಯುಕ್ತ ನೀರು ಶುದ್ಧೀಕರಣ ಘಟಕಕ್ಕೆ ಭೇಟಿ ನೀಡಿ ಕಾರ್ಯವೈಖರಿ ಪರಿಶೀಲಿಸಿ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು.
ನಂತರ ಲಿಂಗಸ್ಗೂರು ಮತ್ತು ದೇವದುರ್ಗ ತಾಲೂಕುಗಳ ವಿವಿಧ ಗ್ರಾಮಗಳಿಗೆ ರಾಜ್ಯದ ತಜ್ಞರ ತಂಡವು ಭೇಟಿ ನೀಡಿತು. ಈ ವೇಳೆ ಜಿಪಂ ಸಿಇಒ ಜ್ಞಾನಪ್ರಕಾಶ್, ಎಇಇ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement