ಅಂತಾರಾಷ್ಟ್ರೀಯ ಮಟ್ಟದ ವಸ್ತು ಪ್ರದರ್ಶನ
ಸಿಂಧನೂರು: ಕರ್ನಾಟಕ ಛಾಯಾಚಿತ್ರ ಗ್ರಾಹಕರ ಸಂಘದಿಂದ ಬೆಂಗಳೂರಿನ ಕೋರಮಂಗಲ ಒಳಾಂಗಣ ಸ್ಟೇಡಿಯಂನಲ್ಲಿ ಜುಲೈ 12ರಿಂದ 14ರವರೆಗೆ ಪ್ರಪ್ರಥಮ ಅಂತಾರಾಷ್ಟ್ರೀಯ ಮಟ್ಟದ ಪ್ರದರ್ಶನವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕಾ ಪೋಟೋಗ್ರಾಫಸರ್ ಮತ್ತು ವೀಡಿಯೋ ಗ್ರಾಫಸರ್ ಅಸೋಸಿಯೇಷನ್ ಅಧ್ಯಕ್ಷ ಕೆ. ವೆಂಕಟೇಶ ಕೆಂಗಲ್ ತಿಳಿಸಿದ್ದಾರೆ.
ರಾಯಚೂರು ಜಿಲ್ಲಾ ಉಸ್ತುವಾರಿ ಸಚಿವರಾದ ಉಮಾಶ್ರೀ, ಮೀನುಗಾರಿಕಾ ಸಚಿವರಾದ ಅಭಯ್ ಜೈನ್ ವಸ್ತು ಪ್ರದರ್ಶನವನ್ನು ಉದ್ಘಾಟಿಸಲಿದ್ದಾರೆ. ಸಿಂಧನೂರಿನಿಂದ ಸುಮಾರು 50ಕ್ಕೂ ಹೆಚ್ಚು ಛಾಯಾಗ್ರಾಹಕರು ಭಾಗವಹಿಸಲಿದ್ದಾರೆಂದು ತಿಳಿಸಿದ್ದಾರೆ.
--
ವಿದ್ಯುತ್ ಸ್ಪರ್ಶ; ಮಹಿಳೆ ಸಾವು
ರಾಯಚೂರು: ದೇವದುರ್ಗ ತಾಲೂಕಿನ ಗಣೇಕಲ್ ಗ್ರಾಮದಲ್ಲಿ ಆಕಸ್ಮಿಕವಾಗಿ ವಿದ್ಯುತ್ ಸ್ಪರ್ಶದಿಂದ ಮಹಿಳೆ ಸಾವಿಗೀಡಾಗಿದ್ದಾಳೆ.
ಮೃತಳನ್ನು ದೇವೇಂದ್ರಮ್ಮ ಎಂದು ಗುರುತಿಸಲಾಗಿದೆ. ಈಕೆ ಮನೆಯ ಮುಂದಿನ ವಿದ್ಯುತ್ ತಂತಿಗೆ ತಂತಿ ಜೋಡಿಸಲು ತೆರಳಿದ ತನ್ನ ಪತಿಗೆ ವಿದ್ಯುತ್ ತಗುಲಿದಾಗ ಆತನನ್ನು ಬಿಡಿಸಲು ಹೋದ ಈಕೆಗೆ ವಿದ್ಯುತ್ ಸ್ಪರ್ಶವಾಗಿ ಸಾವಿಗೀಡಾಗಿದ್ದಾಳೆ. ಈ ಕುರಿತು ಜಾಲಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.