ರಾಮತ್ನಾಳ: ಟಿಸಿ ಅಳವಡಿಕೆಗೆ ಆಗ್ರಹ
ಸಿಂಧನೂರು: ತಾಲೂಕಿನ ರಾಮತ್ನಾಳ ಗ್ರಾಮ ಒಂದು ವಾರದಿಂದ ಕಗ್ಗತ್ತಲಮಯವಾಗಿದೆ. ಟ್ರಾನ್ಸ್ಫಾರ್ಮರ್ ಸುಟ್ಟಿರುವುದರಿಂದ ವಿದ್ಯುತ್ ಸ್ಥಗಿತಗೊಂಡಿದೆ. ವಿದ್ಯುತ್ ಸೌಲಭ್ಯ ಕಲ್ಪಿಸುವಂತೆ ಜೆಸ್ಕಾಂ ಅಧಿಕಾರಿಗಳನ್ನು ವಿನಂತಿಸಿದರೆ ಹಣ ಸಂಗ್ರಹ ಮಾಡಿಕೊಂಡು ಬಂದರೆ ಟಿ.ಸಿ. ಕೊಡುವುದಾಗಿ ಅಧಿಕಾರಿಗಳು ಹೇಳುತ್ತಿದ್ದಾರೆಂದು ದಲಿತ ರಕ್ಷಣಾ ವೇದಿಕೆಯ ಅಧ್ಯಕ್ಷ ಹೊಳೆಯಪ್ಪ ಆಪಾದಿಸಿದ್ದಾರೆ.
ಬಿಎ, ಎಂಎ, ಪಿಯುಸಿ ಪರೀಕ್ಷೆಗಳು ನಡೆಯುತ್ತಿದ್ದು, ವಿದ್ಯಾರ್ಥಿಗಳು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ. ಇಡೀ ಗ್ರಾಮವೇ ಕತ್ತಲಾದರೆ, ವಿದ್ಯಾರ್ಥಿಗಳ ಪರಿಸ್ಥಿತಿ ಏನು ಎಂದು ಪ್ರಶ್ನಿಸಿರುವ ಹೊಳೆಯಪ್ಪ ತಕ್ಷಣ ಟ್ರಾನ್ಸ್ ಫಾರ್ಮರ್ ಅಳವಡಿಸಿ ವಿದ್ಯುತ್ ಸೌಲಭ್ಯ ಕಲ್ಪಿಸದಿದ್ದರೆ, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಸೇರಿ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕುವುದು ಅನಿವಾರ್ಯವಾಗುತ್ತದೆ ಎಂದು ಎಚ್ಚರಿಸಿದ್ದಾರೆ.