ಒಪೆಕ್ ಆಸ್ಪತ್ರೆ ಪುನಾರಂಭಕ್ಕೆ ಆಗ್ರಹಿಸಿ ಕರವೇ ಮನವಿ
ಕ.ಪ್ರ. ವಾರ್ತೆ, ರಾಯಚೂರು, ಜು.10
ಕಳೆದೊಂದು ವರ್ಷದಿಂದ ಮುಚ್ಚಿರುವ ಒಪೆಕ್ ಆಸ್ಪತ್ರೆಯ ಪುನಾರಂಭಕ್ಕೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರಿಗೆ ಮನವಿ ಸಲ್ಲಿಸಿದರು.
ನಗರಕ್ಕೆ ಸಚಿವೆ ಆಗಮಿಸಿದ ವೇಳೆ ಮನವಿ ಸಲ್ಲಿಸಿದ ಕಾರ್ಯಕರ್ತರು, ನಗರದ ಒಪೆಕ್ ಆಸ್ಪತ್ರೆ ಮುಚ್ಚಿ ಒಂದುವರ್ಷ ಕಳೆದರೂ ಸರ್ಕಾರ ಆಸ್ಪತ್ರೆ ಪುನಾರಂಭಕ್ಕೆ ಯಾವುದೇ ಕ್ರಮ ಕೈಗೊಂಡಿಲ್ಲ. ಅದರಿಂದಾಗಿ ಈ ಭಾಗದಲ್ಲಿ ರೋಗಿಗಳು ಪರದಾಡುವಂತಾಗಿದೆ ಎಂದು ಆರೋಪಿಸಿದರು.
ಸದ್ಯ ರೋಗಿಗಳು ಹೈದರಾಬಾದ್, ಕರ್ನೂಲು ಮತ್ತಿತರ ನಗರಗಳಿಗೆ ಚಿಕಿತ್ಸೆಗೆಂದು ತೆರಳುವಂಥ ಸ್ಥಿತಿಯಿದೆ. ಜಿಲ್ಲೆಯ ವಿವಿಧೆಡೆ ಡೆಂಘೀ ಮತ್ತಿತರೆ ಮಾರಕ ರೋಗದಿಂದ ಅನೇಕರು ಬಳಲುತ್ತಿದ್ದು, ಸೂಕ್ತ ಚಿಕಿತ್ಸೆ ದೊರೆಯದೇ ತೊಂದರೆ ಎದುರಿಸುವಂತಾಗಿದೆ. ಕಾರಣ ಕೂಡಲೇ ಒಪೆಕ್ ಆಸ್ಪತ್ರೆ ಪುನಾರಂಭಕ್ಕೆ ಸಚಿವರು ಸರ್ಕಾರದ ಮೇಲೆ ಒತ್ತಡ ಹೇರುವಂತೆ ಮನವಿ ಮಾಡಿದರು. ಈ ಸಂದರ್ಭ ಸಂಘಟನೆ ಜಿಲ್ಲಾಧ್ಯಕ್ಷ ವಿನೋದರೆಡ್ಡಿ ಮತ್ತಿತರ ಕಾರ್ಯಕರ್ತರು ಇದ್ದರು.