ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಟ್ಟಿ ಚಿನ್ನದ ಗಣಿಯಿಂದಲೇ ಆರ್ಸೆನಿಕ್ ಸಮಸ್ಯೆ ಉದ್ಭವ

Rashmi Kasaragodu
Updated On : 10 Jul 2013, 2:31 am

ರಾಯಚೂರು: ಜಿಲ್ಲೆಯ ವಿವಿಧೆಡೆ ಆರ್ಸೆನಿಕ್ ಯುಕ್ತ ಕುಡಿಯುವ ನೀರಿನ ಸಮಸ್ಯೆ ಉದ್ಭವವಾಗಿರುವುದಕ್ಕೆ ಹಟ್ಟಿ ಚಿನ್ನದ ಗಣಿಗಾರಿಕೆಯೇ ಕಾರಣ. ಈ ಹಿನ್ನೆಲೆ ಚಿನ್ನದ ಗಣಿ ಕಂಪನಿಯು ಇಂಥ ಗ್ರಾಮಗಳಿಗೆ ಶಾಶ್ವತ ಹಾಗೂ ಶುದ್ಧೀಕರಣ ಘಟಕದ ಮೂಲಕ ಒದಗಿಸುವ ನೀರಿನ ವೆಚ್ಚವನ್ನು ಭರಿಸಬೇಕಿದೆ. ಈ ಬಗ್ಗೆ ಸರ್ಕಾರಕ್ಕೆ ಶಿಫಾರಸು ಮಾಡಲಾಗುತ್ತದೆ ಎಂದು ಆರ್ಸೆನಿಕ್ ಯುಕ್ತ ಸಮಸ್ಯಾತ್ಮಕ ಗ್ರಾಮಗಳಿಗೆ ಮಂಗಳವಾರ ಭೇಟಿ ನೀಡಲು ಆಗಮಿಸಿದ್ದ ರಾಜ್ಯದ ತಜ್ಞರ ತಂಡದ ಮುಖ್ಯಸ್ಥ ಡಾ. ಸುದರ್ಶನ್ ಹೇಳಿದರು.
ಮಾನವಿ ತಾಲೂಕಿನ ಪಾಮನಕಲ್ಲೂರು ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಹಟ್ಟಿ ಚಿನ್ನದ ಗಣಿ ಕಂಪನಿಯಿಂದಾಗಿಯೇ ಆರ್ಸೆನಿಕ್ ಸಮಸ್ಯೆ ಉಂಟಾಗಿರುವುದನ್ನು ಭೂ ಮತ್ತು ಗಣಿ ವಿಜ್ಞಾನಿಗಳು ಒಪ್ಪಿದ್ದಾರೆ. ಸದ್ಯ ಉಂಟಾಗಿರುವ ಸಮಸ್ಯೆಗೆ ಗಣಿಗಾರಿಕೆಯೇ ಕಾರಣವಾಗಿದೆ. ಹಾಗಾಗಿ ಗಣಿ ಕಂಪನಿಯು ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳಲಾಗುವ ವೆಚ್ಚವನ್ನು ಭರಿಸಬೇಕಿದೆ ಎಂದು ತಿಳಿಸಿದರು.
ವರ್ಷಕ್ಕೆ ಎರಡು ಪರಿಶೀಲನೆ ಅವಶ್ಯ: ಜಿಲ್ಲೆಯಲ್ಲಿ ಆರ್ಸೆನಿಕ್ ಯುಕ್ತ ನೀರಿನ ಬಗ್ಗೆ ಕಾಲದಿಂದ ಕಾಲಕ್ಕೆ ತಪಾಸಣೆ ನಡೆಸುವ ಅವಶ್ಯಕತೆಯಿದೆ. ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನ ನಂತರದಲ್ಲಿ ಗ್ರಾಮಗಳಲ್ಲಿ ಲಭ್ಯವಾಗುವ ನೀರಿನ ಮಾದರಿಯನ್ನು ಪ್ರಯೋಗಾಲಯಗಳಿಗೆ ಕಳುಹಿಸಿ ಪರೀಕ್ಷಿಸಬೇಕಿದೆ. ವರ್ಷಕ್ಕೆ ಎರಡು ಬಾರಿ ಈ ರೀತಿ ಪರಿಶೀಲಿಸುವುದು ಅವಶ್ಯ ಎಂದರು. ಜಿಲ್ಲಾ ಆರೋಗ್ಯ ಇಲಾಖೆ ಸಹ ಆರ್ಸೆನಿಕ್ ಯುಕ್ತ ಸಮಸ್ಯಾತ್ಮಕ ಗ್ರಾಮಗಳಲ್ಲಿ ಕಂಡುಬಂದಿರುವ ಆರೋಗ್ಯ ಸಂಬಂಧಿ ಸಮಸ್ಯೆಗಳ ಬಗ್ಗೆ ಜನರ ಆರೋಗ್ಯ ಪರಿಶೀಲಿಸಿದ ಬಗ್ಗೆ ತಜ್ಞರ ತಂಡವು ಮಾಹಿತಿ ಪಡೆಯಲಿದೆ. ಸಮಗ್ರ ಹಾಗೂ ವೈಜ್ಞಾನಿಕ ರೀತಿಯಲ್ಲಿ ನೀರಿನಲ್ಲಿರುವ ಅಂಶಗಳ ಪತ್ತೆ ಕಾರ್ಯ ಪ್ರಯೋಗಾಲಯದಲ್ಲಿ ನಡೆಯಬೇಕಿದೆ ಎಂದು ಹೇಳಿದರು.
10 ದಿನದಲ್ಲಿ ಸರ್ಕಾರಕ್ಕೆ ವರದಿ: ಸದ್ಯ ಜಿಲ್ಲೆಯಲ್ಲಿ ಆರ್ಸೆನಿಕ್ ಯುಕ್ತ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳಿಗೆ ಜಿ.ಪಂ.ನಿಂದ ಟ್ಯಾಂಕರ್ ಮೂಲಕ ನೀರೊದಗಿಸಲಾಗುತ್ತಿದೆ. ಆದರೆ ಹಾಗೆ ಪೂರೈಸಲಾಗುವ ನೀರನ್ನು ಪರೀಕ್ಷಿಸಲಾಗಿದೆಯೇ, ಆ ನೀರು ಸುರಕ್ಷಿತವೇ ಎಂಬ ಬಗ್ಗೆಯೂ ಪರಿಶೀಲಿಸಲಾಗುತ್ತದೆ ಎಂದು ತಿಳಿಸಿದರು. ತಜ್ಞರ ತಂಡವು ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಎರಡು ದಿನಗಳ ಕಾಲ ಭೇಟಿ ಮತ್ತು ಅಧಿಕಾರಿಗಳೊಂದಿಗೆ ಸಮಾಲೋಚನೆ ನಂತರ ಮುಂದಿನ 10 ದಿನದಲ್ಲಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಿದ್ದು, ವರದಿಯಲ್ಲಿ ಗ್ರಾಮಸ್ಥರು ಬೇಡಿಕೆಯಂತೆ ಶುದ್ಧೀಕರಿಸಿದ ನೀರನ್ನು ಶೇ.50ರಷ್ಟು ಕಡಿಮೆ ದರದಲ್ಲಿ ಇಲ್ಲವೇ ಉಚಿತವಾಗಿ ಪೂರೈಸಬೇಕೆಂಬ ಅಂಶ ಸೇರಿಸಲಾಗುತ್ತದೆ ಎಂದು ಹೇಳಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement