ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಹಮಾಲರ ಉತ್ಸಾಹ ಇಮ್ಮಡಿಗೆ ಸ್ಪರ್ಧೆ; ಶ್ಲಾಘನೆ

Lingaraj Badiger
Updated On : 10 Jul 2013, 10:56 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.9
ವರ್ಷವಿಡೀ ಪರಿಶ್ರಮವಹಿಸಿ ದುಡಿವ ಹಮಾಲಿ ಕಾರ್ಮಿಕರ ಜೀವನದಲ್ಲಿ ಉತ್ಸಾಹ ಮೂಡಿಸಲು ವಿವಿಧ ಸ್ಪರ್ಧೆಗಳನ್ನು ಆಯೋಜಿಸಿ ಸ್ಫೂರ್ತಿ ತುಂಬುವುದು ಅವಶ್ಯಕ. ಈ ನಿಟ್ಟಿನಲ್ಲಿ ಹಮಾಲರ ಸಂಘದ ಕಾರ್ಯ ಶ್ಲಾಘನೀಯ ಎಂದು ಮಾಜಿ ಶಾಸಕ ಹಾಗೂ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಪಾಪಾರೆಡ್ಡಿ ಹೇಳಿದರು.
ನಗರದ ರಾಜೇಂದ್ರ ಗಂಜ್ ನಲ್ಲಿ ಮಣ್ಣೆತ್ತಿನ ಅಮಾವಾಸ್ಯೆ ನಿಮಿತ್ತ ಮಂಗಳವಾರ ಹಮಾಲರ ಕ್ಷೇಮಾಭಿವೃದ್ಧಿ ಸಂಘದಿಂದ ಆಯೋಜಿಸಿದ್ದ ಉಸುಕಿನ ಚೀಲ ಹೊರುವ ಹಾಗೂ ಭಾರವಾದ ತೂಕದ ಕಲ್ಲು ಹೊರುವ ಸ್ಪರ್ಧೆಗೆ ಚಾಲನೆ ನೀಡಿ ಮಾತನಾಡಿ, ಮಾನವ ಆರೋಗ್ಯದಿಂದ ಇದ್ದಲ್ಲಿ ಮಾತ್ರ ಬದುಕಿನಲ್ಲಿ ಏನನ್ನಾದರೂ ಸಾಧಿಸಲು ಸಾಧ್ಯ. ಹಮಾಲಿ ಕಾರ್ಮಿಕರು ಆರೋಗ್ಯ ಕಾಪಾಡಿಕೊಳ್ಳುವತ್ತ ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ದುಶ್ಚಟಗಳಿಗೆ ಬಲಿಯಾಗದಿರಿ: ಹಮಾಲಿ ಕಾರ್ಮಿಕರು ತಮ್ಮ ಕುಟುಂಬದ ಸದಸ್ಯರ ಆರೋಗ್ಯ ಕಾಪಾಡಿಕೊಳ್ಳುವತ್ತಲೂ ಗಮನಹರಿಸಬೇಕು. ಕಾರ್ಮಿಕರು ದುಶ್ಚಟಗಳಿಗೆ ಬಲಿಯಾಗಬಾರದು. ಉತ್ತಮ ಜೀವನ ರೂಪಿಸಿಕೊಳ್ಳುವ ಮೂಲಕ ಹಮಾಲಿ ಕಾರ್ಮಿಕರು ಪ್ರಗತಿ ಸಾಧಿಸುವಂತೆ ಸಲಹೆ ನೀಡಿದರು.
ನಗರಸಭೆ ಸದಸ್ಯ ದೊಡ್ಡಮಲ್ಲೇಶ್ ಮಾತನಾಡಿ, ಗ್ರಾಮೀಣ ಪ್ರದೇಶದ ಸಂಸ್ಕೃತಿ, ಸ್ಪರ್ಧೆಗಳನ್ನು ನಗರದ ಜನತೆಗೆ ಪರಿಚಯಿಸುವ ಕಾರ್ಯ ಹಮಾಲರ ಸಂಘದಿಂದ ನಡೆದಿದ್ದು, ಗ್ರಾಮೀಣ ಕಲೆಯು ಈಗಲೂ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
ಉಸುಕಿನ ಚೀಲ ಹೊರುವ ಸ್ಪರ್ಧೆಯಲ್ಲಿ ಕೇವಲ ಹಿರಿಯ ಹಮಾಲಿ ಕಾರ್ಮಿಕರಷ್ಟೇ ಅಲ್ಲದೇ ಯುವ ಹಮಾಲಿಗಳೂ ಪಾಲ್ಗೊಳ್ಳಲು ಆಸಕ್ತಿ ತೋರಬೇಕು. ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು ಎಂದರು.
ಉದ್ಘಾಟನಾ ಸಮಾರಂಭದಲ್ಲಿ ಮುನ್ನೂರು ಕಾಪು ಸಮಾಜದ ಶ್ರೀತಿಪ್ಪೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಸಮಾರಂಭದಲ್ಲಿ ಹಮಾಲರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಲಾಲಪ್ಪ, ನಗರಸಭೆ ಸದಸ್ಯ ತಿಮ್ಮಾರೆಡ್ಡಿ, ಗಂಜ್ ಮರ್ಚೆಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಬೆಲ್ಲಂ ನರಸರೆಡ್ಡಿ, ತಾಪಂ ಅಧ್ಯಕ್ಷ ಪಿ.ಚಂದ್ರಶೇಖರ್, ನಗರಸಭೆ ಸದಸ್ಯ ಶ್ರೀನಿವಾಸರೆಡ್ಡಿ, ನಿಂಬೆಕಾಯಿ ಶೇಖರ ರೆಡ್ಡಿ, ವೀರೇಶ್, ಪುಂಡ್ಲ ನರಸರೆಡ್ಡಿ ಸೇರಿದಂತೆ ಅನೇಕರಿದ್ದರು.
