ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

ಮಾನವ ಅಭಿವೃದ್ಧಿ ವರದಿ ತಯಾರಿಕೆ ಕಾರ್ಯಾಗಾರ

Lingaraj Badiger
Updated On : 11 Jul 2013, 11:00 am

ಸಿಂಧನೂರು: ಮಾನವ ಅಭಿವೃದ್ಧಿಯಲ್ಲಿ ದೇಶದ ಪ್ರಗತಿಯನ್ನು ಕಾಣಬಹುದಾಗಿದೆ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಕನಿಷ್ಟ ಸೌಲಭ್ಯಗಳು ದೊರಕಿದಾಗ ಮಾತ್ರ ಅದು ಸಾಧ್ಯವಾಗುತ್ತದೆ. ಈ ಬಗ್ಗೆ ತಿಳುವಳಿಕೆ ಮೂಡಿಸುವುದು ಕಾರ್ಯಾಗಾರದ ಉದ್ದೇಶವಾಗಿದೆ ಎಂದು ಧಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಟಿ. ಬಾಗಲಕೋಟೆ ಹೇಳಿದರು.
ಆರ್ಥಿಕ ಸದೃಢತೆ: ಅವರು ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಪಂಚಾಯಿತಿ, ಕರ್ನಾಟಕ ವಿಶ್ವವಿದ್ಯಾಲಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ ಮಾನವ ಅಭಿವೃದ್ಧಿ ವರದಿ ತಯಾರಿಕೆ ಕುರಿತು ತಿಳುವಳಿಕೆ ಕಾರ್ಯಾಗಾರದಲ್ಲಿ ಉಪನ್ಯಾಸ ನೀಡಿದರು.
ಸದ್ಯದ ಸ್ಥಿತಿಯಲ್ಲಿ ಭಾರತ ಆರ್ಥಿಕವಾಗಿ ಸದೃಢತೆ ಸಾಧಿಸುತ್ತಿರಬಹುದು. ಆದರೆ ಇಲ್ಲಿಯ ಮಾನವ ಅಭಿವೃದ್ಧಿ ಇನ್ನೂ ಆಗಿಲ್ಲ. ಬಡತನ, ನಿರುದ್ಯೋಗ, ಭಿಕ್ಷಾಟನೆ ಮುಂತಾದ ಸಾಮಾಜಿಕ ಸಮಸ್ಯೆಗಳು ಇಂದಿಗೂ ಜೀವಂತವಾಗಿವೆ. ಆದ್ದರಿಂದ ಆರ್ಥಿಕ ಬೆಳವಣಿಗೆ, ಸಾಮಾಜಿಕ ಪ್ರಗತಿ, ಸಮಾನತೆ, ಸಂಪನ್ಮೂಲಗಳ ದಕ್ಷ ಬಳಕೆ, ನಿರಂತರತೆ ಕಾಪಾಡಿಕೊಳ್ಳುವುದು ಕಾರ್ಯಾಗಾರದ ಗುರಿಯಾಗಿದೆ ಎಂದರು.
ಶುದ್ಧ ನೀರು ಪೂರೈಕೆ: ಜಿಲ್ಲಾ ಪಂಚಾಯಿತಿ ಉಪವಿಭಾಗದ ಎಇಇ ಬಿ.ಆರ್. ಗೌಡೂರು ಮಾತನಾಡಿ ತಾಲೂಕಿನ ಬಳಗಾನೂರು, ಬೂತಲದಿನ್ನಿ, ಎಲೆಕೂಡ್ಲಗಿ, ಉದ್ಬಾಳ (ಯು), ಗೌಡನಬಾವಿ, ಹುಲ್ಲೂರು, ನಂಜಲದಿನ್ನಿ, ಸುಲ್ತಾನಪೂರಕ್ಯಾಂಪ್ ಸೇರಿದಂತೆ ಎಂಟು ಗ್ರಾಮಗಳಲ್ಲಿ ಜೀವಕ್ಕೆ ಅಪಾಯ ತರುವ ಆರ್ಸೇನಿಕ್ ಅಂಶಯುಕ್ತ ಕುಡಿಯುವ ನೀರನ್ನು ಜನರು ಸೇವಿಸುತ್ತಿದ್ದು, ಹುಲ್ಲೂರು ಮತ್ತು ಬೂತಲದಿನ್ನಿ ಹೊರತುಪಡಿಸಿ ಉಳಿದ ಗ್ರಾಮಗಳಲ್ಲಿ ಈ ನೀರು ಸರಬರಾಜು ಬಂದ್ ಮಾಡಲಾಗಿದೆ. ಟ್ಯಾಂಕರ್ ಮೂಲಕ ಶುದ್ಧ ನೀರು ಪೂರೈಕೆ ಮಾಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಆ ಗ್ರಾಮಗಳಲ್ಲೂ ಈ ಸಮಸ್ಯೆ ನಿವಾರಿಸಲಾಗುವುದು ಎಂದು ಭರವಸೆ ನೀಡಿದರು.
ತಾಪಂ ಅಧ್ಯಕ್ಷೆ ಬಸಮ್ಮ ಕೊಟ್ರಪ್ಪ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಉಪಾಧ್ಯಕ್ಷ ನಾಗಪ್ಪ ಗೋರ್ಮಸಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement