ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ರಾಯಚೂರು

371 ಕಲಂ ಹಿನ್ನೆಲೆ: ಬೆಳಗಾವಿ ವಿವಿ ನೇಮಕಾತಿ ತಡೆಗೆ ಆಗ್ರಹ

Lingaraj Badiger
Updated On : 12 Jul 2013, 10:59 am

ಕನ್ನಡಪ್ರಭ ವಾರ್ತೆ, ರಾಯಚೂರು, ಜು.11
ಬೆಳಗಾವಿಯಲ್ಲಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು ರಾಜ್ಯ ಸರ್ಕಾರದ ಆದೇಶ ಉಲ್ಲಂಘಿಸಿ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆ ತಡೆಯುವಂತೆ ಹೈ-ಕ ಹೋರಾಟ ಸಮಿತಿ ಆಗ್ರಹಿಸಿದೆ.
ಈ ಕುರಿತು ಗುರುವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿರುವ ಸಮಿತಿಯ ಕಾರ್ಯಕರ್ತರು, ಕೇಂದ್ರ ಸರ್ಕಾರ ಹೈ-ಕಕ್ಕೆ ಸಂಬಂಧಿಸಿ, ಭಾರತ ಸಂವಿಧಾನದ 371ನೇ ಕಲಂ ಅಡಿ ವಿಶೇಷ ಸ್ಥಾನಮಾನ ನೀಡಿಕೆಗೆ ಮುಂದಾಗಿದೆ. ರಾಜ್ಯ ಸರ್ಕಾರ ಕಾನೂನು ರಚಿಸುವ ಹಂತದಲ್ಲಿದೆ. ಈ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ನಿಗದಿಗೊಳಿಸುವವರೆಗೆ ಹೈ-ಕ ಪ್ರದೇಶದಲ್ಲಿರುವ ಎಲ್ಲ ಸರ್ಕಾರಿ ಇಲಾಖೆ, ಮಂಡಳಿ, ವಿಶ್ವವಿದ್ಯಾಲಯಗಳಲ್ಲಿನ ಎಲ್ಲ ವರ್ಗಗಳ ಹುದ್ದೆಗಳ ನೇಮಕಾತಿಗೆ ಪ್ರಕ್ರಿಯೆ ಸ್ಥಗಿತಗೊಳಿಸಲು ಆದೇಶಿಸಿದೆ.
ಆದರೆ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಸರ್ಕಾರದ ಆದೇಶ ಉಲ್ಲಂಘಿಸಿ ತಮ್ಮ ವಿವಿ ಅಡಿ ಹೈ-ಕ ವ್ಯಾಪ್ತಿಯ ಹುದ್ದೆಗಳ ನೇಮಕಾತಿ ನಡೆಸುತ್ತಿದೆ. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ನೇಮಕಾತಿಗೆ ಅನುಮತಿ ನೀಡಿರುವ ಸರ್ಕಾರದ ಧೋರಣೆ ಅನುಮಾನಕ್ಕೆ ಎಡೆಮಾಡಿದೆ ಎಂದು ದೂರಿದರು.
ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಿದಂತೆ ನೇಮಕಗೊಂಡ ಅಭ್ಯರ್ಥಿಗಳು ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ರಾಜ್ಯದ ಯಾವುದೇ ಭಾಗದಲ್ಲಿ ವರ್ಗಾವಣೆಗೆ ಅವಕಾಶ ಮಾಡಿಕೊಟ್ಟಿರುವುದು ಕೂಡಾ ಹೈ-ಕಕ್ಕೆ ಮೋಸಮಾಡುವ ಸಂಚು ಎಂದು ಭಾವಿಸುವಂತಾಗಿದೆ ಎಂದು ಆರೋಪಿಸಿದರು.
ಹೈ-ಕಕ್ಕೆ ಸಂವಿಧಾನದ ವಿಶೇಷ ಸ್ಥಾನಮಾನ ಕಾನೂನು ಜಾರಿಯಾಗುವವರೆಗೆ ಸರ್ಕಾರದ ಆದೇಶದಂತೆ ನೇಮಕಾತಿ ಪ್ರಕ್ರಿಯೆ ಸ್ಥಗಿತಗೊಳಿಸಲು ಸೂಚಿಸುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ಹೈ.ಕ. ಹೋರಾಟ ಸಮಿತಿ ಉಪಾಧ್ಯಕ್ಷ ಡಾ. ರಜಾಕ್ ಉಸ್ತಾದ್, ಕೆ.ಎಸ್. ಸೈಯೀದುದ್ದೀನ್, ಪವನ್ ಪಾಟೀಲ್, ಅನ್ವರ ಹುಸೇನ್, ರವಿಂದ್ರ ಜಲ್ದಾರ ಮತ್ತಿತರರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement