ಬಸ್ ನಿಲುಗಡೆ: ಪ್ರಯಾಣಿಕರಿಗೆ ತೊಂದರೆ: ಕೆಜೆಪಿ ಆರೋಪ
ಸಿಂಧನೂರು: ನಗರಕ್ಕೆ ಬರುವ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳನ್ನು ಬಸ್ ನಿಲ್ದಾಣದ ಬಳಿ ಇರುವ ನಂದಿನಿ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸುವ ಮೂಲಕ ಪ್ರಯಾಣಿಕರಿಗೆ ತೊಂದರೆ ಕೊಡುತ್ತಿದ್ದಾರೆ ಎಂದು ಕೆಜೆಪಿ ಮುಖಂಡರಾದ ಶರಣಬಸವ ಸಾನಬಾಳ, ಚನ್ನನಗೌಡ ಪೊಲೀಸ್ ಪಾಟೀಲ್, ವೀರಭದ್ರಪ್ಪ, ಯಶ್ವಂತಪ್ಪ ಕೋವಿ ಮತ್ತು ಶರಣಪ್ಪ ಚನ್ನಳ್ಳಿ ಮತ್ತಿತರರು ಆರೋಪಿಸಿದ್ದಾರೆ. ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು ಹೊಟೇಲ್‌ನವರು ಕಂಡಕ್ಟರ್ ಮತ್ತು ಡ್ರೈವರ್‌ಗೆ ಉಚಿತ ಊಟ ಕೊಡುತ್ತಾರೆನ್ನುವ ಕಾರಣಕ್ಕೆ ಪ್ರಯಾಣಿಕರಿಗೆ ತೊಂದರೆ ಕೊಡುವುದು ಸರಿಯಲ್ಲ. ಬಸ್ ನಿಲ್ದಾಣಕ್ಕೆ ಹೋಗುವ ಪೂರ್ವದಲ್ಲಿ ಹೊಟೇಲ್ ಮುಂಭಾಗದಲ್ಲಿ ಬಸ್‌ಗಳನ್ನು ನಿಲ್ಲಿಸುವುದರಿಂದ ಪ್ರಯಾಣಿಕರು ಲಗೇಜ್‌ಗಳನ್ನು ಹೊತ್ತುಕೊಂಡು ಬಸ್ ನಿಲ್ದಾಣಕ್ಕೆ ಹೋಗಲು ಪ್ರಯಾಸಪಡಬೇಕಾಗಿದೆ. ನಂದಿನಿ ಹೊಟೇಲ್‌ನಿಂದ ಬಸ್ ನಿಲ್ದಾಣಕ್ಕೆ ಹೋಗಲು ಆಟೋ ಚಾಲಕರು ರು. 15 ರಿಂದ 20 ರೂಪಾಯಿ ಹಣ ಪೀಕುತ್ತಾರೆ. ಅಲ್ಲದೆ ಹೊಟೇಲ್ ಪಕ್ಕದಲ್ಲಿ ನಾಗರಿಕರು ವಾಸ ಮಾಡುತ್ತಿದ್ದು, ಪ್ರಯಾಣಿಕರು ಮನೆಯ ಮುಂಭಾಗದಲ್ಲಿ ಮೂತ್ರ ವಿಸರ್ಜನೆ ಮಾಡುತ್ತಿದ್ದಾರೆ. ಇದರಿಂದಾಗಿ ಅಲ್ಲಿನ ನಿವಾಸಿಗಳಿಗೆ ಉಪದ್ರವ ಉಂಟಾಗಿದೆ. ಯಾವುದೇ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಂದಿನಿ ಹೊಟೇಲ್ ಮುಂಭಾಗದಲ್ಲಿ ನಿಲ್ಲಿಸಕೂಡದು ಎಂದು ಒತ್ತಾಯಿಸಿದ್ದಾರೆ.