ಶಿಕ್ಷಣಕ್ಕೆ ಬಜೆಟ್‌ನಲ್ಲಿ ಶೇ.30 ಮೀಸಲಾತಿ ಇರಲಿ
ಕನ್ನಡಪ್ರಭ ವಾರ್ತೆ, ಲಿಂಗಸ್ಗೂರು, ಜು.9
ರಾಜ್ಯ ಸರ್ಕಾರ ಬಜೆಟ್‌ನಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಶೇ. 30ರಷ್ಟು ಅನುದಾನ ಮೀಸಲಿರಿಸಬೇಕೆಂದು ಆಗ್ರಹಿಸಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್‌ಎಫ್‌ಐ) ಕಾರ್ಯಕರ್ತರು ಮಂಗಳವಾರ ತಹಸೀಲ್ದಾರ್ ಎನ್.ಬಿ. ಪಾಟೀಲರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.
ಪಟ್ಟಣದ ಪದವಿ ಪೂರ್ವ ಕಾಲೇಜು ಮೈದಾನದಿಂದ ಪ್ರತಿಭಟನಾ ಮೆರವಣಿಗೆ ನಡೆಸಿದ ಕಾರ್ಯಕರ್ತರು, ರಾಜ್ಯದಲ್ಲಿ ಶಿಕ್ಷಣದ ವ್ಯವಸ್ಥೆ ತುಂಬಾ ಹದಗೆಟ್ಟಿದೆ. ಸರ್ಕಾರಿ ಶಾಲಾ, ಕಾಲೇಜುಗಳಲ್ಲಿ ಶಿಕ್ಷಕ-ಉಪನ್ಯಾಸಕರ ಕೊರತೆ, ಕೊಠಡಿ ಸಮಸ್ಯೆ, ಪುಸ್ತಕ, ಶೌಚಾಲಯ, ಶುದ್ಧ ಕುಡಿವ ನೀರು ಸೇರಿದಂತೆ ಗುಣಮಟ್ಟದ ಶಿಕ್ಷಣಕ್ಕೆ ಪೂರಕ ಮೂಲ ಸೌಕರ್ಯವಿಲ್ಲದೆ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಡೊನೇಷನ್ ವಸೂಲಿ: ಖಾಸಗಿ ಶಾಲಾ, ಕಾಲೇಜು ಸೇರಿದಂತೆ ಶಿಕ್ಷಣ ಸಂಸ್ಥೆಗಳು ಪ್ರಮಾಣ ಪತ್ರ ಮಾರಾಟ ಮಾಡುವ ಮಳಿಗೆಗಳಾಗಿವೆ. ಯಾವುದೇ ಭಯವಿಲ್ಲದೆ ಮನ ಬಂದಂತೆ ಡೊನೇಷನ್ ವಸೂಲಿ ಮಾಡುತ್ತಿವೆ. ಆದರೂ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಗುಣಮಟ್ಟದ ಶಿಕ್ಷಣ ದೊರೆಯುತ್ತಿಲ್ಲ. ಹಳ್ಳಿಗಳಿಂದ ಪಟ್ಟಣಗಳಿಗೆ ಬರುವ ವಿದ್ಯಾರ್ಥಿಗಳು ಸಾರಿಗೆ ಸೌಕರ್ಯವಿಲ್ಲದೆ ಶಿಕ್ಷಣದಿಂದ ಹಿಂದುಳಿದಿದ್ದಾರೆ. ಸಮಾಜದ ಮುಖ್ಯವಾಹಿನಿಗೆ ತರಲು ಸ್ಥಾಪನೆಗೊಂಡ ವಸತಿ ನಿಲಯಗಳು ಅವ್ಯವಸ್ಥೆಯಿಂದ ಕೂಡಿವೆ ಎಂದು ಆರೋಪಿದರು.
ಖಂಡನೀಯ: ರಾಜ್ಯದಲ್ಲಿ ಆಡಳಿತ ನಡೆಸಿದ ಸರ್ಕಾರಗಳು ಶಿಕ್ಷಣ ವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಕ್ರಮವಾಗಿದೆ. ದೇಶದಲ್ಲಿ ವಿದೇಶಿ ವಿವಿಗಳ ಸ್ಥಾಪನೆಯಿಂದ ಸಾರ್ವಭೌಮತೆ ಒತ್ತೆಯಿಡಲು ಹೊರಟಿರುವುದು ವಿಷಾದನೀಯ. ಸರ್ಕಾರ ಈ ಎಲ್ಲ ಅಂಶಗಳನ್ನು ಪರಿಗಣಿಸಲು ಶಿಕ್ಷಣದ ಅವೈಜ್ಞಾನಿಕ ಪದ್ಧತಿ ಕೈಬಿಟ್ಟು ಪಠ್ಯಕ್ರಮ ಪರಿಶೀಲಿಸಿ, ಶಿಕ್ಷಣಕ್ಕೆ ಬಜೆಟ್‌ನಲ್ಲಿ ಶೇ. 30ರಷ್ಟು ಅನುದಾನ ಮೀಸಲಿಡಬೇಕೆಂದು ಒತ್ತಾಯಿಸಿದರು.
ಬೇಡಿಕೆಗಳು: ಖಾಸಗಿ ವಿದೇಶಿ ವಿಶ್ವವಿದ್ಯಾಲಯಗಳ ಸ್ಥಾಪನೆ ಕೈಬಿಟ್ಟು, ಇರುವ ಸರ್ಕಾರಿ ವಿ.ವಿ.ಗಳ ಬಲವರ್ಧನೆ ಮಾಡಬೇಕು. ವಸತಿ ನಿಲಯದ ವಿದ್ಯಾರ್ಥಿಗಳ ಆಹಾರ ಭತ್ಯೆ ಹೆಚ್ಚಿಸಬೇಕು. ಶಾಲಾ, ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕ, ಉಪನ್ಯಾಸಕರ ಹುದ್ದೆ ಕಾಯಂ ನೇಮಕಾತಿ ಮಾಡಬೇಕು. ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ಸಮರ್ಪಕವಾಗಿ ಜಾರಿಗೊಳಿಸಬೇಕು. ಆರ್‌ಟಿಇ ಕಾಯ್ದೆ ಸಮರ್ಪಕವಾಗಿ ಜಾರಿಗೊಳಿಸಬೇಕು. ಗ್ರಾಮೀಣ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಖಾಸಗಿ ಶಾಲಾ-ಕಾಲೇಜುಗಳಿಗೆ ಸೂಕ್ತ ಕಾನೂನು ರೂಪಿಸಿ ಅಕ್ರಮ ಡೊನೇಷನ್ ಹಾವಳಿ ತಡೆಯಬೇಕೆಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಎಫ್‌ಐ ಸಂಘಟನೆ ತಾಲೂಕ ಕಾರ್ಯದರ್ಶಿ ಮಹೇಶ, ಉಪಾಧ್ಯಕ್ಷ ರಮೇಶ ವೀರಾಪುರ, ಮುಖಂಡರಾದ ಪ್ರಶಾಂತ, ಅಜ್ಮೀರ್, ಯಲ್ಲಪ್ಪ, ಯಶವಂತ, ಉಮೇಶ, ದ್ಯಾಮಣ್ಣ, ಅಮರೇಶ, ರಾಜೇಶ, ರಾಮಣ್ಣ, ವೀರೇಶ, ಸಿದ್ದಪ್ಪ ಇದ್ದರು.