ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

'ಖಾತ್ರಿ' ತಪ್ಪೆಸಗಿದರೆ ಕ್ರಿಮಿನಲ್ ಕೇಸ್

Lingaraj Badiger
Updated On : 11 Jul 2013, 10:59 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.10
ಗುಳೆ ಹೋಗಿರುವವರ ಸಮೀಕ್ಷೆಗೆ ಸೂಚನೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅಕ್ರಮ ಎಸಗಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಆದೇಶ. ಉದ್ಯೋಗ ಖಾತ್ರಿ ಸಮರ್ಪಕ ಅನುಷ್ಠಾನ ಮತ್ತು ಡೆಂಘೀ ಜ್ವರ ತಡೆಗೆ ಜಾಗೃತಿ ಕಾರ್ಯಕ್ರಮ ಸಮಿತಿ ರಚಿಸಲು ಸಲಹೆ.
ನಗರದಲ್ಲಿ ಬುಧವಾರ ಜಿಲ್ಲಾ ಉಸ್ತುವಾರಿ ಸಚಿವೆ ಉಮಾಶ್ರೀ ಅವರು ಜಿಲ್ಲೆಯ ಅಧಿಕಾರಿಗಳಿಗೆ ನೀಡಿದ ಖಡಕ್ ಆದೇಶದ ಸರಮಾಲೆಗಳಿವು.
ಜಿಪಂ ಸಭಾಂಗಣದಲ್ಲಿ ಬುಧವಾರ ಅವರು ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಉದ್ಯೋಗ ಖಾತ್ರಿ ಕೃಷಿ ಕೂಲಿಕಾರ್ಮಿಕರು ಗುಳೆ ಹೋಗುವುದನ್ನು ತಡೆಯಲು ರೂಪಿಸಲಾಗಿದೆ. ಅಧಿಕಾರಿಗಳಿಗೆ ಜಿಲ್ಲೆಯಿಂದ ಮಹಾನಗರಗಳಿಗೆ ಗುಳೆ ಹೋಗಿರುವವರ ಸಂಖ್ಯೆಯ ಮಾಹಿತಿಯಿರುವುದು ಅಗತ್ಯ ಎಂದರು.
ಈ ವೇಳೆ ಜಿಪಂ ಎಇಇ ಮಂಜುನಾಥ್ ಸಭೆಯಲ್ಲಿ ಮಾತನಾಡಿ, ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು.
ಇದರಿಂದ ತೀವ್ರ ಅಸಮಾಧಾನಗೊಂಡ ಸಚಿವೆ ಉಮಾಶ್ರೀ ಅವರು, ಜಿಲ್ಲೆಯಿಂದ ಗುಳೆ ಹೋದವರ ಬಗ್ಗೆ ಜಿಲ್ಲಾಡಳಿತದ ಬಳಿ ಮಾಹಿತಿಯಿದೆಯೇ ಎಂದು ಪ್ರಶ್ನಿಸಿದರು. ಅದಕ್ಕೆ ಅಧಿಕಾರಿ ನಿರುತ್ತರರಾದಾಗ ಕೂಡಲೇ ಗುಳೆ ಹೋದವರ ಬಗ್ಗೆ ಮೊದಲು ಮಾಹಿತಿ ಸಂಗ್ರಹಿಸಲು ಆದೇಶಿಸಿದರು.
ಹೆಚ್ಚಿನ ಕೂಲಿ ಕಾರಣ: ಗುಳೆ ತಡೆಯಲು ಉದ್ಯೋಗ ಖಾತ್ರಿ ಯೋಜನೆಯ ಅನುಷ್ಠಾನಕ್ಕೆ ಹೆಚ್ಚಿನ ಒತ್ತು ನೀಡುವಂತೆಯೂ ಅವರು ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಜ್ಞಾನಪ್ರಕಾಶ್, ಉದ್ಯೋಗ ಖಾತ್ರಿ ಯೋಜನೆ ಅಡಿ ಕಡಿಮೆ ಕೂಲಿ ನಿಗದಿಯಾಗಿದೆ. ಆದರೆ ಮಹಾನಗರಗಳಲ್ಲಿ ಹೆಚ್ಚಿನ ಕೂಲಿ ದೊರೆಯುತ್ತಿರುವುದರಿಂದ ಕೂಲಿಕಾರ್ಮಿಕರು ಗುಳೆ ಹೋಗುತ್ತಿದ್ದಾರೆಂದು ವಿವರಿಸಿದರು.