ಸ್ಪರ್ಧೆಯ ವಿಜೇತರು: ನಗರದಲ್ಲಿ ಮಂಗಳವಾರ ನಡೆದ 110ಕೆಜಿ ಉಸುಕಿನ ಚೀಲ ಹೊರುವ ಸ್ಪರ್ಧೆಯಲ್ಲಿ ಗಂಜ್ ಹಮಾಲರ ಸಂಘದ ಬಜಾರಪ್ಪ ಬಿಜನಗೇರಿ ಅವರು 3304 ಅಡಿ ಸಾಗುವ ಮೂಲಕ ಪ್ರಥಮ ಸ್ಥಾನ ಗಳಿಸಿದರು. ಅದೇ ರೀತಿ 2971 ಅಡಿ ಸಾಗುವ ಮೂಲಕ ಮರ್ರಿ ರವಿ ಜಲಾಲನಗರ ದ್ವಿತೀಯ ಸ್ಥಾನ ಗಳಿಸಿದರು. ನರಸಿಂಹಲು ಅರಸಿಗೇರಾ ಅವರು 2694 ಅಡಿ ದೂರ ಸಾಗುವ ಮೂಲಕ  ಮೂರನೇ ಸ್ಥಾನ ಗಳಿಸಿದರು. ಬ್ಯಾಗಾರ್ ನರಸಿಂಹಲು ಅವರು 2400 ಅಡಿ ದೂರ ಸಾಗುವ ಮೂಲಕ ನಾಲ್ಕನೇ ಸ್ಥಾನ ಗಳಿಸಿದರು.
ಅದೇ ರೀತಿ ಗಂಜ್ ನ ಮಹಿಳಾ ಕಾರ್ಮಿಕರಿಗೆ ಆಯೋಜಿಸಿದ್ದ ಎರಡೂ ಕೈಯಲ್ಲಿ 10-10ಕೆಜಿ ತೂಕದ ಕಲ್ಲು ಹೊತ್ತು ಸಾಗುವ ಸ್ಪರ್ಧೆಯಲ್ಲಿ ಯಲ್ಲಮ್ಮ ಗೋವಿಂದಪ್ಪ 3219.3 ಅಡಿ ಸಾಗುವ ಮೂಲಕ ಪ್ರಥಮ ಸ್ಥಾನ ಗಳಿಸಿದರು. ಕುರುಬರ್ ಲಿಂಗಮ್ಮ ತಿಪ್ಪಣ್ಣ 3030 ಅಡಿ ಸಾಗಿ ದ್ವಿತೀಯ ಸ್ಥಾನ ಗಳಿಸಿದರು. ಅಂಜಿನಮ್ಮ ಜಂಬಣ್ಣ ಅವರು 2976 ಅಡಿ ಸಾಗಿ ಮೂರನೇ ಸ್ಥಾನ ಪಡೆದರು. ಬಸಮ್ಮ ಅವರು ನಾಲ್ಕನೇ ಸ್ಥಾನದಲ್ಲಿ 2096 ಅಡಿ ಕ್ರಮಿಸಿ ಬಹುಮಾನ ಗಳಿಸಿದರು.
ವಿವಿಧ ವಿಜೇತರು: ಇಂಡಸ್ಟ್ರಿಯಲ್ ಹಮಾಲರಿಗೆ ಆಯೋಜಿಸಿದ್ದ ಭಾರವಾದ ಉಸುಕಿನ ಚೀಲ ಹೊರುವ ಸ್ಪರ್ಧೆಯಲ್ಲಿ ಈರಣ್ಣ ಭೀಮಯ್ಯ ಅವರು 3626.9 ಅಡಿ ದೂರ ಸಾಗಿ ಪ್ರಥಮ, ತಿಮ್ಮಪ್ಪ ಹುಸೇನಪ್ಪ ಅವರು 3400 ಅಡಿ ಸಾಗಿ ಎರಡನೇ ಸ್ಥಾನ, ಮರ್ಚೆಡ್ ವೀರೇಶ್ 2934.8 ಅಡಿ ಸಾಗಿ ಮೂರನೇ ಸ್ಥಾನ ಗಳಿಸಿದರು.
ರೈಸ್ ಮಿಲ್ ಹಮಾಲರ ಸಂಘದ ಹಮಾಲರಿಗೆ ನಡೆಸಿದ ಸ್ಪರ್ಧೆಯಲ್ಲಿ ಅಗಸರ ನರಸಪ್ಪ 2200 ಅಡಿ ಸಾಗಿ ಪ್ರಥಮ, ವಡವಾಟಿ ಚಂದ್ರಪ್ಪ 1900 ಅಡಿ ಸಾಗಿ ದ್ವಿತೀಯ, ಅಗಸರ ತಿಮ್ಮಪ್ಪ 1400 ಅಡಿ ಸಾಗಿ ಮೂರನೇ ಸ್ಥಾನ ಪಡೆದರು. ಸ್ಪರ್ಧೆಗಳ ವಿಜೇತರಿಗೆ ಮಾಜಿ ಶಾಸಕ ಪಾಪಾರೆಡ್ಡಿ ಹಾಗೂ ಹಮಾಲರ ಸಂಘದ ಪ್ರಧಾನ ಕಾರ್ಯದರ್ಶಿ ಲಾಲಪ್ಪ ಬಹುಮಾನ ವಿತರಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement