ಸಂತೆ ಟೆಂಡರ್ದಾರರ ನಿಯಮ ಉಲ್ಲಂಘನೆ: ಆರೋಪ
ಲಿಂಗಸ್ಗೂರು: ಪಟ್ಟಣದ ಪುರಸಭೆ ವ್ಯಾಪ್ತಿಯ ವಾರದ ಸಂತೆ ಟೆಂಡರ್ದಾರರು ರೈತ, ವ್ಯಾಪಾರಿಗಳಿಂದ ಹೆಚ್ಚಿನ ಹಣ ವಸೂಲಿ ಮಾಡುವ ಮೂಲಕ ನಿಯಮ ಉಲ್ಲಂಘನೆ ಮಾಡಿದ್ದಾರೆಂದು ಆರೋಪಿಸಿ ಕಲ್ಯಾಣ ಕರ್ನಾಟಕ ರಕ್ಷಣಾ ವೇದಕೆ ಕಾರ್ಯಕರ್ತರು ಪುರಸಭೆ ಅಧಿಕಾರಿಗೆ ಮಂಗಳವಾರ ಮನವಿ ಸಲ್ಲಿಸಿದರು.
2013-14 ನೇ ಸಾಲಿನ ಪುರಸಭೆ ವಿವಿಧ ಬಾಬ್ತುಗಳ ವಸೂಲಿ ಗುತ್ತೇದಾರರು ಹರಾಜಿನ ಷರತ್ತು ಪಾಲಿಸದೆ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದಾರೆ. ಗುತ್ತಿಗೆ ಪಡೆದ ಗುತ್ತಿಗೆದಾರರು ನಿಗದಿತ ಸ್ಥಳಗಳಲ್ಲಿ ದರಗಳ ಫಲಕ ಹಾಕದೆ, ಪ್ರತಿನಿತ್ಯ ಬಲವಂತವಾಗಿ ಹೆಚ್ಚಿನ ಹಣ ವಸೂಲಿ ಮಾಡುತ್ತಿದ್ದರಿಂದ ಬಡ ರೈತರಿಗೆ ಹಾಗೂ ವ್ಯಾಪಾರಸ್ಥರಿಗೆ ತೊಂದರೆಯಾಗಿದೆ. ಕೂಡಲೇ ಗುತ್ತಿಗೆದಾರರ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಪುರಸಭೆ ಕಚೇರಿ ಮುಂದೆ ಧರಣಿ ನಡೆಸುವುದಾಗಿ ವೇದಿಕೆ ತಾಲೂಕು ಅಧ್ಯಕ್ಷ ಕುಬೇರ್ ಮನವಿಯಲ್ಲಿ ಎಚ್ಚರಿಕೆ ನೀಡಿದ್ದಾರೆ.