ಈ ವೇಳೆ ಮಾತನಾಡಿದ ಜಿಪಂ ಉಪಕಾರ್ಯದರ್ಶಿ ಎಂಡಿ ಯುಸೂಫ್, ಉದ್ಯೋಗ ಖಾತ್ರಿ ಕೂಲಿಕಾರ್ಮಿಕರ ಬ್ಯಾಂಕ್ ಖಾತೆಗೆ ಕೂಲಿ ಹಣ ಜಮಾ ಮಾಡಲು ಸೂಚನೆ ಬಂದಿರುವ ಹಿನ್ನೆಲೆ ಬ್ಯಾಂಕ್ ಖಾತೆ ತೆರೆಯುವುದು ವಿಳಂಬವಾಗುತ್ತಿದೆ ಎಂದು ಸಭೆಗೆ ತಿಳಿಸಿದರು.
ಬ್ಯಾಂಕ್ ಖಾತೆ ತೆರೆಯುವ ಕಾರ್ಯವನ್ನು ಜಿಪಂ ಅಧಿಕಾರಿಗಳು ಮೊದಲಾದ್ಯತೆಯಲ್ಲಿ ಕೈಗೆತ್ತಿಕೊಳ್ಳಬೇಕು. ಕೂಲಿಕಾರ್ಮಿಕರಿಗೆ ಸಮರ್ಪಕ ಉದ್ಯೋಗ ನೀಡುವುದು ಅಧಿಕಾರಿಗಳ ಉದ್ದೇಶವಾಗಬೇಕು. ಯೋಜನೆ ಅನುಷ್ಠಾನ ವೈಫಲ್ಯಕ್ಕೆ ಅಧಿಕಾರಿಗಳೇ ಹೊಣೆಯಾಗಬಾರದು ಎಂದು ಎಚ್ಚರಿಸಿದರು.
ಉದ್ಯೋಗ ಖಾತ್ರಿ ಯೋಜನೆ ಅಡಿ ಅಕ್ರಮ ಎಸಗಿದವರಿಗೆ ಕೂಡಲೇ ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಮೂಲಕ ಬಿಸಿ ಮುಟ್ಟಿಸುವ ಕಾರ್ಯ ಅಧಿಕಾರಿಗಳು ಮಾಡಬೇಕು. ಗ್ರಾಮಸಭೆ ನಡೆಸಿ ಕ್ರಿಯಾ ಯೋಜನೆ ತಯಾರಿಸಿದರೆ ಮಾತ್ರ ಅಂಥ ಕಾಮಗಾರಿಗಳಿಗೆ ಜಿಪಂ ಒಪ್ಪಿಗೆ ನೀಡಬೇಕು ಎಂದು ಸೂಚಿಸಿದರು.
ಶಂಕಿತ ಡೆಂಘೀ ಪ್ರಕರಣ: ಜಿಲ್ಲೆಯಲ್ಲಿ ಡೆಂಘೀ ಜ್ವರದ ಪ್ರಕರಣಗಳ ಬಗ್ಗೆ ಸಭೆಗೆ ಮಾಹಿತಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಡಾ.ವೆಂಕಟೇಶ ನಾಯಕ, ಇದುವರೆಗೆ ಜಿಲ್ಲೆಯಲ್ಲಿ 7 ಶಂಕಿತ ಡೆಂಘೀ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರ ಸಾವು ಸಂಭವಿಸಿದೆ ಎಂದು ಸಭೆಗೆ ವಿವರಿಸಿದರು.
ಈ ವೇಳೆ ಮಧ್ಯಪ್ರವೇಶಿಸಿ ಮಾತನಾಡಿದ ನಗರ ಶಾಸಕ ಡಾ.ಶಿವರಾಜ್ ಪಾಟೀಲ್, ಡೆಂಘೀ ಜ್ವರದ ಬಗ್ಗೆ ಜಿಲ್ಲಾಡಳಿತದ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ. ವಾಸ್ತವ ಸ್ಥಿತಿಯಲ್ಲಿ ಸಾವಿನ ಸಂಖ್ಯೆಯು 250ಕ್ಕೂ ಹೆಚ್ಚು ಎಂದು ಆರೋಪಿಸಿದರು.
ನಗರದಲ್ಲಿ ಅಗತ್ಯ ಚಿಕಿತ್ಸೆ ಸೌಲಭ್ಯಗಳಿಲ್ಲದ್ದರಿಂದ ಬಳ್ಳಾರಿಗೆ ಡೆಂಘೀ ಪೀಡಿತರನ್ನು ಕಳಿಸುವಂಥ ಸ್ಥಿತಿಯಿದೆ. ರಿಮ್ಸ್ ವೈದ್ಯಕೀಯ ಕಾಲೇಜಿನಲ್ಲಿ ರಕ್ತಕಣ ಪ್ರತ್ಯೇಕಿಸುವ ಘಟಕವಿದ್ದರೂ, ಅದರ ಸ್ಥಾಪನೆ ಮತ್ತಿತರೆ ಕಾರಣಗಳಿಗೆ ವಿಳಂಬವಾಗಿದೆ ಎಂದು ಸಭೆಗೆ ದೂರಿದರು.
ಸಿಂಧನೂರು ಶಾಸಕ ಹಂಪನಗೌಡ ಬಾದರ್ಲಿ ಸಭೆಯಲ್ಲಿ ಮಾತನಾಡಿ, ಜಿಲ್ಲೆಯ ಪ್ರತಿಯೊಂದೂ ಹಳ್ಳಿಯಲ್ಲಿ 20 ರಿಂದ 30 ಜನ ಡೆಂಘೀಯಿಂದ ಬಳಲುತ್ತಿದ್ದಾರೆ. ಆಡಳಿತ ಸುಳ್ಳು ಹೇಳಿ ಹೊಣೆಗಾರಿಕೆಯಿಂದ ಪಾರಾಗಲಾರದು ಎಂದು ಎಚ್ಚರಿಸಿದರು.
ಜಾಗೃತಿ ಮೂಲಕ ನಿಯಂತ್ರಣ: ಈ ವೇಳೆ ಸಚಿವೆ ಉಮಾಶ್ರೀ ಮಾತನಾಡಿ, ಡೆಂಘೀ ಜ್ವರದ ಬಗ್ಗೆ ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೂಡಲೇ ಅಧಿಕಾರಿಗಳಿರುವ ಸಮಿತಿ ರಚಿಸಿ ಕಾರ್ಯಪ್ರವೃತ್ತರಾಗುವಂತೆ ಸೂಚಿಸಿ, ಜಾಗೃತಿ ಮೂಲಕ ಮಾತ್ರ ರೋಗ ನಿಯಂತ್ರಣ ಸಾಧ್ಯ ಎಂದು ಸಲಹೆ ನೀಡಿದರು.
ಶಿಕ್ಷಣ ಇಲಾಖೆಯ ಮೇಲಿನ ಚರ್ಚೆಯಲ್ಲಿ ಡಿಡಿಪಿಐ ಪರಮೇಶ್ ಮಾತನಾಡಿ, ಪ್ರಸಕ್ತ ವರ್ಷ 1ರಿಂದ 5ನೇ ತರಗತಿಗೆ 225492 ವಿದ್ಯಾರ್ಥಿಗಳನ್ನು ದಾಖಲಾತಿ ಮಾಡಿಕೊಳ್ಳಲಾಗಿದೆ. 13,23,042 ಪಠ್ಯಪುಸ್ತಕಗಳ ಅವಶ್ಯಕತೆಯಿದ್ದು, ಈ ಪೈಕಿ 11,85,135 ಪಠ್ಯಪುಸ್ತಕಗಳನ್ನು ಒದಗಿಸಲಾಗಿದೆ. 1288 ಶಿಕ್ಷಕರ ಹುದ್ದೆ ಖಾಲಿಯಿವೆ. ಪ್ರಸಕ್ತ ವರ್ಷ 6 ಮತ್ತು 9ನೇ ತರಗತಿಯ ಕೆಲ ವಿಷಯಗಳ ಪಠ್ಯಕ್ರಮದಲ್ಲಿನ ಬದಲಾವಣೆಯಿಂದಾಗಿ ಪಠ್ಯಪುಸ್ತಕಗಳಿನ್ನೂ ಬಂದಿಲ್ಲ. ಹೀಗಾಗಿ ಅಧ್ಯಯನಕ್ಕೆ ಅಡಚಣೆಯಾಗಿದೆ ಎಂದು ಸಭೆಗೆ ವಿವರಿಸಿದರು.
ಈ ಬಗ್ಗೆ ಸರ್ಕಾರದೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿದ್ದು, ಪಠ್ಯಪುಸ್ತಕಗಳನ್ನು ಪಡೆಯಲು ಕ್ರಮ ಕೈಗೊಂಡಿರುವುದಾಗಿ ಸಭೆಗೆ ತಿಳಿಸಿದರು.
ವಿವಿಧ ಇಲಾಖೆಗಳ ಪ್ರಗತಿ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಸಭೆಯಲ್ಲಿ ಜಿಪಂ ಅಧ್ಯಕ್ಷೆ ಲಲಿತಮ್ಮ, ಉಪಾಧ್ಯಕ್ಷ ಕೆ.ಶರಣಪ್ಪ, ಜಿಲ್ಲಾಧಿಕಾರಿ ಎಸ್.ಎನ್.ನಾಗರಾಜು, ಎಸ್ಪಿ ಎಸ್.ಬಿ.ಬಿಸನಳ್ಳಿ ಮತ್ತಿತರರು ಇದ್ದರು. ಶಾಸಕರಾದ ವೆಂಕಟೇಶ ನಾಯಕ, ಹಂಪನಗೌಡ ಬಾದರ್ಲಿ, ಪ್ರತಾಪಗೌಡ ಪಾಟೀಲ್, ಹಂಪಯ್ಯ ನಾಯಕ, ಮಾನಪ್ಪ ವಜ್ಜಲ್ ಚರ್ಚೆಯಲ್ಲಿ ಭಾಗವಹಿಸಿದ್ದರು. ವಿವಿಧ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement